ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅದರಿಂದಾಗಿ ರಾಜ್ಯಕ್ಕೆ ಪದೇ-ಪದೇ ಅನ್ಯಾಯವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ಆರೋಪಿಸಿದರು.
ಹುಬ್ಬಳ್ಳಿ (ಡಿ.10): ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅದರಿಂದಾಗಿ ರಾಜ್ಯಕ್ಕೆ ಪದೇ-ಪದೇ ಅನ್ಯಾಯವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಟೀಕೆ ಮಾಡಿದ್ದಾರೆ. ಆಗಲಾದರೂ ಕೇಂದ್ರ ಸಚಿವರು ಮುಖ್ಯಮಂತ್ರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೇಟಿ ಮಾಡಿಸಿ, ರಾಜ್ಯಕ್ಕೆ ಆಗುತ್ತಿರುವ ತಾರತಮ್ಯವನ್ನು ತಡೆಯಬಹುದಿತ್ತು. ರಾಜ್ಯದ ಸಚಿವರು ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಲು ಅವಕಾಶ ದೊರೆಯದೆ, ಕೇವಲ ಅಧಿಕಾರಿಗಳನ್ನು ಭೇಟಿಯಾಗಿ ವಾಪಸ್ ಬರುವಂತಾಗಿದೆ ಎಂದು ದೂರಿದರು.
ಕಿವಿಹಿಂಡುವ ಕೆಲಸವಾಗಲಿ: ರಾಜ್ಯದ ದುಸ್ಥಿತಿಗೆ ಪ್ರಧಾನಿ ಮೋದಿಯೇ ಕಾರಣರಾಗಿದ್ದು, ಕೇಂದ್ರ ಸಚಿವರು, ಅಧಿಕಾರಿಗಳನ್ನು ಪ್ರಧಾನಿ ಕಿವಿ ಹಿಂಡುವ ಕೆಲಸ ಮಾಡಬೇಕು. ಕಾಂಗ್ರೆಸ್ ನಾಯಕರು ಮಾಡುವ ಟೀಕೆಯನ್ನು ಅರಗಿಸಿಕೊಳ್ಳಲು ಆಗಲ್ಲಾ ಅಂದರೆ ಅದು ನಿಮ್ಮ ಅಹಂಕಾರವನ್ನು ತೋರಿಸುತ್ತಿದೆ ಎಂದು ಪರೋಕ್ಷವಾಗಿ ಸಚಿವ ಜೋಶಿ ವಿರುದ್ಧ ಕಿಡಿಕಾರಿದರು. ಇತ್ತೀಚಿಗೆ ಮೋದಿಯವರಿಗೆ ಅಧಿಕಾರದ ಮದ ಜಾಸ್ತಿಯಾದಂತೆ ಕಾಣಿಸುತ್ತದೆ ಎಂದು ಶೆಟ್ಟರ್ ಟೀಕಿಸಿದರು.
Chikkamagaluru: 4 ಸಾವಿರ ಅಡಿ ಪ್ರಪಾತದಿಂದ ಟೆಕ್ಕಿ ಭರತ್ ಮೃತದೇಹ ಹೊರಕ್ಕೆ!
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಹಿಂದಿನ ಸರ್ಕಾರದಲ್ಲಿ ಶೇ. 40ರಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ಕೆಂಪಣ್ಣ ಅವರು ಆರೋಪಿಸಿ, ಕೆಲ ದಾಖಲೆ ನೀಡಿದ್ದಾರೆ. ಆ ಕುರಿತು ನಾಗಮೋಹನದಾಸ್ ಸಮಿತಿ ನಿಷ್ಪಕ್ಷವಾಗಿ ತನಿಖೆ ನಡೆಸುತ್ತಿದೆ. ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ತಪ್ಪಿತಸ್ಥರು ಯಾವುದೇ ಪಕ್ಷದವರಿರಲಿ ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಶೆಟ್ಟರ್ ಆಗ್ರಹಿಸಿದರು.
ಉ.ಕ. ಪರ ಧ್ವನಿ ಎತ್ತುವೆ: ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನ, ಕಿತ್ತೂರು ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕುರಿತು ಸುದೀರ್ಘ ಚರ್ಚೆ ನಡೆಸಲಾಗುವುದು. ಉತ್ತರ ಕರ್ನಾಟಕ ಭಾಗಕ್ಕೆ ಅಧಿವೇಶನದಲ್ಲಿ ಸೂಕ್ತ ನ್ಯಾಯ ಸಿಗುವ ವಿಶ್ವಾಸವಿದ್ದು, ನಾನು ಸಹ ಉತ್ತರ ಕರ್ನಾಟಕದ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ಶೆಟ್ಟರ್ ಹೇಳಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯಿಂದ ಕೇಂದ್ರದ ಯೋಜನೆಗಳ ಪರಿಚಯ: ಸಚಿವ ನಾರಾಯಣಸ್ವಾಮಿ
ನವೀಕರಣ ಕಾಮಗಾರಿ ವೀಕ್ಷಣೆ: ಹುಬ್ಬಳ್ಳಿಯ ಜೆಸಿ ನಗರದಲ್ಲಿರುವ ಟೌನ್‌ಹಾಲ್ ನವೀಕರಣ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ್ ಶನಿವಾರ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು. ಆದಷ್ಟು ಬೇಗನೆ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಜನರ ಬಳಕೆಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಗುತ್ತಿಗೆದಾರರು ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.