ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವೆ ಮಾತಿನ ಸಮರ ಮುಂದುವರಿದಿದ್ದು, ರಾಜ್ಯಕ್ಕೆ ಬರ ಪರಿಹಾರದ ಅನುದಾನ ನೀಡುವಲ್ಲಿ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ.
ಬೆಂಗಳೂರು (ಏ.07): ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವೆ ಮಾತಿನ ಸಮರ ಮುಂದುವರಿದಿದ್ದು, ರಾಜ್ಯಕ್ಕೆ ಬರ ಪರಿಹಾರದ ಅನುದಾನ ನೀಡುವಲ್ಲಿ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ. ಬದಲಿಗೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಬಾರದಿರುವ ಕಾರಣ ವಿಳಂಬವಾಗಿದೆ ಎಂದು ಕೇಂದ್ರದ ನಡೆಯನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ವಿಳಂಬಕ್ಕೆ ಕೇಂದ್ರ ಸರ್ಕಾರ ಕಾರಣ ಎಂಬ ರಾಜ್ಯ ಸರ್ಕಾರದ ಆರೋಪಗಳನ್ನು ತಳ್ಳಿ ಹಾಕಿದರು.
‘ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಲ್ಲ. ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿರುವ ವೇಳೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಆಗಮಿಸಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿತು. ಆ ವರದಿಯನ್ನು ಕೇಂದ್ರ ಕೃಷಿ ಮತ್ತು ಗೃಹ ಇಲಾಖೆ ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿಯೇ ಚುನಾವಣೆ ಘೋಷಣೆಯಾಯಿತು. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಆಯೋಗದ ಅನುಮತಿ ಇಲ್ಲದೆ ಯಾವುದೇ ಸಭೆಗಳನ್ನು ನಡೆಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಪರಿಹಾರ ವಿಳಂಬವಾಗಿದೆ’ ಎಂದು ಸಮಜಾಯಿಷಿ ನೀಡಿದರು.
ಲೋಕಸಭೆಗೆ ಭರ್ಜರಿ ಪ್ರಚಾರ ಆರಂಭ: ಮೊಳಗಿದ ಕಾಂಗ್ರೆಸ್ ಪ್ರಜಾಧ್ವನಿ ರಣಕಹಳೆ
ವಿಪತ್ತು ನಿರ್ವಹಣೆ ಪರಿಹಾರ ಸಂಬಂಧ ಕೇವಲ ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಮಿಜೋರಾಂ, ಅಸ್ಸಾಂ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ನೆರವು ಕೋರಿ ಪ್ರಸ್ತಾವನೆ ಸಲ್ಲಿಸಿವೆ. ಅವುಗಳು ಉನ್ನತಾಧಿಕಾರಿ ಸಮಿತಿಯ ಮುಂದಿದ್ದು, ಆಯೋಗದ ಅನುಮತಿ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಎನ್‌ಡಿಆರ್‌ಎಫ್ ಕಾಯ್ದೆಯಲ್ಲಿ ಪರಿಹಾರಕ್ಕೆ ಅವಕಾಶ ಇಲ್ಲ. ಕೇಂದ್ರವು ಪರಿಸ್ಥಿತಿ ಸುಧಾರಣೆಗೆ ಸಹಾಯ ಮಾತ್ರ ನೀಡುತ್ತದೆ. ತುರ್ತು ಪರಿಹಾರ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಸ್ಪಷ್ಟಪಡಿಸಿದರು.
