Chikkamagaluru : ಡಿಕೆಶಿಯನ್ನ ಬರಮಾಡಿಕೊಳ್ಳಲು ಕೈ ಬಣದ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ

By Suvarna NewsFirst Published Nov 29, 2022, 8:20 PM IST
Highlights

ಆದಷ್ಟು ಬೇಗ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಹೆಚ್ಚು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ದೊರೆಯಲಿದೆ ಎಂದರು.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ನ.29): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿತ್ತು. ಚುನಾವಣೆಗೆ ಇನ್ನೇನೂ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನ ಸಜ್ಜುಗೊಳಿಸಲು ಕೈ ಪಡೆ ಮುಂದಾಗಿತ್ತು.  ಸಮಾವೇಶವನ್ನ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಘಾಟಿಸಿದ್ರು. ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದ ಸಭಾಂಗಣದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡಿತ್ತು. ಕಾಂಗ್ರೆಸ್ ನಾಯಕರಾದ ಬಿ.ಎಲ್ ಶಂಕರ್, ಧೃವನಾರಾಯಣ, ಮೋಟಮ್ಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ರು. ಇನ್ನೂ ಸಮಾವೇಶಕ್ಕೂ ಮುನ್ನ ಡಿಕೆ ಶಿವಕುಮಾರನ್ನ ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಭಾರೀ ಪೈಪೋಟಿ ನಡೆಯಿತು. ಕೈ ಟಿಕೇಟ್ ಆಕಾಂಕ್ಷಿಗಳಾದ ನಯನಾ ಮೋಟಮ್ಮ ಹಾಗೂ ನಾಗರತ್ನ ಪ್ರತ್ಯೇಕ ಸೇಬಿನ ಹಾರಗಳನ್ನ ಕ್ರೇನ್ನಲ್ಲಿ ಹಾಕಿ ಬರಮಾಡಿಕೊಂಡರು.

ಬಿಎಸ್ವೈ, ಅಮಿತ್ ಶಾನೂ ಜೈಲಿಗೆ ಹೋಗಿದ್ದಾರೆ!
ಬಿ.ಎಸ್ ಯಡಿಯೂರಪ್ಪ, ಅಮಿತ್ ಶಾ ನೂ ಜೈಲಿಗೆ ಹೋಗಿದ್ದಾರೆ, ನಾನು ಜೈಲಿಗೆ ಹೋಗಿದ್ದೇನೆ ಆದ್ರೆ ರಾಜಕೀಯ ಪ್ರೇರಿತವಾಗಿ ನನ್ನನ್ನ ಜೈಲಿಗೆ ಕಳುಹಿಸಿದ್ರು ಅಂತಾ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತಿಹಾರ್ ಜೈಲಿಗೆ ಹೋದವರು ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಬಡ್ತಿ ಪಡೆದಿದ್ದಾರೆ ಎಂಬ ಬಿಜೆಪಿ ಟ್ವೀಟ್ಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿ ನನ್ನ ಮೇಲೆ ಯಾವುದೇ ರೌಡಿಶೀಟರ್ ಇಲ್ಲ, ಯಡಿಯೂರಪ್ಪ-ಅಮಿತ್ ಶಾ ಎಲ್ಲರೂ ಜೈಲಿಗೆ ಹೋಗಿ ಬಂದಿದ್ದಾರೆ. ನನ್ನನ್ನ ರಾಜಕೀಯ ಪ್ರೇರಿತವಾಗಿ ಜೈಲಿಗೆ ಕಳುಹಿಸಲಾಯ್ತು ಎಂದರು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನ ಮೊದಲು ನೋಡಿಕೊಳ್ಳಲಿ ಅಂತಾ ಹೇಳಿದ್ರು.

ಅಭ್ಯರ್ಥಿಗಳ ಪಟ್ಟಿ ಆದಷ್ಟು ಬೇಗ
ಆದಷ್ಟು ಬೇಗ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಒಂದೊಂದು ಕ್ಷೇತ್ರದಲ್ಲಿ ಹೆಚ್ಚು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ದೊರೆಯಲಿದೆ ಎಂದು ನುಡಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂಬ ಆಶಯವನ್ನು ಹೊರಹಾಕಿದ ಕೆಪಿಸಿಸಿ ಅಧ್ಯಕ್ಷರು, ಅಪರಾಧ ಹಿನ್ನೆಲೆಯ ಇರುವ ವ್ಯಕ್ತಿಗಳು ಕಾಂಗ್ರೆಸ್ ಸೇರಿತ್ತಿರುವ ಬಗ್ಗೆ ಟೀಕೆಗಳ ವ್ಯಕ್ತವಾಗುತ್ತಿರುವ ಬಗ್ಗೆ ಗಮನ ಸೆಳೆದಾಗ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಅಮಿತ್ ಅವರುಗಳು ಜೈಲಿಗೆ ಹೋಗಿಲ್ಲವೆ ಎಂದು ಪ್ರಶ್ನಿಸಿ ನಾನು ಜೈಲಿಗೆ ಹೋಗಿ ಬಂದಿದ್ದೇನೆ. ನನ್ನದು ರಾಜಕೀಯ ಪ್ರೇರಿತ ಜೈಲು ಎಂದು ಹೇಳಿಕೊಂಡರು.

