ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಮಾನ ಅವಕಾಶ: ಸಚಿವ ಈಶ್ವರ ಖಂಡ್ರೆ

By Kannadaprabha News  |  First Published Apr 27, 2024, 10:13 AM IST

ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ನಿಜಲಿಂಗಪ್ಪವರು ಕಾಂಗ್ರೆಸ್‌ನಿಂದಲೇ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. ವೀರೇಂದ್ರ ಪಾಟೀಲರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಬಿ.ಡಿ. ಜತ್ತಿ ಅವರು ಉಪರಾಷ್ಟ್ರಪತಿ ಆಗಿದ್ದರು. ಆದಾಗೂ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ: ಸಚಿವ ಈಶ್ವರ ಬಿ. ಖಂಡ್ರೆ 


ಭಾಲ್ಕಿ(ಏ.27):  ಎಲ್ಲ ಜಾತಿ, ಮತ, ಜನಾಂಗದವನ್ನು ಸಮಾನವಾಗಿ ಕಾಣುವ ಮತ್ತು ಸಮಾನ ಅವಕಾಶ ನೀಡುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ನುಡಿದರು.

ಭಾಲ್ಕಿಯಲ್ಲಿಂದು ವೀರಶೈವ, ಲಿಂಗಾಯತ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ನಿಜಲಿಂಗಪ್ಪವರು ಕಾಂಗ್ರೆಸ್‌ನಿಂದಲೇ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. ವೀರೇಂದ್ರ ಪಾಟೀಲರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಬಿ.ಡಿ. ಜತ್ತಿ ಅವರು ಉಪರಾಷ್ಟ್ರಪತಿ ಆಗಿದ್ದರು. ಆದಾಗೂ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

Latest Videos

undefined

ಬೀದರ್‌ ಲೋಕಸಭಾ ಕ್ಷೇತ್ರ: ಗ್ಯಾರಂಟಿ ಪಕ್ಕಾ ಎಂಬುದು ಜನರ ನಂಬಿಕೆ, ಸಾಗರ ಖಂಡ್ರೆ

ಸರ್ವರಿಗೂ ಲೇಸನ್ನು ಬಯಸುವುದು ನಮ್ಮ ಸಮಾಜದ ಮೂಲ ತತ್ವ, ವರ್ಗ ರಹಿತ, ಶ್ರೇಣಿ ರಹಿತ, ಅಸಮಾನತೆಯಿಲ್ಲದ ಸಮ ಸಮಾಜದ ನಿರ್ಮಾಣ ಬಸವಾದಿ ಪ್ರಮಥರ ಕನಸಾಗಿತ್ತು. ಕಾಂಗ್ರೆಸ್‌ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಹಾಗೂ 5 ಗ್ಯಾರಂಟಿಗಳ ಮೂಲಕ ಇದನ್ನು ಸಾಕಾರಗೊಳಿಸುತ್ತಿದೆ ಎಂದರು.

ಬೀದರ್, ಭಾಲ್ಕಿಯ ಸುಪುತ್ರನಿಗೆ ದೆಹಲಿಗೆ ಹೋಗುವ ಅವಕಾಶ ನೀಡಿ:

ತಮ್ಮ ಪುತ್ರ ಬೀದರ್ ಜಿಲ್ಲೆಯ ಸುಪುತ್ರ ಹಾಗೂ ರಾಜ್ಯದಲ್ಲೇ ಏಕೆ ಬಹುತೇಕ ರಾಷ್ಟ್ರದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಲೋಕಸಭಾ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆಗೆ ಗೆಲ್ಲಿಸುವ ಮೂಲಕ ಭಾಲ್ಕಿ ಮತ್ತು ಬೀದರ್ ಕೀರ್ತಿ ದೂರದ ದೆಹಲಿಯಲ್ಲೂ ಮಾರ್ಧನಿಸುವಂತೆ ಮಾಡಿ. ಇದಕ್ಕಾಗಿ ಮೇ 7ರಂದು ಎಲ್ಲರೂ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ಡಿಸಿಸಿ ಮೇಲೆ ರೇಡ್‌ ನಿಮ್ಮ ಕರ್ಮಕಾಂಡದ ಫಲ: ಖೂಬಾ

ವಿಧಾನಸಭಾ ಚುನಾವಣೆಯಲ್ಲಿ ನೀವೆಲ್ಲರೂ ನನಗೆ ಬೆಂಬಲ ನೀಡಿದ್ದೀರಿ. ಲೋಕಸಭಾ ಚುನಾವಣೆಯಲ್ಲೂ ಸಾಗರ್ ಖಂಡ್ರೆಗೆ ಆಶೀರ್ವಾದ ಮಾಡಿ. ಸಾಗರ್ ಗೆದ್ದು ಸಂಸದರಾದರೆ ವಾರದ 7 ದಿನ, ದಿನದ 24 ಗಂಟೆ ಜನತೆಗೆ ಸೇವೆಗೆ ಬದ್ಧರಾಗಿರುತ್ತಾರೆ. ಹಾಲಿ ಸಂಸತ್ ಸದಸ್ಯರಂತೆ ಕಾಣೆಯಾಗುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಭಾಲ್ಕಿಯ ವೀರಶೈವ, ಲಿಂಗಾಯತ ಸಮುದಾಯದ ಮುಖಂಡರಾದ ಬಸವರಾಜ್ ವಂಕೆ, ಸೋಮನಾಥಪ್ಪ ಅಷ್ಟುರೆ, ಪ್ರಕಾಶ್ ಮಾಶೆಟ್ಟಿ, ಸುಭಾಷ್ ಕಾರಮುಂಗೆ, ದಿಲೀಪ್ ಸುಂಟೆ, ರಮೇಶ್ ಲೋಖಂಡೆ, ದತ್ತು ಹೊನ್ನ, ಅನಿಲ್ ಲೋಖಂಡೆ, ಮಹದೇವ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಸಮಾಜದವರು ಸಾಗರ್ ಖಂಡ್ರೆಗೆ ಜೈಕಾರ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದರು.

click me!