ಕಾಂಗ್ರೆಸ್‌ಗೆ ಪ್ರತ್ಯುತ್ತರ ಕೊಡುವ ಶಕ್ತಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟಕ್ಕಿದ್ದು, ಮೋದಿಯವರ ನಾಯಕತ್ವದಲ್ಲಿ ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮೂಲಕ ರಾಜ್ಯದಲ್ಲಿ ೨೮ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿಳಿಸಿದರು.
ಹಾಸನ (ಡಿ.05): ಕಾಂಗ್ರೆಸ್‌ಗೆ ಪ್ರತ್ಯುತ್ತರ ಕೊಡುವ ಶಕ್ತಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟಕ್ಕಿದ್ದು, ಮೋದಿಯವರ ನಾಯಕತ್ವದಲ್ಲಿ ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮೂಲಕ ರಾಜ್ಯದಲ್ಲಿ ೨೮ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿಳಿಸಿದರು. ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ವಿಧಾನಸಭೆಗಾಗಿ ನಡೆದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಂದಿದ್ದು, ಮೊನ್ನೆ ನಾನು ಸಮೀಕ್ಷೆಗಳ ಬಗ್ಗೆ ಮಾತನಾಡಿದ್ದೆ. ಎನ್‌ಡಿಎ ಪರ್ಯಾಯವಾಗಿ ಐಎನ್ ಡಿಐಎ ನ್ನು ೪೬ ಪ್ರಾದೇಶಿಕ ಪಕ್ಷಗಳು ಸೇರಿ ಮಾಡಿಕೊಂಡಿವೆ.
ದೇಶವನ್ನಾಳಿದ ಕಾಂಗ್ರೆಸ್ ನೇತೃತ್ವದಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ನಮ್ಮ ಪಕ್ಷ ಜೆಡಿಎಸ್‌ನಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಬಿಜೆಪಿಯನ್ನ ಹೊರತುಪಡಿಸಿ ಎಲ್ಲಾ ಸೆಕ್ಯುಲರ್ ಪಾರ್ಟಿಯವರೂ ಕರ್ನಾಟಕದಲ್ಲಿ ಭಾಗಿಯಾಗಿದ್ರು. ಆದ್ರೆ ಈಗ ನಮ್ಮನ್ನ ಹೊರಗಿಡಲೇಬೇಕು ಎಂದು ತೀರ್ಮಾನ ಮಾಡಿದ್ದು ಯಾರು? ಕುಮಾರಸ್ವಾಮಿ ಸರ್ಕಾರ ತೆಗೆಯಲು ಕಾರಣ ಯಾರು? ಯಾರು ನಮ್ಮನ್ನ ಹೊರಗಿಡಲು ತೀರ್ಮಾನ ಮಾಡಿದ್ದಾರೋ ಅವರೆ ಹೊರಗಿಟ್ಟಿದ್ದಾರೆ. ನಿತೀಶ್ ಕುಮಾರ್‌ಗೆ ಜೆಡಿಎಸ್ ಈ ಸಂಘಟನೆ ಸೇರಿದರೆ ನಾವು ಹೊರಗಿರುತ್ತೆವೆ ಎಂದರು.
ಪ್ರಧಾನಿ ಮೋದಿ ತುಂಬಾ ಎತ್ತರದ, ಜಗತ್ತು ಗೌರವಿಸುವ ನಾಯಕ: ಸಿ.ಟಿ.ರವಿ
ನಮ್ಮನ್ನು ಸ್ವಾಗತಿಸಿದ್ದಾರೆ: ಮೋದಿ ಮತ್ತು ಶಾ ನಮ್ಮನ್ನ ಸ್ವಾಗತ ಮಾಡಿದ್ದಾರೆ. ನಮ್ಮನ್ನ ಹೊರ ದೂಡಿದ್ದು ಕಾಂಗ್ರೆಸ್. ಜೆಡಿಎಸ್ ಲೆಕ್ಕಕ್ಕಿಲ್ಲ, ಆಟಕ್ಕಿಲ್ಲ ಕೆಲ ದಿನಗಳಲ್ಲಿ ಜೆಡಿಎಸ್ ಇರೋದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಲಘುವಾಗಿ ಮಾತನಾಡಿದರು. ಮೋದಿಯವರು ವೈಯುಕ್ತಿಕವಾಗಿ ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್‌ನ ನಡವಳಿಕೆಯನ್ನ ಸೂಕ್ಷ್ಮವಾಗಿ ಗಮನಿಸಿ ನಮ್ಮನ್ನ ಅವರ ಜೊತೆ ಸ್ವಾಗತಿಸಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಕರ್ನಾಟಕದಲ್ಲಿ ಮೋದಿ, ಶಾ ಜೊತೆ ಕೈ ಜೋಡಿಸಿ ಕಾಂಗ್ರೆಸ್ ವಿರುದ್ಧ ಹೋರಾಡುವುದರಲ್ಲಿ ಯಾವ ಮುಚ್ಚುಮರೆ ಇಲ್ಲ.
