ಮಹದಾಯಿ ಹೋರಾಟ ಎಂದರೆ ಥಟ್ಟನೆ ನೆನಪಾಗುವುದು ನವಲಗುಂದ. ಇಲ್ಲಿನ ಹೋರಾಟದಿಂದಲೇ ಹಲವರು ನಾಯಕರಾಗಿ ಬೆಳೆದಿರುವುದುಂಟು. 1980ರ ದಶಕದಲ್ಲಿ ನಡೆದಿರುವ ನವಲಗುಂದ -ನರಗುಂದ ಬಂಡಾಯ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಮಾ.13): ಮಹದಾಯಿ ಹೋರಾಟ ಎಂದರೆ ಥಟ್ಟನೆ ನೆನಪಾಗುವುದು ನವಲಗುಂದ. ಇಲ್ಲಿನ ಹೋರಾಟದಿಂದಲೇ ಹಲವರು ನಾಯಕರಾಗಿ ಬೆಳೆದಿರುವುದುಂಟು. 1980ರ ದಶಕದಲ್ಲಿ ನಡೆದಿರುವ ನವಲಗುಂದ -ನರಗುಂದ ಬಂಡಾಯ, ಇತ್ತೀಚಿನ 2 ದಶಕಗಳಿಂದ ಜೋರಾಗಿರುವ ಮಹದಾಯಿ ಹೋರಾಟದಿಂದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಶಂಕರ ಪಾಟೀಲ ಮುನೇನಕೊಪ್ಪ ನಾಯಕರಾದರು.
ಇಂತಹ ಬಂಡಾಯದ ನೆಲದಲ್ಲೀಗ ಚುನಾವಣಾ ರಾಜಕೀಯ ಜೋರಾಗಿದೆ. ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 3 ಬಾರಿ ಚುನಾವಣೆ ಎದುರಿಸಿದ್ದು, 2 ಬಾರಿ ಗೆಲುವು ಕಂಡರೆ, 1 ಸಲ ಪರಾಭವಗೊಂಡಿದ್ದಾರೆ. ಸಚಿವರಾಗಿ ಕ್ಷೇತ್ರದಲ್ಲಿ ಉತ್ತಮ ಹಿಡಿತ ಸಾಧಿಸಿರುವ ಮುನೇನಕೊಪ್ಪ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಮುನೇನಕೊಪ್ಪ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಎಂಟು ಮಂದಿ ಸಿದ್ಧತೆ ನಡೆಸಿದ್ದಾರೆ.
ಭೀಮಾತೀರದಲ್ಲಿ ಟಿಕೆಟ್‌ಗಾಗಿ ಕುಟುಂಬದೊಳಗೇ ಕಾದಾಟ: ಅಖಾಡಕ್ಕೆ ಎಸ್‌ಐ ಹಗರಣದ ಕಿಂಗ್‌ಪಿನ್ ಸಜ್ಜು
ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಕಳೆದ ಬಾರಿ ‘ಕೈ’ ಟಿಕೆಟ್ ಪಡೆದು ಪರಾಭವಗೊಂಡಿರುವ ವಿನೋದ ಅಸೂಟಿ, ಮಾಜಿ ಸಚಿವ ವಿನಯ ಕುಲಕರ್ಣಿ ಸಂಬಂಧಿ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಜಿ.ಪಂ. ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಬಾಪುಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಚಂಬಣ್ಣ ಹಾಳದೋಟರ ಸೇರಿ ಎಂಟು ಮಂದಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಈ ನಡುವೆ, ವಲಸೆ ಹಾಗೂ ಮೂಲ ಕಾಂಗ್ರೆಸ್ ಎಂಬ ಕೂಗು ಸಹ ಸಣ್ಣದಾಗಿ ಕೇಳಿ ಬರುತ್ತಿದ್ದು, ಇದು ಪಕ್ಷದಲ್ಲಿನ ಭಿನ್ನಮತಕ್ಕೆ ಕಾರಣವಾದರೂ ಅಚ್ಚರಿ ಪಡಬೇಕಿಲ್ಲ.
