ಲೋಕಸಭಾ ಚುನಾವಣೆ 2024: ಬೀಡ್‌ನಲ್ಲಿ ಮುಂಡೆ ಕುಟುಂಬಕ್ಕೆ ಒಲಿಯುವುದೇ ಮರಾಠ ಸಮುದಾಯ?

By Kannadaprabha News  |  First Published Apr 26, 2024, 8:11 AM IST

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆಗೆ ಟಿಕೆಟ್‌ ನೀಡಿದ್ದರೆ, ಶರದ್‌ ಪವಾರ್‌ ಬಣದ ಎನ್‌ಸಿಪಿ ಮರಾಠ ಸಮುದಾಯದ ಪ್ರಭಾವಿ ನಾಯಕ ಭಜರಂಗ್‌ ಸೋನವಾನೆ ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿದ್ದು ಇಬ್ಬರ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ.


ಬೀಡ್‌(ಏ.25):  ಮನೋಜ್‌ ಕುಮಾರ್‌ ಜಾರಂಗೆ ನೇತೃತ್ವದಲ್ಲಿ ನಡೆದ ಮರಾಠ ಸಮುದಾಯದ ಹೋರಾಟದಲ್ಲಿ ಹಲವು ಘರ್ಷಣೆಗಳಿಗೆ ಕಾರಣವಾಗಿದ್ದ ಬೀಡ್‌ ಕ್ಷೇತ್ರದಲ್ಲಿ ಈಗ ಚುನಾವಣಾ ಕಾವು ಹೆಚ್ಚಿದೆ. ಬಿಜೆಪಿಯಿಂದ ಹಾಲಿ ಸಂಸದೆ ಪ್ರೀತಂ ಮುಂಡೆ ಸೋದರಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಪಂಕಜಾ ಮುಂಡೆಗೆ ಟಿಕೆಟ್‌ ನೀಡಿದ್ದರೆ, ಶರದ್‌ ಪವಾರ್‌ ಬಣದ ಎನ್‌ಸಿಪಿ ಮರಾಠ ಸಮುದಾಯದ ಪ್ರಭಾವಿ ನಾಯಕ ಭಜರಂಗ್‌ ಸೋನವಾನೆ ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿದ್ದು ಇಬ್ಬರ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ.

ಹೇಗಿದೆ ಬಿಜೆಪಿ ಅಲೆ?