15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಮಾತ್ರ 5,495 ಕೋಟಿ ರು. ವಿಶೇಷ ಅನುದಾನ ನೀಡಬೇಕು ಎಂಬ ಶಿಫಾರಸು ಇತ್ತು. ಆದರೆ, ಅಂತಿಮ ವರದಿಯಲ್ಲಿ ಅದರ ಬಗ್ಗೆ ಪ್ರಸ್ತಾಪ ಇರಲಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ಅನುದಾನ ನೀಡುವ ಪ್ರಶ್ನೆಯೇ ಬರುವುದಿಲ್ಲ. ವಿಶೇಷ ಅನುದಾನ ನೀಡಬೇಕು ಎಂಬ ರಾಜ್ಯ ಸರ್ಕಾರದ ವಾದದಲ್ಲಿ ಸತ್ಯಾಂಶ ಇಲ್ಲ. ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕೆ ನೆರವು ನೀಡಬೇಕೆಂಬ ಶಿಫಾರಸು ಸಹ ಇಲ್ಲ. ಹಣಕಾಸು ಆಯೋಗ ಹೇಳದಿದ್ದರೂ ಕೇಂದ್ರವು 50 ವರ್ಷಗಳ ಕಾಲ 8,035 ಕೋಟಿ ರು. ಬಡ್ಡಿರಹಿತ ಸಾಲ ನೀಡಿದೆ. ಇದರ ಬಗ್ಗೆ ಕಾಂಗ್ರೆಸ್‌ನವರು ಎಲ್ಲಿಯೂ ಚಕಾರ ಎತ್ತುವುದಿಲ್ಲ ಎಂದು ತಿರುಗೇಟು ನೀಡಿದರು.
ನನ್ನ ತೆರಿಗೆ ನನ್ನ ಹಕ್ಕು ಉದ್ದೇಶ ಸರಿ ಇಲ್ಲ: ‘ನನ್ನ ತೆರಿಗೆ, ನನ್ನ ಹಕ್ಕು ಘೋಷಣೆ ಒಳ್ಳೆಯದು. ಆದರೆ, ಅದರ ಬಗ್ಗೆ ಪ್ರಸ್ತಾಪಿಸಿರುವವರ ಉದ್ದೇಶ ಸರಿ ಇಲ್ಲ. ಬೆಂಗಳೂರಿನ ಜನತೆ ಇದೇ ರೀತಿ ಕೇಳಿದರೆ ಕಲ್ಯಾಣ ಕರ್ನಾಟಕ ಪರಿಸ್ಥಿತಿ ಏನಾಗಬಹುದು. ದೇಶದ ಹಿತಕ್ಕಾಗಿ ತೆರಿಗೆ ಪಾವತಿಸುತ್ತೇವೆ ಎಂಬುದನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು. ನನ್ನ ತೆರಿಗೆ ನನ್ನ ಹಕ್ಕು ಕುರಿತು ತಪ್ಪು ಅರ್ಥದಲ್ಲಿ ಮಾತನಾಡಿದರೆ ದೇಶದ ಅಭಿವೃದ್ಧಿಗೆ ಪೂರಕವಾಗಿರುವುದಿಲ್ಲ’ ಎಂದು ಕಿಡಿಕಾರಿದರು.
ಕರ್ನಾಟಕ ದ್ರೋಹಿ ಮೋದಿಗೆ ತಕ್ಕಪಾಠ ಕಲಿಸಿ: ಸಿಎಂ ಸಿದ್ದರಾಮಯ್ಯ ಕರೆ
ಗ್ಯಾರಂಟಿ ಬಗ್ಗೆ ಕಿಡಿ: ಇನ್ನು ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ಬೇಕಾಗಿದೆ. ಅದಕ್ಕೆ ಹಣ ಎಲ್ಲಿಂದ ತರುತ್ತಾರೆ? ಮುಖ್ಯಮಂತ್ರಿಗಳ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು 58 ಸಾವಿರ ಕೋಟಿ ರು. ಗ್ಯಾರಂಟಿಗಳಿಗಾಗಿ ವ್ಯಯಿಸಿರುವುದರಿಂದ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗಿವೆ ಎಂಬುದನ್ನು ಹೇಳಿದ್ದಾರೆ. ಅವರ ಪಕ್ಷದವರೇ ಅವರ ಯೋಜನೆಗಳಿಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆ, ಹಿಮಾಚಲ ಪ್ರದೇಶ ಮತ್ತಿತರ ಕಡೆ ಕಾಂಗ್ರೆಸ್ಸಿನವರು ಗ್ಯಾರಂಟಿ ಭರವಸೆ ನೀಡಿದ್ದರು. ಆದರೆ, ಅದು ಈಡೇರಿಲ್ಲ. ಪೂರ್ವತಯಾರಿ ಇಲ್ಲದೆ ಇಂತಹ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ ಉಪಸ್ಥಿತರಿದ್ದರು.