ಶ್ರೀರಾಮನ ಬಗ್ಗೆ ಸಚಿವ ರಾಜಣ್ಣ ಹಗುರ ಹೇಳಿಕೆ ಸಲ್ಲದು: ಎಂ.ಪಿ.ರೇಣುಕಾಚಾರ್ಯ

By Kannadaprabha NewsFirst Published Jan 20, 2024, 10:03 AM IST
Highlights

ಟೆಂಟ್‌ನಲ್ಲಿ ಮೂರು ಬೊಂಬೆ ಇಟ್ಟಿದ್ದರೆಂದು ಶ್ರೀರಾಮನ ಬಗ್ಗೆ ತೀರಾ ಹಗುರ ಹೇಳಿಕೆ ನೀಡಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣಗೆ ಶ್ರೀರಾಮನ ಶಾಪ ತಟ್ಟೇ ತಟ್ಟುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ದಾವಣಗೆರೆ (ಜ.19): ಟೆಂಟ್‌ನಲ್ಲಿ ಮೂರು ಬೊಂಬೆ ಇಟ್ಟಿದ್ದರೆಂದು ಶ್ರೀರಾಮನ ಬಗ್ಗೆ ತೀರಾ ಹಗುರ ಹೇಳಿಕೆ ನೀಡಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣಗೆ ಶ್ರೀರಾಮನ ಶಾಪ ತಟ್ಟೇ ತಟ್ಟುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ. ನಗರದ ಶ್ರೀ ಜಯದೇವ ವೃತ್ತದಲ್ಲಿ ಹಿಂದೂ ಸಂಘಟನೆಗಳು ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ರಾತ್ರಿ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮ, ಸೀತೆ, ಲಕ್ಷ್ಮಣರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣಗೆ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿದರು.

ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ರಾಜಣ್ಣ ಬಾಯಿಯಿಂದ ಇಂತಹ ಪದಗಳು ಬರಬಾರದು. ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಯಾರನ್ನೋ ಓಲೈಕೆ ಮಾಡಲು ಹೀಗೆಲ್ಲಾ ಮಾತನಾಡಬಾರದು. ಕೇಂದ್ರ ಪುರಾತತ್ವ ಇಲಾಖೆಯ ಉಪ ನಿರ್ದೇಶಕರಿದ್ದ ಮಹಮ್ಮದ್ ಅಲ್ಲಿ ರಾಮಲಲ್ಲಾ ಇದ್ದ ಬಗ್ಗೆ ಪ್ರಮಾಣಪತ್ರ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ಗೆ ರಾಮ ಮಂದಿರ ಇದ್ದ ಬಗ್ಗೆ ಸಾಕ್ಷ್ಯ ನೀಡಲಾಗಿತ್ತು ಎಂದು ತಿಳಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ರಾಮ ಮಂದಿರ ಪರ ತೀರ್ಪು ಬಂದಿದ್ದರೂ, ಅಲ್ಲಿ ಮೂರು ಬೊಂಬೆ ಇಟ್ಟಿದ್ದರು ಅಂತಾ ಹೇಳುತ್ತೀರಾ? ಶ್ರೀರಾಮನ ಶಾಪ ನಿಮಗೆ ತಟ್ಟೇ ತಟ್ಟುತ್ತದೆ. ಹೀಗೆಲ್ಲಾ ಮಾತನಾಡುವವರು ಯಾರೇ ಆಗಲಿ ಅಂತಹವರನ್ನು ಸಂಪುಟದಿಂದ ವಜಾ ಮಾಡುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು ಎಂದು ಒತ್ತಾಯಿಸಿದರು.