Tap to resize

Latest Videos

2009ರಿಂದ ಬೀಡ್‌ ಕ್ಷೇತ್ರವು ಗೋಪಿನಾಥ್‌ ಮುಂಡೆ ಕುಟುಂಬದ ಹಿಡಿತದಲ್ಲಿದ್ದು ಭದ್ರಕೋಟೆಯಾಗಿ ಪರಿಣಮಿಸಿದೆ. 2009 ಮತ್ತು 2014ರಲ್ಲಿ ಗೋಪಿನಾಥ್‌ ಮುಂಡೆ ಗೆಲುವು ಸಾಧಿಸಿದ್ದರೆ, ಅವರ ಅಕಾಲಿಕ ಮರಣದಿಂದಾಗಿ ನಡೆದ 2014ರ ಉಪಚುನಾವಣೆ ಮತ್ತು 2019ರಲ್ಲಿ ಅವರ ಪುತ್ರಿ ಪ್ರೀತಂ ಮುಂಡೆ ಗೆಲುವು ಸಾಧಿಸಿದ್ದಾರೆ. ಈ ಬಾರಿ ಬಿಜೆಪಿ ಅವರ ಸೋದರಿ ಪಂಕಜಾ ಮುಂಡೆಗೆ ಟಿಕೆಟ್‌ ನೀಡುವ ಮೂಲಕ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದೆ. ಪಂಕಜಾ ಈಗಾಗಲೇ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದ ಅನುಭವವಿದ್ದು, ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ತಾವು ಎರಡು ಬಾರಿ ಶಾಸಕಿಯಾಗಿದ್ದ ಪಾರ್ಲಿ ಕ್ಷೇತ್ರದಲ್ಲಿ 2019ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಎನ್‌ಸಿಪಿಯಿಂದ ಗೆಲುವು ಸಾಧಿಸಿದ್ದ ಸೋದರ ಧನಂಜಯ್‌ ಅಜಿತ್‌ ಬಣ ಸೇರಿದ್ದು, ಈ ಬಾರಿ ಅನಿವಾರ್ಯವಾಗಿ ತಮ್ಮ ಸೋದರಿಗೆ ಬೆಂಬಲಿಸಬೇಕಾದ ಅಗತ್ಯವಿದೆ. ಅಲ್ಲದೆ ಕ್ಷೇತ್ರದಲ್ಲಿ 3.5 ಲಕ್ಷ ವಂಜಾರಿ ಸಮುದಾಯದ ಮತಗಳು ಮುಂಡೆ ಕುಟುಂಬದ ಬೆನ್ನೆಲುಬಾಗಿ ಪ್ರತಿಬಾರಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಆದರೆ ಕಳೆದ ವರ್ಷ ಕ್ಷೇತ್ರದಲ್ಲಿ ಮರಾಠ ಸಮುದಾಯದ ಹೋರಾಟದ ಸಮಯದಲ್ಲಿ ಘರ್ಷಣೆ ನಡೆದಿರುವುದು ಅವರಿಗೆ ಮುಳ್ಳಾಗುವ ಸಾಧ್ಯತೆಯಿದೆ. ಜೊತೆಗೆ ಪ್ರತಿಸ್ಪರ್ಧಿಯಾಗಿ ಮರಾಠ ಸಮುದಾಯದ ನಾಯಕನೇ ನಿಂತಿರುವುದರಿಂದ ಅವರ ಮನವೊಲಿಸುವಲ್ಲಿ ಪಂಕಜಾ ಬೆವರು ಹರಿಸಬೇಕಾದ ಅಗತ್ಯವಿದೆ.

ಕರ್ನಾಟಕ ರೀತಿ ದೇಶದಲ್ಲಿ ಮುಸ್ಲಿಂ ಮೀಸಲಾತಿಗೆ 'ಕಾಂಗ್ರೆಸ್‌' ಪ್ಲಾನ್: ಪ್ರಧಾನಿ ಮೋದಿ

ಎನ್‌ಸಿಪಿ ಗೆಲ್ಲಬಲ್ಲುದೇ?

15 ವರ್ಷಗಳ ಕಾಲ ಮೂಂಡೆ ಕುಟುಂಬದ ಹಿಡಿತದಿಂದ ನಲುಗಿರುವ ಬೀಡ್‌ ಕ್ಷೇತ್ರವನ್ನು ಗೆಲ್ಲಲೇಬೇಕು ಎಂಬ ಛಲದೊಂದಿಗೆ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಿರುಸಿನ ಪ್ರಚಾರ ನಡೆಸಿ ಮತದಾರರನ್ನು ಸೆಳೆಯುತ್ತಿದೆ. ಹಾಗಾಗಿ ಪ್ರಬಲ ಮರಾಠ ಸಮುದಾಯದ ನಾಯಕ ಭಜರಂಗ್‌ ಸೋನವಾನೆ ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿದೆ. ಹಾಗೆಯೇ ಈ ಬಾರಿ ಕ್ಷೇತ್ರದಲ್ಲಿ ಪಂಕಜಾ ಮುಂಡೆ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ಕುರಿತು ಜನರಿಗೆ ಮನವೊಲಿಕೆ ಮಾಡಿ ಮತಯಾಚಿಸುತ್ತೇವೆ ಎಂದು ಕ್ಷೇತ್ರದ ಅಭ್ಯರ್ಥಿ ಸ್ಪಷ್ಟವಾಗಿ ತಿಳಿಸಿದ್ದರೂ ಕ್ಷೇತ್ರದಲ್ಲಿ ಬರೋಬ್ಬರಿ 5.5 ಲಕ್ಷ ಮರಾಠ ಸಮುದಾಯಗಳನ್ನು ಸೆಳೆಯುವ ನಿಟ್ಟಿನಲ್ಲಿ ಅದೇ ಸಮುದಾಯದ ಅಭ್ಯರ್ಥಿಯನ್ನು ನಿಲ್ಲಿಸಿರುವುದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರ ಮರಾಠ ಸಮುದಾಯದ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆಕ್ರೋಶ ಸಮುದಾಯದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಇದೇ ವಿಚಾರವಾಗಿ ಕಳೆದ ವರ್ಷ ಕ್ಷೇತ್ರದಲ್ಲಿ ಘರ್ಷಣೆ ನಡೆದಾಗ ಸಮುದಾಯದ ಜನರಿಗೆ ಪೊಲೀಸರು ಲಾಠಿಚಾರ್ಜ್‌ ಮಾಡಿರುವುದು ಇವರಿಗೆ ವರವಾಗಿ ಪರಿಣಮಿಸುವ ಸಾಧ್ಯತೆಯಿದೆ. ಅಲ್ಲದೆ ಮುಂಡೆ ಕುಟುಂಬದ ಹಿಡಿತದಲ್ಲಿರುವ ವಂಜಾರಿ ಸಮುದಾಯದ ಮತಗಳನ್ನು ವಿಭಜಿಸುವ ನಿಟ್ಟಿನಲ್ಲಿ ಪ್ರಬಲ ವಂಜಾರಿ ಸಮುದಾಯದ ನಾಯಕ ಬಬನ್‌ ಗೀತೆಯನ್ನು ಸೆಳೆದಿರುವುದು ಪಕ್ಷದ ಬಲ ಹೆಚ್ಚಿಸಿದೆ.

