ಯಡಿಯೂರಪ್ಪಗೆ ಅರಳು ಮರಳು: ಪರಂ ಲೇವಡಿ

By Kannadaprabha NewsFirst Published Oct 30, 2018, 10:10 AM IST
Highlights

ಉಪಚುನಾವಣೆ ಕಾವು ದಿನದಿಂದ ಏರುತ್ತಿದೆ. ಒಬ್ಬರ ಮೇಲೆ ಮತ್ತೊಬ್ಬರ ಆರೋಪ, ಪ್ರತ್ಯಾರೋಪ ಮಾಡುವುದೂ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಹೇಳಿದ್ದೇನು?

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ 60 ವರ್ಷ ಆದ್ಮೇಲೆ ಅರಳೋ- ಮರಳೋ ಆಗಿದೆ. ಅದಕ್ಕೆ ಏನೇನೋ ಮಾತನಾಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಲೇವಡಿ ಮಾಡಿದರು. ಸೋಮವಾರ ಜಮಖಂಡಿಯ ಕಂಕಣವಾಡಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದದ್ದು ಯಾಕೆ ಎಂಬುದನ್ನು ಯಡಿಯೂರಪ್ಪ ಅವರನ್ನು ಕೇಳಬೇಕು. ಏನ್‌ ಸುಮ್ಮನೆ ಟೂರ್‌ ಮಾಡಿಕೊಂಡು ಬರಲು ಜೈಲಿಗೆ ಹೋಗಿದ್ರಾ ಎಂದು ಪ್ರಶ್ನಿಸಿದರು. ಆ ಯಮ್ಮಾ ಶೋಭಕ್ಕ ಬೇರೆ. ಅವರು ಎಂತೆಂಥದ್ದು ಮಾತನಾಡಿದ್ದೆ, ಮಾತನಾಡೋದು. ಇಡೀ ದೇಶವನ್ನು ಅಭಿವೃದ್ಧಿ ಮಾಡಿರೋದು ಪಾಪಾ ಆ ಯಮ್ಮಾನೇ ಎಂದು ವ್ಯಂಗ್ಯವಾಡಿದರು.

ಅವರ ಅಧಿಕಾರ ಅವಧಿಯಲ್ಲಿ ಅವರ ಸಂಪುಟದಲ್ಲಿ 14 ಸಚಿವರ ಮೇಲೆ ಕೇಸ್‌ ಹಾಕಲಾಗಿತ್ತು. 4 ಸಚಿವರು ಸೇರಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಇಂದಿಗೂ 14 ಮಂದಿ ಜಮೀನಿನ ಮೇಲೆ ಇದ್ದಾರೆ. ಯಡಿಯೂರಪ್ಪರ ಪ್ರಕರಣಗಳು ಇನ್ನೂ ಮುಗಿದಿಲ್ಲ ಎಂದರು.

ಮಾತಿನ ಮೇಲೆ ಹಿಡಿತವಿರಲಿ:

ತಮ್ಮ ಕುರಿತು ಈಶ್ವರಪ್ಪ ಅವರು ರಾಹು ಎನ್ನುವ ಹೇಳಿಕೆಗೆ ಉತ್ತರಿಸಿದ ಪರಮೇಶ್ವರ್‌, ಈಶ್ವರಪ್ಪ ಮಾತಿನ ಭರಾಟೆಯಲ್ಲಿ ಏನೇನೋ ಮಾತನಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತ ಇರಬೇಕು. ಇಂಥ ಮಾತುಗಳು ಸಾರ್ವಜನಿಕ ಬದುಕಿನಲ್ಲಿ ಒಳ್ಳೆಯದಲ್ಲ. ಅವರು ಯಾರಿಗೆ ರಾಹು, ಕೇತು ಎಂದು ಮಾತನಾಡುತ್ತಾರೆ ಎನ್ನುವುದು ನನಗೆ ಅಪ್ರಸ್ತುತ ಎಂದರು.

click me!