ಬೇಡವೆಂದರೂ ಕರೆತಂದು ಈಗ ಟಿಕೆಟ್‌ ಕೊಡದಿದ್ರೆ ಅಪಮಾನ: ಡಿ.ವಿ.ಸದಾನಂದಗೌಡ

By Kannadaprabha NewsFirst Published Mar 13, 2024, 10:11 AM IST
Highlights

‘ಚುನಾವಣಾ ರಾಜಕಾರಣದಿಂದ ದೂರ ಸರಿದಿದ್ದ ನನ್ನನ್ನು ಮತ್ತೆ ಸ್ಪರ್ಧಿಸುವಂತೆ ಮುಂದೆ ಕರೆತಂದು ಈಗ ಟಿಕೆಟ್ ಇಲ್ಲ ಎಂದರೆ ನನಗೆ ಅವಮಾನವಾಗುತ್ತದೆ. ನನ್ನ ವೈಯಕ್ತಿಕ ವರ್ಚಸ್ಸಿಗೂ ಧಕ್ಕೆಯಾಗುತ್ತದೆ’ ಎಂದು ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತೀಕ್ಷ್ಣವಾಗಿ ಹೇಳಿದ್ದಾರೆ. 

ಬೆಂಗಳೂರು (ಮಾ.13): ‘ಚುನಾವಣಾ ರಾಜಕಾರಣದಿಂದ ದೂರ ಸರಿದಿದ್ದ ನನ್ನನ್ನು ಮತ್ತೆ ಸ್ಪರ್ಧಿಸುವಂತೆ ಮುಂದೆ ಕರೆತಂದು ಈಗ ಟಿಕೆಟ್ ಇಲ್ಲ ಎಂದರೆ ನನಗೆ ಅವಮಾನವಾಗುತ್ತದೆ. ನನ್ನ ವೈಯಕ್ತಿಕ ವರ್ಚಸ್ಸಿಗೂ ಧಕ್ಕೆಯಾಗುತ್ತದೆ’ ಎಂದು ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತೀಕ್ಷ್ಣವಾಗಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಾನು ಚುನಾವಣಾ ರಾಜಕಾರಣದಿಂದ ದೂರು ಉಳಿಯಲು ನಿರ್ಧರಿಸಿದ್ದೆ. ಆದರೆ, ಪಕ್ಷದ ನಾಯಕರ ಒತ್ತಾಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಮ್ಮತಿಸಿದ್ದೆ. ಈಗ ಟಿಕೆಟ್‌ ವಿಚಾರದಲ್ಲಿ ಗೊಂದಲ ಶುರುವಾಗಿರುವುದರಿಂದ ಮನಸಿಗೆ ನೋವಾಗಿದೆ ಎಂದರು.

ಕಳೆದ 30 ವರ್ಷಗಳ ಕಾಲ ಶಾಸಕ ಸೇರಿ ಎಲ್ಲಾ ಸ್ಥಾನಗಳನ್ನು ನೋಡಿದ್ದೇನೆ. ಮಾಜಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಾಜಿ ಸಚಿವರು ಸೇರಿದಂತೆ ಪಕ್ಷದ ನಾಯಕರು ನನ್ನ ಮನೆಗೆ ಬಂದು ‘ನೀವು ಚುನಾವಣಾ ರಾಜಕಾರಣದಿಂದ ದೂರ ಸರಿದರೆ ಪಕ್ಷಕ್ಕೆ ಹಾನಿಯಾಗುತ್ತದೆ. ಬೆಂಗಳೂರು ಕೇಂದ್ರ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಪಕ್ಷಕ್ಕೆ ತೊಂದರೆಯಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ನಿಮ್ಮ ಸಚಿವ ಸ್ಥಾನ ಬದಲಾವಣೆ ಮಾಡಿದ್ದರಿಂದ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ನೀವು ಚುನಾವಣಾ ರಾಜಕಾರಣದಲ್ಲಿ ಮುಂದುವರೆಯಬೇಕು’ ಎಂದು ಕೇಳಿಕೊಂಡಿದ್ದರು ಎಂದರು.

