
ಬೆಂಗಳೂರು(ಅ.07): ಬಿಜೆಪಿ-ಜೆಡಿಎಸ್ ಮೈತ್ರಿ ಸಂಬಂಧ ತೀರ್ಮಾನ ಕೈಗೊಂಡಿರುವ ಪಕ್ಷದ ಹೈಕಮಾಂಡ್ ನಡೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಬಿಜೆಪಿ ನಾಯಕರನ್ನು ಹೊರಗಿಟ್ಟೇ ಪಕ್ಷದ ವರಿಷ್ಠರು ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿ ನಾಯಕತ್ವ ವಿಚಾರದಲ್ಲಿಯೂ ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದೂ ಅವರು ಬೇಸರ ಹೊರಹಾಕಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಯಾವುದೇ ವಿಚಾರದಲ್ಲಿ ರಾಜ್ಯದ ನಾಯಕರ ಜತೆ ಚರ್ಚೆ ನಡೆಸಿಲ್ಲ. ನಮ್ಮನ್ನು ಹೊರಗಿಟ್ಟೇ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನ ವಿಚಾರದಲ್ಲಿ ಸೂಕ್ತ ತೀರ್ಮಾನವಾಗಬೇಕಿತ್ತು. ಯಾವ ಸಮಯದಲ್ಲಿ ಏನು ತೀರ್ಮಾನವಾಗಬೇಕಿತ್ತೋ ಅದು ಆಗದಿರುವುದು ನೋವಿನ ಸಂಗತಿ. ಇದು ಕಾರ್ಯಕರ್ತರ ಮೇಲೆ ಪರಿಣಾಮ ಬೀರಲಿದೆ. ಕಾರ್ಯಕರ್ತರು ಸಹ ಪಕ್ಷ ಯಾಕೆ ಹೀಗಾಯಿತು ಎಂಬ ನೋವಿನಲ್ಲಿದ್ದಾರೆ. ಈಗಾಲಾದರೂ ನಾಯಕತ್ವದ ಬಗ್ಗೆ ವರಿಷ್ಠರು ಬೇಗ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ-ಜೆಡಿಎಸ್ ಪಕ್ಷಗಳದ್ದು ಅಪವಿತ್ರ ಮೈತ್ರಿ: ಸಿಎಂ ಸಿದ್ದರಾಮಯ್ಯ ಲೇವಡಿ
ಪಕ್ಷದ ವರಿಷ್ಠರು ತೀರ್ಮಾನ ಕೈಗೊಂಡಿಲ್ಲ ಎಂಬ ಕಾರಣಕ್ಕೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪಕ್ಷದ ಸಂಘಟನೆಯತ್ತ ಕೆಲಸ ಮಾಡುತ್ತೇವೆ. ಆದರೆ, ನಾಯಕತ್ವ ಆಯ್ಕೆಯಾದರೆ ಪಕ್ಷದ ಸಂಘಟನೆಯ ವೇಗ ಮತ್ತಷ್ಟು ಹೆಚ್ಚಾಗಲಿದೆ ಎಂದರು.
ಮೈತ್ರಿ ವಿಚಾರದಲ್ಲಿ ಸಮರ್ಪಕವಾದ ನಿಲುವು ತೆಗೆದುಕೊಳ್ಳುವ ಕುರಿತು ವರಿಷ್ಠರು ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ. ಹೊಂದಾಣಿಕೆ ವಿಚಾರದಲ್ಲಿ ಕೇಂದ್ರದ ಆದೇಶ ಬಂದ ಬಳಿಕ ರಾಜ್ಯದಲ್ಲಿ ಸಮಾಧಾನ ಮೂಡಿಸುವ ಕೆಲಸ ಮಾಡಲಾಗುವುದು. ರಾಜ್ಯದ ಹಿತಾಸಕ್ತಿಯಿಂದ ವರಿಷ್ಠರು ನೀಡುವ ಮಾರ್ಗದರ್ಶನವನ್ನು ಪಾಲನೆ ಮಾಡಬೇಕಾಗುತ್ತದೆ. ದೇಶದ ಒಟ್ಟಾರೆ ಪರಿಸ್ಥಿತಿಗನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಹೇಗಿರಬೇಕು ಎಂಬುದರ ಬಗ್ಗೆ ಸೂಚಿಸಲಾಗುತ್ತದೆ. ಅದರಂತೆ ರಾಜ್ಯ ನಾಯಕರು ನಡೆದುಕೊಳ್ಳಬೇಕಾಗುತ್ತದೆ ಎಂದರು.
ವಿಳಂಬ ಧೋರಣೆಯಿಂದ ಕಾರ್ಯಕರ್ತರಿಗೆ ಸಮಸ್ಯೆ
ಪಕ್ಷದ ವರಿಷ್ಠರು ಯಾವುದೇ ವಿಚಾರದಲ್ಲಿ ರಾಜ್ಯದ ನಾಯಕರ ಜತೆ ಚರ್ಚೆ ನಡೆಸಿಲ್ಲ. ನಮ್ಮನ್ನು ಹೊರಗಿಟ್ಟೇ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ನೇಮಕ ಆಗಬೇಕಿತ್ತು. ಅದರಲ್ಲಿನ ವಿಳಂಬವು ಕಾರ್ಯಕರ್ತರ ಮೇಲೆ ಪರಿಣಾಮ ಬೀರಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.