ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್

Published : Mar 05, 2026, 07:04 PM IST
DK Shivakumar

ಸಾರಾಂಶ

ನಮ್ಮ ಜಿಲ್ಲೆಯ ಕೆಲಸಗಳು ಬಜೆಟ್ ಮೇಲೆ ನಿಂತಿಲ್ಲ. ಬೇರೆಯವರಿಗೆ ಬಜೆಟ್ ಬೇಕಾಗಿರಬಹುದು, ನಮಗೆ ಬೇಡ. ಪೆನ್ನು ಪೇಪರ್ ನನ್ನ ಹತ್ತಿರವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಾಗಡಿ (ಮಾ.05): ನಮ್ಮ ಜಿಲ್ಲೆಯ ಕೆಲಸಗಳು ಬಜೆಟ್ ಮೇಲೆ ನಿಂತಿಲ್ಲ. ಬೇರೆಯವರಿಗೆ ಬಜೆಟ್ ಬೇಕಾಗಿರಬಹುದು, ನಮಗೆ ಬೇಡ. ಪೆನ್ನು ಪೇಪರ್ ನನ್ನ ಹತ್ತಿರವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಬಜೆಟ್ ಇರಲಿ, ಇಲ್ಲದಿರಲಿ, ನಾವು ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುತ್ತೇವೆ. ಇಡೀ ದೇಶದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಾತ್ರ ಒಂದು ಶಾಲೆಗೆ 15 ಕೋಟಿ ರುಪಾಯಿ ವೆಚ್ಚದಂತೆ 25 ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ನಾವು ಬಜೆಟ್ ನಲ್ಲಿ ಬರೆಸಿದ್ದೇವಾ? ಈ ಯೋಜನೆ ಸೃಷ್ಟಿಕರ್ತರು ನಾವೇ.

ಇಡೀ ರಾಜ್ಯದಲ್ಲಿ ಈ ಯೋಜನೆ ವಿಸ್ತರಿಸಲು ಹೊಸ ನೀತಿ ರೂಪಿಸಿದ್ದೇವೆ. ರಾಜ್ಯದೆಲ್ಲೆಡೆ 2 ಸಾವಿರ ಶಾಲೆಗಳ ನಿರ್ಮಾಣ ಮಾಡುವ ಗುರಿ ಇದೆ. ಬೇರೆಯವರಿಗೆ ಬಜೆಟ್ ಬೇಕಾಗುತ್ತದೆ. ನಮಗೆ ಬಜೆಟ್ ನಲ್ಲಿ ಸೇರಿಸಿ ಕೆಲಸ ಮಾಡಬೇಕು ಎಂದೇನಿಲ್ಲ ಎಂದು ಹೇಳಿದರು. ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸೇರಿಸಿದ್ದೆ. ಯಡಿಯೂರಪ್ಪ ಸರ್ಕಾರ ಬಂದ ನಂತರ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದರು. ಈಗ ನಾವು ರಾಮನಗರ ಹಾಗೂ ಕನಕಪುರ ತಾಲೂಕಿಗೂ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಚನ್ನಪಟ್ಟಣಕ್ಕೂ ಖಾಸಗಿ ಮೆಡಿಕಲ್ ಕಾಲೇಜು ನೀಡಿದ್ದೇವೆ. ಕನಕಪುರ ಹಾಗೂ ರಾಮನಗರ ಮಧ್ಯೆ ದಯಾನಂದ ಸಾಗರ್ ಮೆಡಿಕಲ್ ಕಾಲೇಜು ಇದೆ. ಮುಂದೆ ಮಾಗಡಿ ಕ್ಷೇತ್ರಕ್ಕೆ ಏನು ಮಾಡಬೇಕು ಎಂಬ ಅರಿವು ಇದೆ ಎಂದು ತಿಳಿಸಿದರು.

