
ಚಿಕ್ಕಮಗಳೂರು (ಮೇ 06): ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಅನಿಶ್ಚಿತತೆಗೆ ಕೊನೆಗೂ ತೆರೆಬಿದ್ದಿದೆ. ಸುದೀರ್ಘ ಮೂರು ವರ್ಷಗಳ ಕಾನೂನು ಹೋರಾಟದ ಬಳಿಕ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಫಲಿತಾಂಶ ಹೊರಬಂದಿದ್ದು, ಬಿಜೆಪಿಯ ಡಿ.ಎನ್. ಜೀವರಾಜ್ ಅವರು ಶೃಂಗೇರಿಯ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಗೆಲುವು ಕೇವಲ ರಾಜಕೀಯ ಜಯ ಮಾತ್ರವಲ್ಲದೆ, ಇದರ ಹಿಂದೆ ಒಂದು ರೋಚಕ ಭವಿಷ್ಯವಾಣಿಯ ಕಥೆಯೂ ಅಡಗಿದೆ.
ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ವೇಳೆ ಅಂಚೆ ಮತಗಳ ಎಣಿಕೆಯಲ್ಲಿ ಲೋಪವಾಗಿದೆ ಎಂದು ಡಿ.ಎನ್. ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು. ಅಂದಿನಿಂದ ಇಂದಿನವರೆಗೂ ಸತತ ಮೂರು ವರ್ಷಗಳ ಕಾಲ ಅವರು ಸುದೀರ್ಘ ಕಾನೂನು ಹೋರಾಟ ನಡೆಸಿದರು. ಈ ಕಠಿಣ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಜೀವರಾಜ್ ಅವರ ಪರವಾಗಿ ಭದ್ರವಾದ ಬೆನ್ನೆಲುಬಾಗಿ ನಿಂತಿದ್ದರು. ಇದೀಗ ಮರು ಎಣಿಕೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಜೀವರಾಜ್ ಅವರ ಮುಖದಲ್ಲಿ ಮಂದಹಾಸ ಮೂಡಿದೆ.
ಈ ವಿಜಯದ ಹಿಂದೆ ದೈವಿಕ ಶಕ್ತಿಯೂ ಕೆಲಸ ಮಾಡಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಜೀವರಾಜ್ ಅವರು ಈ ಬಾರಿಯ ಕೋರ್ಟ್ ಸಂಕಷ್ಟದಿಂದ ಪಾರಾಗಿ ಶಾಸಕರಾಗಲೇಬೇಕೆಂದು ಬಾಳೆಹೊನ್ನೂರಿನ ಪ್ರಬಲ ಹಿಂದೂ ಕಾರ್ಯಕರ್ತ ಜಗದೀಶ್ ಅವರು ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಹರಕೆ ಹೊತ್ತಿದ್ದರು.
ಮಕರ ಜ್ಯೋತಿ ದರ್ಶನದ ಸಂದರ್ಭದಲ್ಲಿ ಶಬರಿಮಲೆಗೆ ತೆರಳಿದ್ದ ಜಗದೀಶ್, ಸ್ವಾಮಿಯ ಸನ್ನಿಧಾನದಲ್ಲಿ ಡಿ.ಎನ್. ಜೀವರಾಜ್ ಅವರ ಭಾವಚಿತ್ರವನ್ನು ಇಟ್ಟು ಕಣಿ ಕೇಳಿದ್ದರು. ಈ ವೇಳೆ ಅಲ್ಲಿನ ಪೂಜಾರಿಯು, "ನಿಮ್ಮ ನಾಯಕ ಶೀಘ್ರದಲ್ಲೇ ಶಾಸಕರಾಗುತ್ತಾರೆ, ಕಳವಳ ಬೇಡ" ಎಂದು ಭವಿಷ್ಯ ನುಡಿದಿದ್ದರು. ಅಚ್ಚರಿಯೆಂದರೆ, ಈ ಭವಿಷ್ಯ ನುಡಿದ ಕೇವಲ ನಾಲ್ಕೇ ತಿಂಗಳಲ್ಲಿ ನ್ಯಾಯಾಲಯದ ಆದೇಶದಂತೆ ನಡೆದ ಮರು ಎಣಿಕೆಯಲ್ಲಿ ಜೀವರಾಜ್ ವಿಜೇತರಾಗಿ ಘೋಷಿಸಲ್ಪಟ್ಟಿದ್ದಾರೆ.
ತಮ್ಮ ನಾಯಕನ ಪರವಾಗಿ ದೈವಿಕ ಹರಕೆ ಹೊತ್ತಿದ್ದ ಕಾರ್ಯಕರ್ತರ ಅಚಲ ವಿಶ್ವಾಸಕ್ಕೆ ಈಗ ಪ್ರತಿಫಲ ಸಿಕ್ಕಿದೆ. ರಾಜಕೀಯ ಹೋರಾಟದ ಜೊತೆಗೆ ದೈವದ ಆಶೀರ್ವಾದವೂ ಜೀವರಾಜ್ ಅವರಿಗೆ ಒಲಿದಿದೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಈ ಫಲಿತಾಂಶ ಶೃಂಗೇರಿ ಕ್ಷೇತ್ರದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಸದ್ಯ ಎಲ್ಲೆಡೆ ಈ ಭವಿಷ್ಯವಾಣಿಯದ್ದೇ ಮಾತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.