
ಬೆಂಗಳೂರು (ಜೂ.01): ಕೆಲ ಜಿಲ್ಲೆಗಳಲ್ಲಿ ಅಪಘಾತ ಪ್ರಕರಣಗಳ ಹೆಚ್ಚಳ, ಬಾಲ್ಯ ವಿವಾಹ, ಬಾಲಗರ್ಭಿಣಿ ಪ್ರಕರಣಗಳು, ಮಕ್ಕಳು, ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಇದೆಲ್ಲದಕ್ಕೂ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಡಿಸಿ, ಎಸ್‌ಪಿ ಮತ್ತು ಸಿಇಒಗಳೊಂದಿಗೆ ಶುಕ್ರವಾರ ಮತ್ತು ಶನಿವಾರ 18 ಗಂಟೆಗಳ ಕಾಲ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ರಸ್ತೆ ಸುರಕ್ಷತಾ ಸಪ್ತಾಹಗಳನ್ನು ಕಾಟಾಚಾರಕ್ಕೆ ನಡೆಸಬಾರದು. ಪೌಷ್ಟಿಕಮಟ್ಟ ಸುಧಾರಣೆಯಾಗದ್ದಕ್ಕೆ ವೈಜ್ಞಾನಿಕ ವರದಿ ನೀಡಿ. ಬಾಲ್ಯ ವಿವಾಹ, ಬಾಲಗರ್ಭಿಣಿ ಪ್ರಕರಣ ತಡೆಯುವಿಕೆ ನಿರ್ಲಕ್ಷಿಸುವ ಪಿಡಿಒಗಳು, ರೆವೆನ್ಯೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ. ಶೇಕಡಾವಾರು ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪ್ರತಿ ವರ್ಷ ಶೇ.1ರಷ್ಟು ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡುವ ಗುರಿ ತೆಗೆದುಕೊಳ್ಳಿ. ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಕಠಿಣ ಕ್ರಮ ಕೈಗೊಂಡರೆ ಮೈಕ್ರೋ ಫೈನಾನ್ಸ್ ಹಾವಳಿಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮಟ್ಟ ಹಾಕಲು ಸಾಧ್ಯವಿದೆ ಎಂದು ಸೂಚಿಸಿದರು.
ಕುರಿಗಾಹಿಗಳಿಗೆ ತೊಂದರೆ ಆಗಕೂಡದು: ಕುರಿಗಾಹಿಗಳ ಮೇಲೆ ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕೇಸು ದಾಖಲಿಸುವುದು ಮತ್ತು ಅನಗತ್ಯ ತೊಂದರೆ ಕೊಡುವ ಬಗ್ಗೆ ವರದಿಗಳು, ದೂರುಗಳು ಬಂದಿವೆ. ಇದನ್ನು ತಪ್ಪಿಸಿ. ಕುರಿಗಾಹಿಗಳಿಗೆ ಕುರಿಗಳ ಮತ್ತು ತಮ್ಮ ಜೀವದ ರಕ್ಷಣೆಗೆ ಬಂದೂಕು ಪರವಾನಗಿ ಕೊಡಬೇಕು ಎಂದು ಸೂಚಿಸಿದ್ದೆ. ಅದಿನ್ನೂ ಕೆಲ ಕಡೆ ಜಾರಿಗೆ ಬಂದಿಲ್ಲ. ಕುರಿಗಳ್ಳರು ಕುರಿಗಳನ್ನು ಕದಿಯುವ ಜೊತೆಗೆ, ಕುರಿಗಾಹಿಗಳನ್ನು ಕೊಲೆ ಮಾಡಿರುವ ಘಟನೆಗಳೂ ನಡೆದಿವೆ. ಹೀಗಾಗಿ ಬಂದೂಕು ಪರವಾನಗಿ ಕೊಡುವುದನ್ನು ಸಮರ್ಪಕಗೊಳಿಸಬೇಕು ಎಂದು ಸಿಎಂ ತಿಳಿಸಿದ್ದಾರೆ.
ಅರಣ್ಯೀಕರಣದ ವರದಿ ಕೇಳಿದ ಸಿಎಂ: ರಾಜ್ಯದಲ್ಲಿ 15,16,731 ಎಕರೆ ಅರಣ್ಯೀಕರಣಕ್ಕೆ ಜಮೀನು ಲಭ್ಯವಿದೆ. 8.5 ಕೋಟಿ ಸಸಿಗಳನ್ನು ಕಳೆದೆರಡು ವರ್ಷಗಳಲ್ಲಿ ನೆಡಲಾಗಿದೆ. ಪ್ರತಿ ವರ್ಷ ಎಷ್ಟು ಎಕರೆ ಅರಣ್ಯೀಕರಣವಾಗಿದೆ? ಕಳೆದ 10ವರ್ಷಗಳಲ್ಲಿ ಎಷ್ಟು ಎಕರೆ ಅರಣ್ಯೀಕರಣ ಮಾಡಲಾಗಿದೆ ಎಂಬ ಮಾಹಿತಿ ಒದಗಿಸುವಂತೆ ಹಾಗೂ ಅರಣ್ಯೀಕರಣಕ್ಕೆ ಲಭ್ಯವಿರುವ ಜಮೀನಿನಲ್ಲಿ ಸಂಪೂರ್ಣ ಸಸಿಗಳನ್ನು ನೆಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದರು.
