ಪಂಚರಾಜ್ಯ ಚುನಾವಣೆ ಘೋ಼ಷಣೆ

Kannadaprabha News   | Kannada Prabha
Published : Mar 16, 2026, 07:02 AM IST
Voting

ಸಾರಾಂಶ

ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ನಿರೀಕ್ಷೆ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ಏ.9ರಂದು ಮೊದಲ ಹಂತದ ಮತದಾನ ನಡೆಯಲಿದೆ

ನವದೆಹಲಿ: ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ನಿರೀಕ್ಷೆ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ಏ.9ರಂದು ಮೊದಲ ಹಂತದ ಮತದಾನ ನಡೆಯಲಿದ್ದರೆ, ಏ.29ರಂದು ಕಡೆಯ ಹಂತದ ಮತದಾನ ನಡೆಯಲಿದ್ದು ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಅಂತೆಯೇ ಕರ್ನಾಟಕದ 2 ಸೇರಿದಂತೆ ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಭಾನುವಾರ ಚುನಾವಣಾ ದಿನಾಂಕ ಪ್ರಕಟಿಸಿದ್ದು. ಅಲ್ಲೂ ಮೇ 4ಕ್ಕೇ ಮತ ಎಣಿಕೆ ನಡೆಯಲಿದೆ.

ಕಳೆದ ಬಾರಿ 8 ಹಂತ ಕಂಡಿದ್ದ ಬಂಗಾಳದಲ್ಲಿ ಈ ಬಾರಿ ಕೇವಲ 2 ಹಂತದ ಮತದಾನ ನಡೆಯುವುದು ವಿಶೇಷ.

ಈ ಚುನಾವಣೆಯು ಪ.ಬಂಗಾಳದಲ್ಲಿ ಟಿಎಂಸಿ, ಬಿಜೆಪಿ, ಎಡರಂಗಕ್ಕೆ, ಅಸ್ಸಾಂನಲ್ಲಿ ಕಾಂಗ್ರೆಸ್, ಬಿಜೆಪಿಗೆ, ಕೇರಳದಲ್ಲಿ ಎಡರಂಗ, ಯುಡಿಎಫ್‌ ಹಾಗೂ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆಯಾಗಲಿದೆ. ತಮಿಳುನಾಡಲ್ಲಿ ಬಿಜೆಪಿ-ಅಣ್ಣಾಡಿಎಂಕೆ ಕೂಟ, ಡಿಎಂಕೆ-ಕಾಂಗ್ರೆಸ್‌ ಕೂಟ, ವಿಜಯ್‌ ನೇತೃತ್ವದ ಟಿವಿಕೆ, ದಿ. ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರ ಪಕ್ಷಗಳ ನಡುವೆ ಬಹುಕೋನ ಕದನಕ್ಕೆ ಕಾರಣವಾಗಲಿದೆ. ಪುದುಚೇರಿಯಲ್ಲಿ ಬಿಜೆಪಿ-ಎಐಎನ್‌ಆರ್‌ಸಿ ಹಾಗೂ ಕಾಂಗ್ರೆಸ್‌-ಡಿಎಂಕೆ ಕೂಟಗಳ ನಡುವೆ ಸಂಘರ್ಷ ನಡೆಯಲಿದೆ.

ಕೇವಲ 20 ದಿನದ ಅವಧಿಯಲ್ಲಿ ಚುನಾವಣೆ:

5 ವರ್ಷಗಳ ಹಿಂದೆ ಕೋವಿಡ್‌ ಅವಧಿಯಲ್ಲಿ ಈ 5 ರಾಜ್ಯಗಳಿಗೆ 30 ದಿನಗಳ ಅವಧಿಯಲ್ಲಿ ಒಟ್ಟು 8 ದಿನಗಳ ಕಾಲ ಚುನಾವಣೆ ನಡೆದಿದ್ದರೆ, ಈ ಬಾರಿ 20 ದಿನಗಳ ಅವಧಿಯಲ್ಲಿ ಕೇವಲ 3 ದಿನಗಳಲ್ಲೇ ಚುನಾವಣೆ ಮುಗಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಗೆ ಒಂದೇ ಹಂತದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಎಲ್ಲೆಲ್ಲಿ ಎಂದು?:

ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಏ.9ಕ್ಕೆ, ತಮಿಳುನಾಡಲ್ಲಿ ಏ.23ಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಏ.23 ಮತ್ತು 29ರಂದು ಮತದಾನ ನಡೆಯಲಿದೆ. 5 ರಾಜ್ಯಗಳ ಒಟ್ಟು 824 ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದ್ದು 17.4 ಕೋಟಿ ಜನರು ಮತದಾನದ ಅರ್ಹತೆ ಪಡೆದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಲ್ಲಿ ಯಾರ ಅಧಿಕಾರ?:

234 ಸದಸ್ಯ ಬದಲ ತಮಿಳುನಾಡಲ್ಲಿ ಡಿಎಂಕೆ ಮೈತ್ರಿಕೂಟ, 294 ಸದಸ್ಯ ಬದಲ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, 140 ಸದಸ್ಯ ಬದಲ ಕೇರಳದಲ್ಲಿ ಯುಡಿಎಫ್‌, 126 ಸದಸ್ಯ ಬಲದ ಅಸ್ಸಾಂನಲ್ಲಿ ಬಿಜೆಪಿ ಮತ್ತು 30 ಸದಸ್ಯ ಬಲದ ಪುದುಚೇರಿಯಲ್ಲಿ ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌ ಅಧಿಕಾರದಲ್ಲಿವೆ.

