ಶಾಸಕ ಲಮಾಣಿಗೆ ಟಿಕೆಟ್‌ ಕೊಟ್ಟರೆ ಬಂಡಾಯ ಅಭ್ಯರ್ಥಿ ನಿಲ್ಲಿಸುತ್ತೇವೆ: ಗಂಗಣ್ಣ ಮಹಾಂತಶೆಟ್ಟರ್‌

By Kannadaprabha News  |  First Published Apr 3, 2023, 12:30 AM IST

ಬಿಜೆಪಿ ಕಾರ್ಯಕರ್ತರಿಗೆ ಗೌರವ ನೀಡದಿರುವ ಹಾಗೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಳ್ಳದ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರಿಗೆ ಬಿಜೆಪಿ ಈ ಬಾರಿ ಮತ್ತೆ ಟಿಕೆಟ್‌ ನೀಡಬಾರದು. 


ಲಕ್ಷ್ಮೇಶ್ವರ (ಏ.03): ಬಿಜೆಪಿ ಕಾರ್ಯಕರ್ತರಿಗೆ ಗೌರವ ನೀಡದಿರುವ ಹಾಗೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಳ್ಳದ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರಿಗೆ ಬಿಜೆಪಿ ಈ ಬಾರಿ ಮತ್ತೆ ಟಿಕೆಟ್‌ ನೀಡಬಾರದು. ಪಕ್ಷದ ವರಿಷ್ಠರು ಲಮಾಣಿ ಅವರಿಗೆ ಟಿಕೆಟ್‌ ನೀಡಿದಲ್ಲಿ ಬಂಡಾಯ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್‌ ಎಚ್ಚರಿಸಿದರು.

ಪಟ್ಟಣದ ವೀರಗಂಗಾಧರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ರಾಮಣ್ಣ ಲಮಾಣಿ ಅವರು 30 ಸಾವಿರ ಮತಗಳ ಅಂತರದಿಂದ ಗೆದ್ದಿರುವೆ ಎಂದು ಸೊಕ್ಕಿನಿಂದ ಬೀಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ಮುಖ ನೋಡಿ ಬಿಜೆಪಿ ಕಾರ್ಯಕರ್ತರು ಮತ ಹಾಕಿದ್ದಾರೆ. ಇವರ ಮುಖ ನೋಡಿ ಮತ ಹಾಕಿಲ್ಲ. ಇವರ ನಿರ್ಲಕ್ಷ್ಯದಿಂದಾಗಿ ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಂಡು ಲಮಾಣಿ ಅವರಿಗೆ ಟಿಕೆಟ್‌ ನೀಡಬಾರದು ಎಂದು ಇಲ್ಲಿ ಸೇರಿರುವ ಸಾವಿರಾರು ನೊಂದ ಕಾರ್ಯಕರ್ತರ ಸಮ್ಮುಖದಲ್ಲಿ ಹೈಕಮಾಂಡ್‌ಗೆ ಒತ್ತಾಯ ಮಾಡುತ್ತೇವೆ ಎಂದರು.

Latest Videos

undefined

ಹೆಚ್ಚಿನ ಲೀಡ್‌ ನೀಡಿ ಗೆಲ್ಲಿಸುವ ಹೊಣೆ ನಿಮ್ಮದು: ಬಾಲಚಂದ್ರ ಜಾರಕಿಹೊಳಿ

ಅಭ್ಯರ್ಥಿ ಬದಲಾಯಿಸಲೇಬೇಕು: ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಸದಾ ಕಾಂಗ್ರೆಸ್‌ ವಿರೋಧಿ ಕ್ಷೇತ್ರವಾಗಿ ಬೆಳೆದುಕೊಂಡು ಬಂದಿದೆ. ಶಾಸಕರ ಕಾರ್ಯವೈಖರಿಯಿಂದ ಮುಖಂಡರು ಇರಸು-ಮುರಸು ಅನುಭವಿಸುವಂತಾಗಿದೆ. ಪಕ್ಷವು ಅಭ್ಯರ್ಥಿಯನ್ನು ಬದಲಾಯಿಸಲೇಬೇಕು, ಇಲ್ಲದಿದ್ದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದು ನಿಶ್ಚಿತ ಎಂದ ಅವರು, ರಾಮಣ್ಣ ಲಮಾಣಿ ಅವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ನೀಡಿದಲ್ಲಿ ಒಮ್ಮತದಿಂದ ಅವರ ಗೆಲುವಿಗೆ ಶ್ರಮಿಸುತ್ತೇವೆ. ಆದರೆ ಪಕ್ಷ ಕಾರ್ಯಕರ್ತರ ಬೇಡಿಕೆಯನ್ನು ಮನ್ನಿಸದೆ ಮತ್ತೆ ಅದೇ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದರೆ ಆಕಾಂಕ್ಷಿಗಳಲ್ಲಿ ಓರ್ವ ಅಭ್ಯರ್ಥಿಯನ್ನು ಬಂಡಾಯವಾಗಿ ಸ್ಪರ್ಧಿಸುವಂತೆ ಮಾಡಿ ಅವರನ್ನು ಹೆಚ್ಚಿನ ಬಹುಮತದಿಂದ ಆಯ್ಕೆಯಾಗುವಂತೆ ಮಾಡುತ್ತೇವೆ ಎಂದರು.