Latest Videos

ನಾನು ರಾಮ ಮತ್ತು ರಾವಣನ ಪರ ಇದ್ದೇನೆ: ಸಚಿವ ಕೆ.ಎನ್‌.ರಾಜಣ್ಣ

ರಾಮ ಮಂದಿರ ಹೋರಾಟದ ವೇಳೆ ಕರ ಸೇವಕರ ಮೇಲೆ ಗುಂಡು ಹಾರಿಸಿದ್ದು, ದೌರ್ಜನ್ಯ ಎಸಗಿದ್ದು ಇದೇ ಕಾಂಗ್ರೆಸ್ ಸರ್ಕಾರ. ಶ್ರೀರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದನಾ ಎಂಬುದಾಗಿ ಪ್ರಶ್ನೆ ಮಾಡಿದ್ದು ಇದೇ ಕಾಂಗ್ರೆಸ್. ಈಗ ಶ್ರೀರಾಮ ಪ್ರತಿಷ್ಠಾಪನೆ ಹಾಗೂ ಶ್ರೀ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಪತ್ರಿಕೆ ಬಂದಿಲ್ಲವೆಂದು ಹೇಳಿದ್ದು ಇದೇ ಕಾಂಗ್ರೆಸ್. ಈಗ ರಾಮ ಮಂದಿರಕ್ಕೆ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಶ್ರೀರಾಮ ಭಕ್ತರ ಭಕ್ತಿಯನ್ನು ಕಂಡು ಸ್ವತಃ ಕಾಂಗ್ರೆಸ್ಸಿಗರು ಭಯಭೀತರಾಗಿದ್ದಾರೆ. ನಮಗೆ ಆಹ್ವಾನ ಪತ್ರಿಕೆಯೇ ಬಂದಿಲ್ಲವೆನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಮುಖಂಡರಾದ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ, ಮಾಡಾಳ್ ಮಲ್ಲಿಕಾರ್ಜುನ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ ಜಾಧವ್, ರಾಜು ವೀರಣ್ಣ, ಅಣಜಿ ಬಸವರಾಜ, ಕೆಟಿಜೆ ನಗರ ಜಯಣ್ಣ, ಚೇತನಾ ಶಿವಕುಮಾರ ಇತರರು ಇದ್ದರು.

ಜ.22ಕ್ಕೆ ಮದ್ಯ ಮಾರಾಟ ನಿಷೇಧಿಸಿ: ರೇಣುಕಾಚಾರ್ಯ: ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜ.21ರ ಮಧ್ಯರಾತ್ರಿಯಿಂದಲೇ 24 ಗಂಟೆ ಕಾಲ ಮದ್ಯ ಮಾರಾಟ ನಿಷೇಧಿಸಬೇಕು, ನೇರಪ್ರಸಾರ ವೀಕ್ಷಿಸಲು ಅನುಕೂಲವಾಗುವಂತೆ ರಾಜ್ಯವ್ಯಾಪಿ ಎಲ್‌ಇಡಿ ಪರದೆಗಳ ವ್ಯವಸ್ಥೆ ಕಲ್ಪಿಸುವ ಜೊತೆಗೆ ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಲ್ಲೂ ರಾಜ್ಯ ಸರ್ಕಾರದಿಂದಲೇ ವಿಶೇಷ ಪೂಜೆ, ಅಲಂಕಾರ, ಪ್ರಾರ್ಥನೆಗೆ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಒತ್ತಾಯಿಸಿದ್ದಾರೆ. ರಾಮ ಮಂದಿರ ಉದ್ಘಾಟನೆ ಬಿಜೆಪಿ ಕಾರ್ಯಕ್ರಮವಲ್ಲ. ಅದು ಸಂಘ ಪರಿವಾರದ ಕಾರ್ಯಕ್ರಮ. ದೇಶದ ಲಕ್ಷಾಂತರ ಕರ ಸೇವಕರ ತ್ಯಾಗ, ಬಲಿದಾನದಿಂದ ಭವ್ಯ ಮಂದಿರ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರವು ಅಂದು ಅರ್ಧ ದಿನ ರಜೆ ಘೋಷಿಸಿದ್ದು ರಾಜ್ಯ ಸರ್ಕಾರವೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಜ.22ರಂದು ಕರ್ನಾಟಕದಲ್ಲೂ ರಜೆ ಘೋಷಿಸಿ: ಕೆ.ಎಸ್.ಈಶ್ವರಪ್ಪ

ಹುಬ್ಬಳ್ಳಿಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಫ್ಲೆಕ್ಸ್ ತೆರವುಗೊಳಿಸಿರುವುದು ಖಂಡನೀಯ. ಯಾರ ಅಪ್ಪನ ಅನುಮತಿ ಕೇಳಿ, ಫ್ಲೆಕ್ಸ್ ಹಾಕಬೇಕಾ? ಬಾಬರ್‌ನ ಫ್ಲೆಕ್ಸ್ ಹಾಕುವಾಗ ನೀವು ಇದೇ ರೀತಿ ಅನುಮತಿ ಕೊಟ್ಟಿದ್ದಿರಾ? ಇದು ಹಿಂದುಗಳ ದೇಶ, ಯಾರ ಅನುಮತಿ ಬೇಕಾಗಿಲ್ಲ. ಈ ದೇಶದಲ್ಲಿ ಹುಟ್ಟಿದ ಹಿಂದು, ಮುಸ್ಲಿಂ, ಕ್ರೈಸ್ತರು ಹೀಗೆ ಎಲ್ಲರೂ ಒಟ್ಟಾಗಿದ್ದೇವೆ.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

click me!