ಟಿಕೆಟ್ ಸಿಗದಿದ್ದರೆ ಕೆಲವರು ಬಂಡಾಯ ಏಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇನ್ನು, ಕೋನರೆಡ್ಡಿ ಜೆಡಿಎಸ್ ಬಿಟ್ಟಮೇಲೆ ಆ ಪಕ್ಷದಲ್ಲಿ ಅಂತಹ ದೊಡ್ಡಮಟ್ಟದ ನಾಯಕರು ಇಲ್ಲದಂತಾಗಿದೆ. ಆದರೂ, ಕೆಲ ಮುಖಂಡರು ಕ್ಷೇತ್ರದಲ್ಲಿ ಪಕ್ಷದ ಮತ ಒಗ್ಗೂಡಿಸಲು ಮುಂದಾಗಿದ್ದಾರೆ. ಪ್ರಕಾಶ ಅಂಗಡಿ, ಶ್ರೀಶೈಲ ಮೂಲಿಮನಿ, ಶಿವಶಂಕರ ಕಲ್ಲೂರ, ಮುಸ್ತಾಫ್ ಕುನ್ನಿಬಾವಿ ಜೆಡಿಎಸ್‌ನ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇಷ್ಟುವರ್ಷ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಕಾಂಗ್ರೆಸ್ ಸೇರಿರುವುದರಿಂದ ಈ ಸಲ ಬಿಜೆಪಿ- ಕಾಂಗ್ರೆಸ್ ಮಧ್ಯೆ ನೇರಾನೇರ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.
ಕ್ಷೇತ್ರ ಹಿನ್ನೆಲೆ: ಕ್ಷೇತ್ರದಲ್ಲಿ ಈವರೆಗೆ ನಡೆದ 14 ಚುನಾವಣೆಗಳಲ್ಲಿ 9 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, ಒಂದು ಬಾರಿ ಜೆಡಿಎಸ್ ಗೆಲುವಿನ ನಗೆ ಬೀರಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 2004ರಿಂದ ಈಚೆಗೆ ಕಾಂಗ್ರೆಸ್ ಗೆಲುವು ಕಂಡಿಲ್ಲ. ಎಂ.ಕೆ.ಕುಲಕರ್ಣಿ 4 ಬಾರಿ ಆಯ್ಕೆಯಾಗಿದ್ದರೆ, ಗಡ್ಡಿ ಹಾಗೂ ಮುನೇನಕೊಪ್ಪ 2 ಬಾರಿ ಆಯ್ಕೆಯಾದವರು. ಇನ್ನುಳಿದವರೆಲ್ಲರೂ 1 ಸಲ ಆಯ್ಕೆಯಾದವರು.
ಸತೀಶ್ ಜಾರಕಿಹೊಳಿ ಗೆಲುವಿನ ಓಟಕ್ಕೆ ಬಿಜೆಪಿ ಪಡೆ ಬ್ರೇಕ್ ಹಾಕುತ್ತಾ?
ಜಾತಿ ಲೆಕ್ಕಾಚಾರ: ಹುಬ್ಬಳ್ಳಿ, ಅಣ್ಣಿಗೇರಿ, ನವಲಗುಂದ ತಾಲೂಕುಗಳನ್ನೊಂಡ ಕ್ಷೇತ್ರದಲ್ಲಿ 2.07 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಲಿಂಗಾಯತರು 85 ಸಾವಿರ, (ಪಂಚಮಸಾಲಿಯೇ 40 ಸಾವಿರ), ಮುಸ್ಲಿಮರು 30, ಕುರುಬರು 35 ಸಾವಿರ, ರೆಡ್ಡಿ ಸಮುದಾಯ 12 ಸಾವಿರ, ಎಸ್ಸಿ/ಎಸ್ಟಿ35 ಸಾವಿರ, ಇತರರು 12 ಸಾವಿರಕ್ಕೂ ಅಧಿಕ ಮಂದಿಯಿದ್ದಾರೆ. ಹೀಗಾಗಿ, ಇಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ.