ಕಾಂಗ್ರೆಸ್‌ನ ಕಟ್ಟಾಳು ಶಾಮನೂರು ಶಿವಶಂಕರಪ್ಪ: ದಾವಣಗೆರೆಯ ಅಜೇಯ ರಾಜಕೀಯ ದಂತಕಥೆ

Published : Dec 15, 2025, 09:01 AM IST
Dr Shamanur Shivashankarappa

ಸಾರಾಂಶ

ಕಾಂಗ್ರೆಸ್‌ನ ಕಟ್ಟಾಳು ಎನಿಸಿಕೊಂಡಿರುವ ದಕ್ಷಿಣದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಶಾಮನೂರು ಕಲ್ಲಪ್ಪ ಹಾಗೂ ಸಾವಿತ್ರಮ್ಮ ಕಲ್ಲಪ್ಪ ದಂಪತಿಯ ಪುತ್ರರಾಗಿ 1931ರ ಜೂ.16ರಂದು ದಾವಣಗೆರೆಯಲ್ಲಿ ಜನಿಸಿದರು.

ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಕಟ್ಟಾಳು ಎನಿಸಿಕೊಂಡಿರುವ ದಕ್ಷಿಣದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಶಾಮನೂರು ಕಲ್ಲಪ್ಪ ಹಾಗೂ ಸಾವಿತ್ರಮ್ಮ ಕಲ್ಲಪ್ಪ ದಂಪತಿಯ ಪುತ್ರರಾಗಿ 1931ರ ಜೂ.16ರಂದು ದಾವಣಗೆರೆಯಲ್ಲಿ ಜನಿಸಿದರು. ಇಂಟರ್ ಮೀಡಿಯಟ್ ಶೀಕ್ಷಣ ಪೂರೈಸಿರುವ ಇವರು, ದಿ। ಪಾರ್ವತಮ್ಮ ಶಿವಶಂಕರಪ್ಪ ಅವರನ್ನು ವರಿಸಿದರು. ದಂಪತಿಗೆ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರು. ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರಾಗಿರುವ ಶಿವಶಂಕರಪ್ಪ ಅವರ ಎಸ್.ಎಸ್. ಬಕ್ಕೇಶ್ ಓರ್ವ ಉದ್ಯಮಿ. ಇನ್ನೋರ್ವ ಪುತ್ರ ಎಸ್.ಎಸ್. ಗಣೇಶ್ ಕಾಂಗ್ರೆಸ್ಸಿನ ಹಿರಿಯ ಮುಖಂಡನಾಗಿದ್ದುಕೊಂಡು ಉದ್ಯಮದಲ್ಲೂ ತೊಡಗಿದ್ದಾರೆ.

ಮತ್ತೋರ್ವ ಮಗ ಎಸ್.ಎಸ್. ಮಲ್ಲಿಕಾರ್ಜುನ ಅವರು ಪ್ರಸ್ತುತ ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವರಾಗಿದ್ದಾರೆ. ಡಾ.ಮಂಜುಳಾ ಶಿವಶಂಕರ್, ಸುಧಾ ರಾಜೇಂದ್ರ ಪಾಟೀಲ್, ಡಾ.ಶೈಲಜಾ ಭಟ್ಟಾಚಾರ್ಯ ಹಾಗೂ ಮೀನಾ ಡಾ.ಶರಣ ಪಾಟೀಲ್ ಇವರ ಪುತ್ರಿಯರು. ಶಿವಶಂಕರಪ್ಪ ಅವರು ಕೇವಲ ಒಬ್ಬ ರಾಜಕಾರಣಿಯಾಗಿ ಗುರುತಿಸಿಕೊಂಡಿರಲಿಲ್ಲ. ಕೈಗಾರಿಕೋದ್ಯಮಿಯಾಗಿರುವ ಇವರು, ವರ್ತಕ, ಜಮೀನ್ದಾರರೂ ಹೌದು. ಜತೆಗೆ, ಶಾಮನೂರು ಗ್ರೂಪ್ ಆಫ್‌ ಇಂಡಸ್ಟ್ರೀಸ್‌ನ ಅಧ್ಯಕ್ಷರೂ ಆಗಿದ್ದರು ಎಂಬುದು ವಿಶೇಷ. ಇದರ ಹೊರತಾಗಿ, ಸಮಾಜಮುಖಿ ವ್ಯಕ್ತಿಯೆಂದೇ ಖ್ಯಾತರಾಗಿದ್ದ ಶಿವಶಂಕರಪ್ಪ, ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಹಲವು ಸ್ಥಾನಮಾನ ಅಲಂಕರಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