ಸ್ಪರ್ಧೆ ಹೇಗೆ?

ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಸಿಗುವ ನಿರೀಕ್ಷೆಯೊಂದಿಗೆ ಶರದ್‌ ಪವಾರ್‌ ಬಣದ ಎನ್‌ಸಿಪಿ ಸೇರಿದ್ದ ಹಿರಿಯ ಮರಾಠ ಸಮುದಾಯದ ನಾಯಕ ವಿನಾಯಕ ಮೇಟೆ ಅವರ ಪತ್ನಿ ಜ್ಯೋತಿ ಅವರ ಮುನಿಸು ಪಕ್ಷಕ್ಕೆ ಯಾವ ರೀತಿ ಪರಿಣಾಮ ಉಂಟು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮೂಲಗಳ ಪ್ರಕಾರ ಅವರು ವಂಚಿತ್‌ ಬಹುಜನ್‌ ಅಘಾಡಿಯಿಂದ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅವರು ಸ್ಪರ್ಧಿಸಿದ್ದೇ ಆದಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಪ್ರಬಲ ಮರಾಠ ಸಮುದಾಯದ ಇಬ್ಬರು ಅಭ್ಯರ್ಥಿಗಳ ನಡುವೆ ಮುಂಡೆ ಕುಟುಂಬ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಮತ್ತಷ್ಟು ಶ್ರಮ ಪಡಬೇಕಾಗಬಹುದು.

2ನೇ ಹಂತದ ಲೋಕಸಭಾ ಚುನಾವಣೆ: ಇಂದು ರಾಹುಲ್‌ ಗಾಂಧಿ ಭವಿಷ್ಯ

ಸ್ಟಾರ್‌ ಕ್ಷೇತ್ರ: ಬೀಡ್‌

ರಾಜ್ಯ: ಮಹಾರಾಷ್ಟ್ರ

ಮತದಾನದ ದಿನ: ಮೇ.13
ವಿಧಾನಸಭಾ ಕ್ಷೇತ್ರಗಳು: 6

ಪ್ರಮುಖ ಅಭ್ಯರ್ಥಿಗಳು

ಪಂಕಜಾ ಮುಂಡೆ
ಭಜರಂಗ್‌ ಸೋನವಾನೆ
ಅಶೋಕ್‌ ಸುಖ್‌ದೇವ್‌

2019ರ ಫಲಿತಾಂಶ

ಗೆಲುವು: ಬಿಜೆಪಿ- ಪ್ರೀತಂ ಮುಂಡೆ
ಸೋಲು: ಎನ್‌ಸಿಪಿ- ಭಜರಂಗ್‌ ಸೋನವಾನೆ

click me!