ಬಸವರಾಜ ಪಲ್ಲೇದ, ಸೋಮಣ್ಣ ಡಾಣಗಲ್‌, ನಿಂಗಪ್ಪ ಬನ್ನಿ, ಎಂ.ಆರ್‌. ಪಾಟೀಲ, ನಾಗರಾಜ ಚಿಂಚಲಿ, ಶಂಕರ ಮರಾಠೆ, ಶಂಕರ ಭಾವಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ಪಕ್ಷದ ಸಂಘಟನೆಯ ವಿಷಯದಲ್ಲಿ ಶಾಸಕರು ಯಾವುದೇ ರೀತಿ ಕೆಲಸ ಮಾಡಿಲ್ಲ. ಕಾರ್ಯಕರ್ತರನ್ನು ಸಹ ಕಡೆಗಣಿಸಿದ್ದಾರೆ. ವಿಧಾನಸಭೆಯಲ್ಲಿ ಕ್ಷೇತ್ರದ ಸಮಸ್ಯೆ ಕುರಿತು ಒಂದು ದಿನವೂ ಧ್ವನಿ ಎತ್ತದಿರುವುದು, ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡದಿರುವುದರಿಂದ ಕಾರ್ಯಕರ್ತರು ದೂರ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಶಾಸಕರನ್ನು ಬದಲಾವಣೆ ಮಾಡುವುದು ಅವಶ್ಯ. ಇಲ್ಲದಿದ್ದಲ್ಲಿ ನಾವೇ ಬದಲಾವಣೆ ಮಾಡುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಪ್ರಚಾರ ಮಾಡಿ: ಮಾಜಿ ಸಚಿವ ಎಚ್‌.ವೈ.ಮೇಟಿ

ವಿಶ್ವನಾಥ ಕಪ್ಪತ್ತನವರ, ಈಶಣ್ಣ ಹುಲ್ಲಲ್ಲಿ, ತಿಪ್ಪಣ್ಣ ಕೊಂಚಿಗೇರಿ, ದಯಾನಂದ ಕಂಠಿಗೌಡ್ರ, ಈಶ್ವರ ಲಮಾಣಿ, ನಿಂಗಪ್ಪ ಬನ್ನಿ, ತಿಮ್ಮರಡ್ಡಿ ಅಳವಂಡಿ, ಶ್ರೀನಿವಾಸ ಅಬ್ಬಿಗೇರಿ, ಶಂಕರ ಮರಾಠೆ, ನೀಲಪ್ಪ ಹತ್ತಿ, ನಾಗರಾಜ ಲಕ್ಕುಂಡಿ, ಬಳ್ಳಾರಿ, ಮಲ್ಲಮ್ಮ ಹಿರೇಹಾಳ, ರಮೇಶ ಹುಳಕಣ್ಣವರ, ನಾಗರಾಜ ಚಿಂಚಲಿ, ರಮೇಶ ಭಾಗೆವಾಡಿ, ಶಿವನಗೌಡ ಪಾಟೀಲ, ಶರೀಫ್‌ಸಾಬ ಚಬ್ಬಿ, ಪ್ರಕಾಶ ಹಲವಾಗಲಿ, ಶೇಖಣ್ಣ, ಅಪ್ಪಣ್ಣ ಕುಬೇರ, ಗುಡದಯ್ಯ, ಭೀಮಣ್ಣ ಸುಣ್ಣದಮನಿ, ವಿರೂಪಾಕ್ಷಪ್ಪ ಮೇಟಿ ಹಾಗೂ ಸಾವಿರಾರು ಜನರು ಹಾಜರಿದ್ದು, ರಾಮಣ್ಣ ಲಮಾಣಿ ಅವರಿಗೆ ಟಿಕೆಟ್‌ ನೀಡದಂತೆ ಒಕ್ಕೂರಲಿನಿಂದ ಬೇಡಿಕೆ ಮಂಡಿಸಿದರು.

click me!