Karnataka Assembly Elections 2023: ಬಂಡಾಯ ಬಿಸಿ, ಕಾಂಗ್ರೆಸ್‌ಗೆ ಮತ ವಿಭಜನೆ ಭೀತಿ..!

Published : Apr 09, 2023, 10:30 PM IST
Karnataka Assembly Elections 2023: ಬಂಡಾಯ ಬಿಸಿ, ಕಾಂಗ್ರೆಸ್‌ಗೆ ಮತ ವಿಭಜನೆ ಭೀತಿ..!

ಸಾರಾಂಶ

ಈ ಬಾರಿ ಕಾಂಗ್ರೆಸ್‌ ಗೆಲುವಿನ ದಡ ಸೇರುವುದು ಸರಳ ಮಾತಲ್ಲ. ಭಾರೀ ಹೋರಾಟವನ್ನೇ ಮಾಡಬೇಕಾಗುತ್ತದೆ. ಬಿಜೆಪಿ ಯಾರಿಗೆ ಟಿಕೆಟ್‌ ನೀಡಲಿದೆ ಎಂಬುವುದರ ಮೇಲೆಯೂ ಈ ಹೋರಾಟ ಕೂಡ ನಿರ್ಧರಿತವಾಗುತ್ತದೆ.

ಗುರುರಾಜ ವಾಳ್ವೇಕರ

ಜಮಖಂಡಿ(ಏ.09): ಪಟವರ್ಧನ ನಾಡಿನಲ್ಲಿ ಇದೀಗ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಕಾಂಗ್ರೆಸ್‌ ಟಿಕೆಟ್‌ ಆನಂದ ನ್ಯಾಮಗೌಡ ಅವರಿಗೆ ಸಿಕ್ಕ ಮೇಲಂತೂ ಕೈಗೆ ಬಂಡಾಯದ ಮುನ್ಸೂಚನೆ ಕಾಣಿಸುತ್ತಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಗೆಲುವಿನ ದಡ ಸೇರುವುದು ಸರಳ ಮಾತಲ್ಲ. ಭಾರೀ ಹೋರಾಟವನ್ನೇ ಮಾಡಬೇಕಾಗುತ್ತದೆ. ಬಿಜೆಪಿ ಯಾರಿಗೆ ಟಿಕೆಟ್‌ ನೀಡಲಿದೆ ಎಂಬುವುದರ ಮೇಲೆಯೂ ಈ ಹೋರಾಟ ಕೂಡ ನಿರ್ಧರಿತವಾಗುತ್ತದೆ.

ದಿ.ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ತೆರವು ಕಂಡ ಶಾಸಕ ಸ್ಥಾನಕ್ಕೆ ಅವರ ಹಿರಿಯ ಪುತ್ರ ಆನಂದ ನ್ಯಾಮಗೌಡ 2018ರ ಉಪಚುನಾವಣೆಗೆ ಸ್ಪರ್ಧೆ ಮಾಡಿ ಅನುಕಂಪದ ಆಧಾರದ ಮೇಲೆ ಗೆಲವು ಸಾಧಿಸಿದ್ದರು. ಆದರೆ, ಆನಂದ ನ್ಯಾಮಗೌಡ ತಮ್ಮ ತಂದೆ ದಿ. ಸಿದ್ದು ನ್ಯಾಮಗೌಡ ಅವರ ಆಪ್ತರನ್ನು ಹಾಗೂ ಹಿರಿಯ ಮುಖಂಡರನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಪ್ರಬಲವಾಗಿ ಕೇಳಿ ಬಂದಿದ್ದವು. ಇದಾದ ನಂತರ ಆನಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಿದ್ದರ ಪರಿಣಾಮವಾಗಿ ಜಮಖಂಡಿಯಲ್ಲಿ ಕೈ ಇನ್ನಷ್ಟುಪ್ರಬಲವಾಗಿದೆ. ಹೀಗಾಗಿ ವರಿಷ್ಠರು ಅವರಿಗೆ ಟಿಕೆಟ್‌ ಘೋಷಿಸಿದೆ.

ನನ್ನನ್ನು ಸಿಎಂ ಮಾಡಲು ಅಧಿಕ ಮತದಿಂದ ಗೆಲ್ಲಿಸಿ: ಸಚಿವ ಮುರುಗೇಶ್‌ ನಿರಾಣಿ

ಅನುಕಂಪದ ಗೆಲವು:

ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ, ಕೇಂದ್ರ ಸಚಿವರಾಗಿದ್ದ ದಿ.ಸಿದ್ದು ನ್ಯಾಮಗೌಡರ ಪ್ರಾಬಲ್ಯದ ಈ ಕೇತ್ರ ಇಂದಿಗೂ ಅವರ ಕುಟುಂಬದ ಹಿಡಿತದಲ್ಲಿದೆ. ಆದರೆ, ದಿ.ಸಿದ್ದು ನ್ಯಾಮಗೌಡ ಅವರ ನಿಧನದ ನಂತರ ನಡೆದ ಚುನಾವಣೆಯಲ್ಲಿ ಆನಂದ ಗೆಲವಿಗೆ ಇಡೀ ಸರ್ಕಾರವೇ (ಅಂದಿನ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ) ಜಮಖಂಡಿಯಲ್ಲಿ ಠಿಕಾಣಿ ಹಾಕಿ ಗೆಲವಿಗೆ ಶ್ರಮಿಸಿತ್ತು. ಚುನಾವಣೆ ಉಸ್ತುವಾರಿಯನ್ನು ಆಗಿನ ಡಿಸಿಎಂ ಜಿ.ಪರಮೇಶ್ವರ ಹೊತ್ತುಕೊಂಡಿದ್ದರು. ದಿ.ಸಿದ್ದು ನ್ಯಾಮಗೌಡ ಅವರ ಅಭಿವೃದ್ಧಿ ಕಾರ್ಯಗಳನ್ನೇ ಹೇಳಿಕೊಂಡು ಪ್ರಚಾರ ಮಾಡಿದ್ದರು. ಹೀಗಾಗಿ ಸರ್ವಶಕ್ತಿಯನ್ನು ಹಾಕಿದ ಪರಿಣಾಮ ಆನಂದ ವಿಜಯಶಾಲಿಯಾಗಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರಾಭವಗೊಂಡಿದ್ದರು.

ಸಿದ್ದುಗೆ ಲಾಭ ಮಾಡಿದ್ದ ಪಕ್ಷೇತರ ಅಭ್ಯರ್ಥಿ:

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಕಾಂತ ಕುಲಕರ್ಣಿ ಕಣಕ್ಕೆ ಇಳಿದಿದ್ದರು. ಇದೇ ವೇಳೆ ಮುರಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ಹಾಗೂ ಕಾಂಗ್ರೆಸ್‌ ಟಿಕೆಟ್‌ ವಂಚಿತ ಶ್ರೀಶೈಲ ದಳವಾಯಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಹೀಗಾಗಿ ಮತಗಳು ವಿಭಜನೆಯಾಗಿ ನ್ಯಾಮಗೌಡ ಅವರ ಗೆಲುವಿನ ಅಂತರವನ್ನು ಕಡಿಮೆ ಮಾಡಿತ್ತು. ಆದರೆ, ದುರಾದೃಷ್ಟಎಂಬಂತೆ ಮೇ 28, 2018ರಂದು ನಡೆದ ರಸ್ತೆ ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರು ಮೃತಪಟ್ಟರು. ನಂತರ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಆನಂದ ನ್ಯಾಮಗೌಡ 39 ಸಾವಿರ ಮತಗಳ ಅಂತರದಿಂದ ವಿಜಯಸಾಧಿಸಿದ್ದರು.

ಬಾದಾಮಿ: ಚಿಮ್ಮನಕಟ್ಟಿಗೆ ಟಿಕೆಟ್‌, ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

ಬಂಡಾಯದ ಬಿಸಿ:

ಈ ಬಾರಿ ಕೂಡ ಆನಂದ ಗೆಲುವಿಗೆ ಸಾಕಷ್ಟುಹೋರಾಟ ಮಾಡಬೇಕಿದೆ. ಜಮಖಂಡಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ಮುಖಂಡ ಸುಶೀಲಕುಮಾರ ಬೆಳಗಲಿ ಅವರಿಗೆ ಟಿಕೆಟ್‌ ಸಿಗದೇ ಇರುವ ಕಾರಣಕ್ಕೆ ಅವರು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಬೆಳಗಲಿ ಅವರಿಗೆ ಈಗಾಗಲೇ ರಾಜ್ಯ ರೈತ ಸಂಘ-ಎಂಐಎಂ ಸಂಘಟನೆಗಳ ಬೆಂಬಲ ಸೂಚಿಸಿವೆ. ಹೀಗಾಗಿ ಕಾಂಗ್ರೆಸ್‌ ಮತಗಳು ಒಡೆಯುವ ಸಾಧ್ಯತೆಯೂ ಇದೆ. ಈ ನಡುವೆ ಬಿಜೆಪಿ ತಮ್ಮ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ. ಯಾರಿಗೆ ಟಿಕೆಟ್‌ ನೀಡುತ್ತಾರೆ ಎಂಬುವುದರ ಮೇಲೆಯೂ ಕಾಂಗ್ರೆಸ್‌ ಅಭ್ಯರ್ಥಿಯ ಹೋರಾಟ ನಿರ್ಧಾರವಾಗಲಿದೆ. ಅಲ್ಲದೇ ಸುಶೀಲಕುಮಾರ ಬೆಳಗಲಿ ಅವರು ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ ಮತಗಳು ಒಡೆದು ಬಿಜೆಪಿಗೂ ವರವಾದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