ಹೆದ್ದಾರಿ ಯೋಜನೆಗಳಿಗೆ ಭೂಸ್ವಾಧೀನ ವಿಳಂಬಕ್ಕೆ ಗರಂ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಲವು ಯೋಜನೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆಗಳನ್ನು ಅಧಿಕಾರಿಗಳು ತಮ್ಮ ಮುಂದಿಟ್ಟಾಗ ಗರಂ ಆದ ಮುಖ್ಯಮಂತ್ರಿಯವರು, ಎಷ್ಟು ವರ್ಷಗಳಿಂದ ಇದೇ ಕತೆ ಹೇಳಿಕೊಂಡು ಕೂತಿರ್ತೀರಿ? ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಅಗತ್ಯ ಬಿದ್ದರೆ ಭೂ ಸ್ವಾಧೀನಕ್ಕಾಗಿಯೇ ವಿಶೇಷ ಅಧಿಕಾರಿ ನೇಮಕ ಮಾಡಿಕೊಳ್ಳಿ. ಹಳೆ ಯೋಜನೆಗಳು ಪೂರ್ಣಗೊಳ್ಳದ ಹೊರತು ಹೊಸ ಹೆದ್ದಾರಿ ಯೋಜನೆಗಳು ನಮಗೆ ಸಿಗುವುದಿಲ್ಲ.
ಎಲ್ಲೆಲ್ಲಿ ಬಾಟಲ್‌ನೆಕ್ ಸಮಸ್ಯೆ ಇದೆ ಅವುಗಳನ್ನು ಮೊದಲು ಆದ್ಯತೆ ಮೇರೆಗೆ ಬಗೆಹರಿಸಬೇಕು. ಎಸ್‌ಎಲ್‌ಎಒಗಳು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವಂತೆ ಒಂದು ಸುತ್ತೋಲೆ ಹೊರಡಿಸುವಂತೆ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದರು. ಈ ವೇಳೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 42 ಬಾಕಿ ಯೋಜನೆಗಳಲ್ಲಿ ನಾವು 22ಯೋಜನೆಗಳನ್ನು ಮುಗಿಸಿದ್ದೇವೆ. ಕೇಂದ್ರದಿಂದಲೇ ಬಹಳ ಮಸ್ಯೆ ಆಗುತ್ತಿದೆ. ಕೇಂದ್ರದ ಅಧಿಕಾರಿಗಳು ಹಲವು ಕಡೆ ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಮಾಡಬೇಕಿದೆ ಎಂದರೆ, ಮೇಲಿಂದ ಮೇಲೆ ಪರಿಶೀಲನೆ ನಡೆಸುತ್ತಿದ್ದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಸಚಿವ ಕೃಷ್ಣಬೈರೇಗೌಡ ಸಲಹೆ ನೀಡಿದರು.
ಅನರ್ಹರ ಪಡಿತರ ಚೀಟಿ ರದ್ದತಿಗೆ ಮತ್ತೆ ತಾಕೀತು: ಎರಡನೇ ದಿನದ ಸಭೆಯಲ್ಲೂ ಅನರ್ಹ ಪಡಿತರ ಚೀಟಿದಾರರ ಸಂಖ್ಯೆ ವಿಪರೀತ ಹೆಚ್ಚುತ್ತಿರುವುದಕ್ಕೆ ಅಧಿಕಾರಿಗಳಲ್ಲಿ ಕಾರಣ ಕೇಳಿದ ಮುಖ್ಯಮಂತ್ರಿಯವರು, ಅರ್ಹರಿಗೆ ಸಮಸ್ಯೆ ಆಗದಂತೆ ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸುವ ದಿಕ್ಕಿನಲ್ಲಿ ಏನೇನು ಮಾಡಬಹುದು? ನಿಮ್ಮ ಪ್ರಾಯೋಗಿಕ ಅನುಭವದಲ್ಲಿ ಏನೇನು ಸಮಸ್ಯೆಗಳನ್ನು ಎದುರಿಸಿದ್ದೀರಿ, ಈ ಸಮಸ್ಯೆಗಳ ಪರಿಹಾರಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಯಾವ ಜಿಲ್ಲೆಯಲ್ಲೂ ಶೇ.60ಕ್ಕಿಂತ ಹೆಚ್ಚು ಅರ್ಹರು ಇರಲು ಸಾಧ್ಯವಿಲ್ಲ. ಆದರೆ ಶೇ.70ರಿಂದ 90 ರಷ್ಟು ಮಂದಿ ಅರ್ಹರು ಅಂತೆಲ್ಲ ಇದ್ದರೆ ಅದನ್ನು ಯಾವ ಮಾನದಂಡದಲ್ಲೂ ಒಪ್ಪಲು ಸಾಧ್ಯವಿಲ್ಲ. ಅರ್ಹರಿಗೆ ಅನ್ಯಾಯ ಆಗುವುದನ್ನು ತಡೆಯಲು ನಕಲಿ, ಡೂಪ್ಲಿಕೇಟ್ ಮತ್ತು ಅನರ್ಹ ಪಡಿತರ ಚೀಟಿಗಳನ್ನು ತಡೆಯುವಂತೆ ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.