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಜಾರಿ ಬಗ್ಗೆ ಕೇಳಿದಾಗ, “ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಒಂದಿಬ್ಬರು ಕೇಳಿದ ಹಿನ್ನೆಲೆಯಲ್ಲಿ ಅವರಿಗೆ ಅನುದಾನ ನೀಡಿದ್ದೇವೆ. ಈ ಯೋಜನೆ ಕೆಲಸ ನಡೆಯಲಿದೆ. ತಲೆಕೆಡಿಸಿಕೊಳ್ಳುವುದು ಬೇಡ ಎಂದರು. ಸತ್ತೇಗಾಲದಿಂದ ನೀರು ಬರುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ, ಕಾಲುವೆ ಕಾಮಗಾರಿ ನಡೆಯುತ್ತಿದ್ದು, ನಾನು ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಿದ್ದೇನೆ. ಆ ಕೆಲಸ ಕೂಡ ಆಗಲಿದೆ ಎಂದು ಹೇಳಿದರು. ವಿದೇಶಕ್ಕೆ ತೆರಳಿದ್ದ ಶಾಸಕರು ವಾಪಸ್ಸಾಗಿದ್ದು, ನಿಮ್ಮನ್ನು ಭೇಟಿ ಮಾಡಿದ್ದಾರಾ ಎಂದು ಕೇಳಿದಾಗ, ಬಂದು ಭೇಟಿ ಮಾಡುತ್ತಿದ್ದಾರೆ. ಪ್ರವಾಸದಲ್ಲಿ ಏನೆಲ್ಲಾ ನೋಡಿದರು ಎಂದು ತಿಳಿಸುತ್ತಿದ್ದಾರೆ ಎಂದು ಹೇಳಿದರು.

ಮಾಗಡಿಗೆ ಕಾವೇರಿ, ಹೇಮೆ, ಎತ್ತಿನಹೊಳೆ ನೀರು

ಮಾಗಡಿ: ಮಾಗಡಿ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್‌ಗಳನ್ನು ಈಗಾಗಲೇ ಕರೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ತಾಲೂಕಿನ ಚಕ್ರಭಾವಿಯಲ್ಲಿ ನಡೆದ ವೈ.ಜಿ.ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅ‍ವರು, ಸತ್ತೇಗಾಲದಿಂದ ಇಗ್ಗಲೂರಿಗೆ 26 ಕಿ.ಮೀ. ಇಗ್ಗಲೂರಿನಿಂದ ಮೊಗೇನಹಳ್ಳಿಗೆ 58 ಕಿ.ಮೀ. ಮೊಗೇನಹಳ್ಳಿಯಿಂದ ಕಣ್ವಕ್ಕೆ 6 ಕಿ.ಮೀ, ಕಣ್ವದಿಂದ ವೈ.ಜಿ.ಗುಡ್ಡಕ್ಕೆ 25 ಕಿ.ಮೀ ಸೇರಿ ಒಟ್ಟು 115 ಕಿ.ಮೀ ಮಾರ್ಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರನ್ನು ಪಂಪ್ ಮಾಡಿ ಹರಿಸಲಾಗುವುದು ಎಂದರು.

ಈ ನೀರನ್ನು ಅಂತರ್ಜಲ ಹೆಚ್ಚಳ ಮಾಡಲು ತರುತ್ತಿದ್ದೇವೆ. ಇದಕ್ಕೆ 160 ಎಚ್.ಪಿ ಪಂಪ್ ಮೂಲಕ 115 ಕಿ.ಮೀ ದೂರಕ್ಕೆ ಲಿಫ್ಟ್ ಮಾಡಲಾಗುತ್ತಿದೆ. ಆ ಮೂಲಕ ಈ ಭಾಗದ ಕೆರೆಗಳನ್ನು ತುಂಬಿಸುತ್ತಿದ್ದೇವೆ. ಇದರಿಂದ ರೈತರಿಗೆ ಶಕ್ತಿ ತುಂಬುವಂತಾಗುತ್ತದೆ. ಸರ್ಕಾರದಲ್ಲಿ ನನಗೆ ನೀರಾವರಿ ಇಲಾಖೆ ಜವಾಬ್ದಾರಿ ನೀಡಿದೆ. ಇದೇ ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ಕುಣಿಗಲ್ ರೈತರಿಗೆ ನೀರು ಹರಿಸಲು ಮುಂದಾಗಿದ್ದೇವೆ. ಈ ನೀರಿಗಾಗಿ ಹೋರಾಟ ಮಾಡಿದ ವೈ.ಕೆ ರಾಮಯ್ಯ, ಹುಚ್ಚಮಾಸ್ತಿಗೌಡರ ಹೆಸರನ್ನು ಜನ ಇವತ್ತಿಗೂ ಚರ್ಚೆ ಮಾಡುತ್ತಿದ್ದಾರೆ. ಆದರೆ 4 ಬಾರಿ ಗೆದ್ದಿರುವ ನಾಗರಾಜಯ್ಯ ಅವರ ಹೆಸರನ್ನು ಜನ ಮಾತನಾಡುತ್ತಿಲ್ಲ ಏಕೆಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ‌‌, ಅತ್ತು ನಾಟಕ ಮಾಡಲ್ಲ: ಡಿ.ಕೆ.ಸುರೇಶ್ ವಾಗ್ದಾಳಿ
ಮೀಸಲಾತಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಕುಮ್ಮಕ್ಕು: ಸಂಸದ ಕಾರಜೋಳ ಆರೋಪ