ಕಿರಾತಕ ಎಚ್‌ಡಿಕೆಯೇ ವಿನಃ ನಮ್ಮ ನಾಯಕರಲ್ಲ!: ಶಾಸಕ ಇಕ್ಬಾಲ್ ಹುಸೇನ್

ಈ ಕಾರಣದಿಂದ ನಾನು ಪಕ್ಷಕ್ಕಿಂತ ದೊಡ್ಡವನಲ್ಲ. ಖಂಡಿತ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದೆ. ಪಕ್ಷದ ಹಿತಾಸಕ್ತಿ ಹಾಗೂ ಕಾರ್ಯಕರ್ತರ ಮನಸಿಗೆ ನೋವು ಮಾಡಲಾಗದೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದೆ. ಈಗ ಏಕೆ ಗೊಂದಲ ಸೃಷ್ಟಿಯಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ನಾನು ಭ್ರಷ್ಟಾಚಾರ ಮಾಡಿಲ್ಲ. ಪಕ್ಷದ ನೀಡಿದ ಜವಾಬ್ದಾರಿಗಳಲ್ಲಿ ವಿಫಲನಾಗಿಲ್ಲ. ಪಕ್ಷದ ಆದೇಶ ಮೇರೆಗೆ ಸ್ಥಾನ ಬಿಟ್ಟುಕೊಟ್ಟು ಪಕ್ಷದ ಎಲ್ಲರೊಂದಿಗೆ ಸೇರಿಕೊಂಡು ವಿಶ್ವಾಸದಿಂದ ಕೆಲಸ ಮಾಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷದ ಯಾವುದೇ ತೀರ್ಮಾನಕ್ಕೆ ನಾನು ಬದ್ಧ. ಹಿಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದಾಗ ಕರೆದುಕೊಂಡು ಬಂದು ಈಗ ಟಿಕೆಟ್‌ ಇಲ್ಲ ಎಂದರೆ, ಮನಸಿಗೆ ನೋವು, ಅಪಮಾನವಾಗುತ್ತದೆ. ಈ ಹಿಂದೆ ನಾನು ನಿಲ್ಲುವುದಿಲ್ಲ ಎಂದಾಗ, ಸಾಕಷ್ಟು ಮಂದಿ ಕ್ಷೇತ್ರಕ್ಕೆ ಟವೆಲ್‌ ಹಾಕಲು ಬಂದಿದ್ದರು. ದೊಡ್ಡ ನಾಯಕರು ಇಲ್ಲಿಗೆ ಬಂದಿದ್ದರು. ಟಿಕೆಟ್‌ ಕೊಡಿಸುವುದು ನಮ್ಮ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿಗಳು ಸಹ ಹೇಳಿದ್ದರಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿದ್ದೆ. ಈಗ ಗೊಂದಲ ಶುರುವಾದ ಮೇಲೆ ಮನಸಿಗೆ ನೋವಾಗಿದೆ. ಈ ರೀತಿಯ ಗೊಂದಲದಿಂದ ವೈಯಕ್ತಿಕ ವರ್ಚಸ್ಸಿಗೂ ಧಕ್ಕೆಯಾಗುತ್ತದೆ. ಪಕ್ಷದಲ್ಲಿ ಈ ಗೊಂದಲ ಏಕೆ ಸೃಷ್ಟಿಯಾಗಿದೆ ಎಂದು ಗೊತ್ತಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಆಡಳಿತದ ಪಿಕ್ಚರ್‌ ಇನ್ನೂ ಬಾಕಿ ಇದೆ: ದೇವೇಂದ್ರ ಫಡ್ನವಿಸ್‌

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೌಡರು, ಸದ್ಯಕ್ಕೆ ಕೇಂದ್ರದ ನಾಯಕರಾಗಲಿ ಅಥವಾ ರಾಜ್ಯದ ನಾಯಕರಾಗಲಿ ಟಿಕೆಟ್‌ ಬಗ್ಗೆ ಏನೂ ಮಾತನಾಡಿಲ್ಲ. ಕೇಂದ್ರದ ವರಿಷ್ಟರು ನನ್ನನ್ನು ಕರೆದು ನಿಮ್ಮನ್ನು ಬೇರೆ ಕಡೆಗೆ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರೆ, ಬೇಸರ ಇಲ್ಲದೆ ನಾನು ಪಕ್ಷಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದರು.

click me!