ನಾಮಪತ್ರ:

ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಮಾ.16ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆಗೆ ಮಾ.23 ಅಂತಿಮ ದಿನ. ಮಾ.24ಕ್ಕೆ ನಾಮಪತ್ರ ಪರಿಶೀಲನೆ, ಮಾ.26 ಹಿಂಪಡೆಯಲು ಕಡೆಯ ದಿನ. ಇನ್ನು ತಮಿಳುನಾಡಲ್ಲಿ ಮಾ.30ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಏ.6 ಕಡೆಯ ದಿನ ಏ.7ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು ಏ.9ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನ.

ಬಂಗಾಳದಲ್ಲಿ 152 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆಗೆ ಮಾ.30ಕ್ಕೆ ಅಧಿಸೂಚನೆ ಪ್ರಕಟ. ನಾಮಪತ್ರ ಸಲ್ಲಿಕೆಗೆ ಏ.6 ಕಡೆಯ ದಿನ, ಏ.7ಕ್ಕೆ ನಾಮಪತ್ರ ಪರಿಶೀಲನೆ, ಏ.9ರಂದು ಹಿಂಪಡೆಯಲು ಕಡೆಯ ದಿನ. 142 ಕ್ಷೇತ್ರಗಳಲ್ಲಿ ನಡೆಯುವ 2ನೇ ಹಂತಕ್ಕೆ ಏ.2ಕ್ಕೆ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆಗೆ ಏ.9ರಂದು ಕಡೆಯ ದಿನ. ಏ.10ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಏ.13 ಕಡೆಯ ದಿನ.

2 ಗಂಟೆಗೊಮ್ಮೆ ಮತ ಪ್ರಮಾಣ ದಾಖಲು:

ಈ ಬಾರಿ ಚುನಾವಣೆಯಲ್ಲಿ ಅಧಿಕಾರಿಗಳು ಪ್ರತಿ 2 ಗಂಟೆಗೊಮ್ಮೆ ಮತ್ತು ಚುನಾವಣೆ ಮುಗಿದಾಕ್ಷಣ ಮತದಾನದ ಪ್ರಮಾಣವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ದಾಖಲಿಸಲಿದ್ದಾರೆ.

ಮತಗಟ್ಟೆ:

5 ರಾಜ್ಯಗಳಲ್ಲಿ ಒಟ್ಟು 2,18,807 ಮತಗಟ್ಟೆ ಸ್ಥಾಪನೆ ಮಾಡಲಾಗುತ್ತಿದ್ದು, 25 ಲಕ್ಷ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಈ ಪೈಕಿ 15 ಲಕ್ಷ ಚುನಾವಣಾ ಅಧಿಕಾರಿಗಳು, 8.5 ಲಕ್ಷ ಭದ್ರತಾ ಸಿಬ್ಬಂದಿ, 49000 ಮೈಕ್ರೋ ಅಬ್ಸರ್ವರ್‌, 1444 ವೀಕ್ಷಕರು, 40000 ಮತ ಎಣಿಕೆ ಸಿಬ್ಬಂದಿ, 21000 ವಲಯ ಅಧಿಕಾರಿಗಳ, ಮತ ಎಣಿಕೆಗೆ 15000 ಮೈಕ್ರೋ ಅಬ್ಬರ್ವರ್‌ ನಿಯೋಜನೆಗೊಳ್ಳಲಿದ್ದಾರೆ ಎಂದು ಆಯೋಗ ತಿಳಿಸಿದೆ.8 ಕ್ಷೇತ್ರಗಳಿಗೆ

ಉಪಚುನಾವಣೆ:

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ಜೊತೆಗೆ, ಏ.9ರಂದು ಕರ್ನಾಟಕದ 2, ಗೋವಾ, ನಾಗಾಲ್ಯಾಂಡ್‌, ತ್ರಿಪುರಾದ ತಲಾ 1 ಮತ್ತು ಏ.23ರಂದು ಮಹಾರಾಷ್ಟ್ರ ಮತ್ತು ಗುಜರಾತ್‌ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ರಾಜ್ಯ ವಿಧಾನಸಭಾ ಸ್ಥಾನ ದಿನಾಂಕ ಹಾಲಿ ಆಡಳಿತ

ಪಶ್ಚಿಮ ಬಂಗಾಳ 294 ಏ.23,29 ಟಿಎಂಸಿ

ತಮಿಳುನಾಡು 234 ಏ.23 ಡಿಎಂಕೆ

ಕೇರಳ 140 ಏ.9 ಯುಡಿಎಫ್‌

ಅಸ್ಸಾಂ 126 ಏ.9 ಬಿಜೆಪಿ

ಪುದುಚೇರಿ 30 ಏ.9 ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌

824 ಕ್ಷೇತ್ರ 5 ರಾಜ್ಯಗಳಲ್ಲಿ ಒಟ್ಟು ಚುನಾವಣೆ ನಡೆಯುವ ಕ್ಷೇತ್ರಗಳು

17.3 ಕೋಟಿ ಮತದಾರರು 5 ರಾಜ್ಯಗಳಲ್ಲಿ ಒಟ್ಟು ಮತದಾರರರ ಸಂಖ್ಯೆ

25 ಲಕ್ಷ ಸಿಬ್ಬಂದಿ ಚುನಾವಣೆಗೆ ನಿಯೋಜನೆಗೊಳ್ಳುವ ಸಿಬ್ಬಂದಿ ಸಂಖ್ಯೆ

2.18 ಲಕ್ಷ ಮತಗಟ್ಟೆ 5 ರಾಜ್ಯಗಳಲ್ಲಿ 2,18,807 ಮತಗಟ್ಟೆಗಳ ಸ್ಥಾಪನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನಂತೂ ಜಿಬಿಎ ಚುನಾವಣೆ ಮಾಡುವವನೇ: ಡಿಕೆಶಿ ಶಪಥ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