2018ರಲ್ಲಿ ಪಬ್ಲಿಕ್ ಶಾಲೆ ಆರಂಭಿಸಿ 2 ಸಾವಿರ ಕೋಟಿ ನೀಡಿದೆ. ಆದರೆ, ಬಿಜೆಪಿ ಬಂದ ಬಳಿಕ ಅದನ್ನ ಮುಂದುವರಿಸಲಿಲ್ಲ ಎಂದು ಟೀಕಿಸಿದರ ಕುಮಾರಸ್ವಾಮಿ
ಚಿಕ್ಕಬಳ್ಳಾಪುರ(ನ.24): ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿ, ಉತ್ತಮ ವೈದ್ಯರನ್ನು ನೇಮಿಸಿ, ಖಾಸಗಿ ಆಸ್ಪತ್ರೆ ರೀತಿ 24 ಗಂಟೆ ಚಿಕಿತ್ಸೆ ಸಿಗುವಂತೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ನಡೆಸಿ ಬುಧವಾರ ಶ್ರೀನಿವಾಸಪುರ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಶ್ರೀ ಕ್ಷೇತ್ರ ಕೈವಾರಕ್ಕೆ ಅವರು ಆಗಮಿಸಿದರು. ಯೋಗಿ ನಾರಾಯಣ ತಾತಯ್ಯನವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದಿನ ನಿತ್ಯ ನನ್ನ ಬಳಿಗೆ ಅನೇಕರು ಸಹಾಯ ಕೇಳಿಕೊಂಡು ಬರುತ್ತಾರೆ. ನಾನು ಬೇರೆ ರಾಜಕಾರಣಿಗಳ ರೀತಿ ಖಾಸಗಿ ಶಾಲೆ ಇಟ್ಟುಕೊಂಡಿಲ್ಲ ಅಥವಾ ಉದ್ಯಮಿಯೂ ಅಲ್ಲ. ಪ್ರತಿ ದಿನ ಸಹಾಯ ಮಾಡಬೇಕು ಅಂದರೆ ಕನಿಷ್ಠ 50 ಲಕ್ಷ ಬೇಕು. ನಮಗೆ ಒಂದು ಬಾರಿ ಸಂಪೂರ್ಣ ಬಹುಮತದ ಅವಕಾಶ ಕೊಡಿ. ನಿಮಗೆ ಉತ್ತಮ ಬದುಕು ಕಟ್ಟಿಕೊಡುತ್ತೇವೆ. 60 ವರ್ಷ ಮೇಲ್ಪಟ್ಟವರಿಗೆ ಕೊನೆಯವರೆಗೂ ಪಿಂಚಣಿ ಕೊಡಲಾಗುವುದು. ವಿಧವಾ ವೇತನ, ಅಂಗವಿಕಲರಿಗೆ ಪಿಂಚಣಿ ಹಣ ಹೆಚ್ಚಳ ಮಾಡಲಾಗುವುದು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು. 2018ರಲ್ಲಿ ಪಬ್ಲಿಕ್ ಶಾಲೆ ಆರಂಭಿಸಿ 2 ಸಾವಿರ ಕೋಟಿ ನೀಡಿದೆ. ಆದರೆ, ಬಿಜೆಪಿ ಬಂದ ಬಳಿಕ ಅದನ್ನ ಮುಂದುವರಿಸಲಿಲ್ಲ ಎಂದು ಟೀಕಿಸಿದರು.
PANCHARATNA RATHAYATRA: : ತುಂತರು ಮಳೆ ಲೆಕ್ಕಿಸದೇ ಪಂಚರತ್ನ ರಥಯಾತ್ರೆಗೆ ಹರಿದು ಬಂತು ಜನಸಾಗರ
ರೈತನಿಂದ 25 ಸಾವಿರ ರು.ಚೆಕ್ :
ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ನಾರಾಯಣ ಸ್ವಾಮಿ ಅವರ ಪುತ್ರ ಚಂದ್ರಶೇಖರ್ ತಮ್ಮ ಸಾಲ ಮನ್ನಾ ಆಗಿದ್ದಕ್ಕೆ ಕುಮಾರಸ್ವಾಮಿ ಹೋರಾಟಕ್ಕೆ ಬೆಂಬಲವಾಗಿ 25 ಸಾವಿರ ರು. ಚೆಕ್ ನೀಡಿ ಗಮನ ಸೆಳೆದರು. ಚೆಕ್ ಸ್ವೀಕರಿಸಿದ ಕುಮಾರಸ್ವಾಮಿ, ಇಂತವರಿಂದಾಗಿ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ ಎಂದರು.