ರಾಜಕೀಯ ಜೀವನ: ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಪಯಣ ಶುರುವಾಗಿದ್ದು ಸುಮಾರು 5 ದಶಕಗಳ ಹಿಂದೆ. 70ರ ದಶಕದಲ್ಲಿ ನಗರಸಭೆ ಸದಸ್ಯ, ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಕ್ರಿಯಾ ರಾಜಕೀಯಕ್ಕೆ ಎಸ್.ಶಿವಶಂಕರಪ್ಪ ಪಾದಾರ್ಪಣೆ ಮಾಡಿದರು. 1994ರಿಂದ 1998ರ ವರೆಗೆ ದಾವಣಗೆರೆ ಶಾಸಕರಾಗಿದ್ದ ಶಿವಶಂಕರಪ್ಪ ಅವರು 1998ರಿಂದ 1999ರ ವರೆಗೆ ಅಧಿಕಾರದಲ್ಲಿದ್ದರು. 2013ರಲ್ಲಿ ದಾವಣಗೆರೆ ದಕ್ಷಿಣದಿಂದ ಪುನರಾಯ್ಕೆಯಾದ ಇವರು, 2016ರವರೆಗೆ ತೋಟಗಾರಿಕೆ, ಎಪಿಎಂಸಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ತೋಟಗಾರಿಕೆ, ಎಪಿಎಂಸಿ ಹಾಗೂ ಜಿಲ್ಲಾ ಉಸ್ತುವಾರಿ ಮಾಜಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಹೀಗೆ, ಹಂತಹಂತವಾಗಿ ಅಧಿಕಾರಕ್ಕೇರುತ್ತಾ ಸಾಗಿದ ಶಿವಶಂಕರಪ್ಪನವರು, ತಮ್ಮ ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆಯಾಗಿ ಕಾಯ್ದುಕೊಂಡಿದ್ದ ಅಜೇಯ ಶಾಸಕರು ಎಂದೇ ಪ್ರಸಿದ್ಧರು.

ರಾಜಕೀಯೇತರ ಸೇವೆ: ರಾಜಕಾರಣದ ಹೊರತಾಗಿಯೂ ಡಾ। ಶಾಮನೂರು ಶಿವಶಂಕರಪ್ಪ ಅವರು ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿಯಾಗಿದ್ದ ಇವರು, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ನೂರಾರು ಸಂಘ-ಸಂಸ್ಥೆಗೆ ಅಜೀವ ಗೌರವಾಧ್ಯಕ್ಷರು, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ, ನೂರಾರು ಕ್ರೀಡಾ ಸಂಸ್ಥೆಗಳ ಮಹಾ ಪೋಷಕರು, ಗೌರವಾಧ್ಯಕ್ಷರು ಹಾಗೂ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು

ಅನವರತ ಸೇವೆಗಾಗಿ ಶಿವಶಂಕರಪ್ಪ ಅವರಿಗೆ ಹಲವು ಪ್ರಶಸ್ತಿಗಳು ಒಲಿದಿವೆ. ರೋಟರಿ ಇಂಟರ್ ನ್ಯಾಷನಲ್ ಪಾಲ್ ಹ್ಯಾರಿಸ್ ಪೆಲೋ, ಶಿರೋಮಣಿ ವಿಕಾಸ್ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಮುಂಬೈನ ಇಂಡಿಯನ್ ಕೌನ್ಸಿಲ್ ಆ- ಮ್ಯಾನೇಜ್‌ಮೆಂಟ್ ಎಕ್ಸಿಕ್ಯೂಟಿವ್ ಸಂಸ್ಥೆಯ ಪ್ರತಿಷ್ಟಿತ ಪ್ರಶಸ್ತಿ, ದೆಹಲಿಯ ಗ್ಲೋಬಲ್ ಫೋರಂನ ಎಕ್ಸೆಲೆನ್ಸ್ ಪುರಸ್ಕ್ರಾರ, ಎನ್‌ಆರ್‌ಐ ಇನ್‌ಸ್ಟಿಟ್ಯೂಟ್ ದಿ ಇಂಟರ್ ನ್ಯಾಷನಲ್ ಬಿಸಿನೆಸ್ ಅಕ್ಯುಮೆನ್ ಪ್ರಶಸ್ತಿ, ಭಾರತ್ ಗೌರವ್ ಪ್ರಶಸ್ತಿಗಳು ಇವರ ಪಾಲಾಗಿವೆ.

ದಾವಣಗೆರೆ ಮಹಾ ಜನತೆಯಿಂದ ‘ವಿದ್ಯಾಶ್ರೀ’, ಶ್ರೀ ಶಾಮನೂರು ಶಿವಶಂಕರಪ್ಪ ಅಭಿಮಾನಿ ಸಂಘದಿಂದ ‘ನಿತ್ಯ ಸೇವಾ ಯಜ್ಞಧಾರಿ’ ಬಿರುದು ಸೇರಿದಂತೆ ನೂರಾರು ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ. ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಡಾ। ಶಿವಶಂಕರಪ್ಪ ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಮಠಮಾನ್ಯಗಳಿಂದ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಸಿರಿಗೆರೆಯ ತರಳಬಾಳು ಬೃಹನ್ಮಠದಿಂದ ‘ಧರ್ಮ ಚೂಡಾಮಣಿ’ ಬಿರುದು, ಚಿತ್ರದುರ್ಗ ಮುರುಘಾ ಮಠದಿಂದ ‘ಶಿಕ್ಷಣ ಸುಧಾರಕ ಪುರಸ್ಕಾರ’, ಆದಿನಾಥ ಪ್ರತಿಷ್ಟಾನದಿಂದ ‘ಶತಮಾನದ ಶ್ರೇಷ್ಠ ಪ್ರಶಸ್ತಿ’ ಇವರಿಗೆ ಒಲಿದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಸಂಪುಟದಲ್ಲಿ ಕೂಡಿ ಬಂದ ಕಾಲ: ಶತಮಾನದ ಶ್ರೇಷ್ಠ ವ್ಯಕ್ತಿತ್ವದ ರಾಜಕಾರಣಿ ಶಿವಶಂಕರಪ್ಪ
ದಾವಣಗೆರೆಯನ್ನು ಎತ್ತರಕ್ಕೇರಿಸಿದ ವಾಮನಮೂರ್ತಿ: ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟ ಶಾಮನೂರು