Chitradurga: ಡಿಕೆಶಿ ಸಭೆಯಲ್ಲಿ ಕೈ ಮುಖಂಡರ ಜೇಬಿಗೆ ಕತ್ತರಿ: ಕಳ್ಳನ ಕೈಸೇರಿದ 15 ಸಾವಿರ 

ವಿವಿಧ ಪಕ್ಷಗಳಿಂದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರುಗಳನ್ನು ತಡೆಯಲು ಸಂವಿಧಾನಿಕ ಸಂಸ್ಥೆಗಳಿಂದ ದಾಳಿ ನಡೆಸುವ ಬೆದರಿಕೆ ಒಡ್ಡಲಾಗುತ್ತಿದೆ. ಇದಕ್ಕೆಲ್ಲ ಹೆದರುವ ಅಗತ್ಯತೆ ಇಲ್ಲವೆಂದರು. ನುಡಿದಂತೆ ನಡೆದುಕೊಳ್ಳದಿರುವುದರಿಂದ ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲವೆಂದು ಭವಿಷ್ಯ ನುಡಿದ ಡಿಕೆಶಿ, ರಾಜ್ಯದಲ್ಲಿ ಮನೆಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಹಕ್ಕುಪತ್ರ ಕೊಡದೆ ಒಕ್ಕಲಿಬ್ಬಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೆದರಿ ಓಡಿಹೋಗಬೇಕಾಗಿಲ್ಲ ಅವರುಗಳಿಗೆ ಕಾಂಗ್ರೆಸ್ ಪಕ್ಷ  ಕಾನೂನಿನ ರಕ್ಷಣೆ ನೀಡಲಿದೆ ಎಂದು ಭರವಸೆ ನೀಡಿದರು.

KPCC Ticket Fight: ಡಿಕೆಶಿಗೆ ಸಿಕ್ಕಿದ್ಯಾ ಸಿದ್ದು ಲೆಕ್ಕಾಚಾರದ ಸುಳಿವು? ಟಗರಿಗೆ ಟಕ್ಕರ್ ಕೊಟ್ರಾ ಬಂಡೆ?

ರಾಜ್ಯದಲ್ಲಿ ರಸ್ತೆಗಳಿಗೆ ಗುಂಡಿ ಮುಚ್ಚಿಲ್ಲದಿರುವುದರಿಂದ ಅನೇಕರು ಪ್ರಾಣಕಳೆದುಕೊಂಡಿದ್ದಾರೆ. ಈ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯೊಬ್ಬರು ಅಸುನೀಗಿದ್ದಾರೆ. ಸರ್ಕಾರಕ್ಕೆ ಜನರ ಜೀವ ಮುಖ್ಯವಾಗಿ ಕಾಣುತ್ತಿಲ್ಲ, ಶೇ.40 ಕಮೀಷನ್ ಸರ್ಕಾರವಿದ್ದು, ರಾಜ್ಯದ ಗೌರವ ಹಾಳಾಗಿ ಹೋಗುತ್ತಿದೆ. ಬಂಡವಾಳ ಹೂಡಲು ಯಾವ ಉದ್ಯಮಿಗಳ ಮುಂದೆ ಬರುತ್ತಿಲ್ಲವೆಂದರು.ಸರ್ಕಾರ ಹುದ್ದೆಗೆ ಲಂಚನೀಡಬೇಕಾಗಿದ್ದು, ಅನೇಕ ಅಧಿಕಾರಿಗಳು ಜೈಲಿಗೆ ಹೋಗುವಂತಾಗಿದೆ. ಚಿಲುಮೆ ಸಂಸ್ಥೆ ಮೂಲಕ ರಾಜ್ಯ ಸರ್ಕಾರ ಓಟು ಕಳ್ಳತನಕ್ಕೆ ಮುಂದಾಗಿದ್ದು, ಈಗಾಗಲೇ ಇಬ್ಬರು ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಭ್ರಷ್ಟಾಚಾರ ಎನ್ನುವುದು ಎಲ್ಲಾ ಇಲಾಖೆಗೂ ವ್ಯಾಪಿಸಿದೆ ಎಂದು ಆರೋಪಿಸಿದರು.

click me!