ಫಲಿತಾಂಶ ಬಂತು ಎಂಬ ಕಾರಣಕ್ಕೆ ನಾನು ಹೀಗೆ ಹೇಳುತ್ತಿಲ್ಲ. ೨೦೧೮ರಿಂದ ಆದ ಬೆಳವಣಿಗೆ ಮೇಲೆ ನಾನು ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ನಮ್ಮ ಪಕ್ಷ ಉಳಿಯಬೇಕು ಹಾಗೂ ಜೆಡಿಎಸ್ ಉಳಿಯಬೇಕು. ಜನತಾ ಪರಿವಾರ ಪ್ರಾರಂಭವಾದಾಗಿನಿಂದ ಈ ಪಕ್ಷ ಉಳಿಸಿಕೊಂಡು ಬಂದಿದ್ದೇನೆ. ಜೊತೆಗೆ ಅಂದಿನಿಂದಲೂ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿ ಮುಸ್ಲಿಮರು, ಮಹಿಳೆ, ನಾಯಕ ಎಲ್ಲರಿಗೂ ಮೀಸಲಾತಿ ನೀಡಿ ಪಕ್ಷ ಕಟ್ಟಿದ್ದೇನೆ ಎಂದರು.
ಶೀಘ್ರ ಶಾ ಭೇಟಿ: ಮೋದಿಯವರು, ಶಾ, ನಡ್ಡಾ, ವಿಜಯೇಂದ್ರ, ಅಶೋಕ್ ಎಲ್ಲರೊಂದಿಗೆ ಚರ್ಚಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ೨೮ ಕ್ಕೆ ೨೮ ಸ್ಥಾನ ಗೆಲ್ಲುತ್ತೇವೆ ಎಂಬ ಹಮ್ಮು-ಬಿಮ್ಮು ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧೆ ಮಾಡಿ ಐಕ್ಯತೆಯಿಂದ ಕೆಲಸ ಮಾಡುತ್ತೇವೆ. ಮುಂದಿನ ವಾರ ಅಮಿತ್ ಶಾ ಅವರು ಕುಮಾರಸ್ವಾಮಿಯನ್ನ ಕರೆಯಬಹುದು. ದೆಹಲಿಗೆ ಹೋಗಿ ಕುಮಾರಸ್ವಾಮಿ ಚರ್ಚಿಸುತ್ತಾರೆ. ಕಾಂಗ್ರೆಸ್‌ಗೆ ಪ್ರತ್ಯುತ್ತರ ಕೊಡೊ ಶಕ್ತಿ ಜೆಡಿಎಸ್, ಬಿಜೆಪಿಗೆ, ಮೋದಿಯವರ ನಾಯಕತ್ವಕ್ಕೆ ಇದೆ ಎಂದ ಗೌಡರು ಗುಡುಗಿದರು.
ಶಕ್ತಿ ಇದೆ: ದೇಶದಲ್ಲಿ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆಯವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ವಾಸ್ತವಾಂಶವನ್ನ ಮರೆಮಾಚಲು ಆಗುವುದಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕೆಲಸ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಸೋನಿಯಾಗಾಂಧಿ ಫ್ಲೆಕ್ಸ್ ಮೇಲೆ ಹಾಲು ಎರೆಯೋದನ್ನ ನೋಡಿದೆ. ನಾನು ಈ ವಿಷಯದಲ್ಲಿ ಟೀಕೆ ಮಾಡುತ್ತಿಲ್ಲ. ಕರ್ನಾಟಕದಲ್ಲಿ ೧೩೫ ಸೀಟು ಗೆದ್ದೆವು ಎಂಬ ಅಹಂ ಏನಿದೆ ಅದರ ವಿರುದ್ಧ ಮೋದಿಯವರ ನಾಯಕತ್ವದಲ್ಲಿ ಹೋರಾಟ ಮಾಡುವ ಶಕ್ತಿ ಇದೆ ಎಂದು ಟಾಂಗ್ ನೀಡಿದರು.
ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಮುಖ್ಯಮಂತ್ರಿ ಆದಾಗ ರಾಜ್ಯ ಲೂಟಿ ಮಾಡಿ ಯಾರಿಗಾದರೂ ದುಡ್ಡು ಕೊಟ್ಟರಾ..? ಕಾಂಗ್ರೆಸ್ ಜೊತೆ ಮುಖ್ಯಮಂತ್ರಿ ಆಗಿ ಕಾಂಗ್ರೆಸ್ ನಾಯಕರಿಗೆ ದುಡ್ಡು ಕೊಟ್ಟರಾ. ನಾನು ಮುಖ್ಯಮಂತ್ರಿ ಆಗಿದ್ದೆ ನಾನು ಯಾರಿಗಾದ್ರು ಹಣ ಕೊಟ್ಟಿದ್ದೀನಾ, ಈ ಹಿಂದಿನ ಎಲ್ಲಾ ಸಂದರ್ಭವನ್ನ ಪರಿಶೀಲಿಸಿ ಈ ರಾಜ್ಯದ ಸಂಪತ್ತನ್ನ ಕಾಂಗ್ರೆಸ್ ಲೂಟಿ ಹೊಡೆದು ಕೇಂದ್ರಕ್ಕೆ ನೀಡಿದೆ ಎಂದು ಪರೋಕ್ಷವಾಗಿ ಟೀಕಿಸಿದರು.
ತೆಲಂಗಾಣಕ್ಕೆ ರಾಜ್ಯದ ಹಣ: ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲೋದಕ್ಕೆ ಇಲ್ಲಿಂದ ಹಣ ಹೋಗಿದೆ. ಚುನಾವಣಾ ಆಯೋಗ ಎಷ್ಟು ಹಣ ವಶಪಡಿಸಿಕೊಂಡಿದ್ದಾರೆ ಎಂಬುದು ಪ್ರಶ್ನೆ. ೨೦೦೮ರಲ್ಲಿ ನಡೆದ ಘಟನೆ ಬಗ್ಗೆ ನನಗೆ ಗೊತ್ತಿದೆ. ಕುಮಾರಸ್ವಾಮಿ ಕೂಡ ಅಧಿಕಾರ ಬಿಟ್ಟುಕೊಡೋದಿಲ್ಲ ಎಂದು ಹೇಳಿರಲಿಲ್ಲ. ಅದಕ್ಕೆ ಉತ್ತರ ಬೇಕಿದ್ದರೆ ನನ್ನ ಮುಂದೆ ನಿಂತು ಕೇಳಲಿ ಎಂದು ದೇವೇಗೌಡರು ಹೇಳಿದರು.
ಗ್ಯಾರಂಟಿಗಳ ಕಾಂಗ್ರೆಸ್‌ಗೆ ಮತದಾರರಿಂದ ತಪರಾಕಿ: ಶಾಸಕ ಆರಗ ಜ್ಞಾನೇಂದ್ರ
ಭವಾನಿಗೆ ಆರೋಗ್ಯ ಸರಿಯಿಲ್ಲ: ತಮ್ಮ ಒಂದೂವರೆ ಕೋಟಿ ರುಪಾಯಿಯ ಕಾರಿಗೆ ಬೈಕ್ ಸವಾರನೊಬ್ಬ ಗುದ್ದಿದ ಎನ್ನುವ ಕಾರಣಕ್ಕೆ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸಾರ್ವಜನಿಕವಾಗಿ ಬೈಕ್ ಸವಾರನಿಗೆ ಅವಾಚ್ಯವಾಗಿ ಮಾತನಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕುರಿತು ಹೆಚ್ಚೇನು ಪ್ರತಿಕ್ರಿಯಿಸದ ದೇವೇಗೌಡರು "ಭವಾನಿ ರೇವಣ್ಣ ಬಗ್ಗೆ ಸುಮ್ಮನೆ ಯಾಕೆ ಚರ್ಚೆ ಮಾಡುತ್ತೀರಿ, ಅವರಿಗೆ ಆರೋಗ್ಯ ಸರಿ ಇಲ್ಲ. ಅವರಿಗೆ ಮಂಡಿ ಆಪರೇಷನ್ ಆಗಿದೆ" ಎಂದಷ್ಟೇ ಹೇಳಿದರು.