* ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಜೊತೆ ಬಿಜೆಪಿಯ ಯಾವುದೇ ನಾಯಕರು ಸಂಪರ್ಕದಲ್ಲಿ ಇಲ್ಲ
* ಬಿಜೆಪಿ ನಾಯಕರು ಯಾರೂ ಬಿಟ್‌ಕಾಯಿನ್ ಕೇಸ್‌ನಲ್ಲಿ ಇಲ್ಲ ಗೃಹ ಸಚಿವ ಆರಗ ಸ್ಫೋಟಕ ಮಾಹಿತಿ
* ಆರಗ ಸ್ಪಷ್ಟನೆ ಬೆನ್ನಲ್ಲೇ ಸರ್ಕಾರಕ್ಕೆ ಸವಾಲೆಸೆದ ಸಿದ್ದರಾಮಯ್ಯ
ಬೆಂಗಳೂರು(ನ.03): ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಜೊತೆ ಬಿಜೆಪಿಯ ಯಾವುದೇ ನಾಯಕರು ಸಂಪರ್ಕದಲ್ಲಿ ಇಲ್ಲ, ಆದರೆ ಕಾಂಗ್ರೆಸ್ ನಾಯಕರ ಮಕ್ಕಳು ಸಿಕ್ಕಿಬಿದ್ದ ಪ್ರಕರಣವೊಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, 2018ರಲ್ಲಿ ಡ್ರಗ್‌ಸ್ ಪ್ರಕರಣದಲ್ಲಿ ಮಾಜಿ ಶಾಸಕರ ಮಗನ ಜೊತೆ ಆತ ಸಿಕ್ಕಿಬಿದ್ದಿದ್ದ. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಪ್ರಕರಣವನ್ನು ಆಗಿನ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಈಗ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಬಿಟ್ ಕಾಯಿನ್ ಪ್ರಕರಣವನ್ನು ಇ.ಡಿ. ಹಾಗೂ ಇಂಟರ್‌ಪೋಲ್‌ಗೆ ವಹಿಸಿದ್ದೇವೆ. ಪ್ರಕರಣದಲ್ಲಿ ಬಿಜೆಪಿಯ ಯಾವ ನಾಯಕರು ಇದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಬೇಕು. ನಮ್ಮ ಪಕ್ಷದ ಯಾವುದೇ ನಾಯಕರು ಪ್ರಕರಣದಲ್ಲಿ ಇಲ್ಲ. ಇರುವವರೆಲ್ಲರೂ ಕಾಂಗ್ರೆಸ್ ನಾಯಕರೇ ಎಂದಿದ್ದಾರೆ.
ಅಲ್ಲದೇ ನಿಜಕ್ಕೂ ಘನತೆ ಇದ್ದರೆ ಕಾಂಗ್ರೆಸ್ ನಾಯಕರು ಮೌನದಿಂದ ಇರಬೇಕು. ಹಿಂದೆ ಯು.ಬಿ. ಸಿಟಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ವಿಚಾರಣೆ ಮಾಡದೇ ಬಿಟ್ಟಿದ್ದು ಅವರದ್ದೇ ಸರ್ಕಾರ ಎಂದೂ ತಿಳಿಸಿದ್ದಾರೆ.
ಚುನಾವಣೆ ಫಲಿತಾಂಶ ಪರಿಣಾಮ ಬೀರಲ್ಲ: ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಟ್‌ಕಾಯಿನ್ ದಂಧೆಕೋರರ ಹೆಸರು ತಿಳಿಸಿ
ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕೀಯ ಮುಖಂಡರ ಹೆಸರು ಬಹಿರಂಗಗೊಳಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪ್ರಕರಣದಲ್ಲಿ ರಾಜಕೀಯ ನಾಯಕರು ಭಾಗಿಯಾಗಿರುವ ಮಾಹಿತಿ ನನಗೆ ಇದೆ ಅಷ್ಟೆ. ಹಾಗಾಗಿ ಯಾವುದೇ ಪಕ್ಷದವರಾದರೂ ಸರಿ, ಜನರಿಗೆ ಸತ್ಯ ಗೊತ್ತಾಗಬೇಕು. ನಾನು ತನಿಖಾ ಸಂಸ್ಥೆಗೆ ಸಾಕ್ಷ್ಯ ಕೊಡುವುದಾದರೆ ಸಾಕ್ಷಿ ಯಾಕೆ ಬೇಕು? ಕಾನೂನುಬಾಹಿರ ಕೃತ್ಯವಾಗಿದ್ದರೆ ಪ್ರಕರಣವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಜಾರಿ ನಿರ್ದೇಶನಾಲಯ (ಇ.ಡಿ.) ಸಂಸ್ಥೆಗೆ ಕೊಟ್ಟಿದ್ದಾದರೂ ಯಾಕೆ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ಇಬ್ಬರು ರಾಜಕಾಣಿಗಳು ಇದ್ದಾರೆ ಎಂಬುದು ಸತ್ಯ. ಯಾವ ಪಕ್ಷದವರು ಎಂಬುದು ಗೊತ್ತಿಲ್ಲ. ನೀವು ತನಿಖೆ ಮಾಡಿ ಪತ್ತೆ ಹೆಚ್ಚಿ ಎಂದ ಸಿದ್ದರಾಮಯ್ಯ, ಸತ್ಯ ಬಹಿರಂಗವಾಗದರೆ ಸರ್ಕಾರಕ್ಕೆ ಸಂಕಷ್ಟವಲ್ಲವೇ? ಅದಕ್ಕೇ ನಾನು ಸರ್ಕಾರರಕ್ಕೆ ಸಂಕಷ್ಟ ಎಂದಿದ್ದು. ಸತ್ಯ ಹೊರಗೆ ಬರದೇ ಹೋದರೆ ತಪ್ಪಿತಸ್ಥರನ್ನು ರಕ್ಷಣೆ ಮಾಡಿದಂತೆ ಆಗುತ್ತದೆ ಎಂದು ಹೇಳಿದರು.
ರಾಜ್ಯದ ಪ್ರಭಾವಿಗಳಿಂದ ಡ್ರಗ್ಸ್, ಬಿಟ್‌ಕಾಯಿನ್ ದಂಧೆ
ಡ್ರಗ್ಸ್ ಹಾಗೂ ಬಿಟ್ ಕಾಯಿನ್ ದಂಧೆಯಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂಬಂಧ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು, ಬಿಟ್ ಕಾಯಿನ್ ದಂಧೆಯಲ್ಲಿ ದೊಡ್ಡ ದೊಡ್ಡವರು ಇರುವ ಕಾರಣಕ್ಕೆ ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಮುಚ್ಚಿ ಹಾಕುವುದೇ ಕೆಲಸ- ಡಿಕೆಶಿ:
ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಟ್‌ಕಾಯಿನ್ ದಂಧೆ ಹೆಸರಿನಲ್ಲಿ ಬಹಳ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ರಾಜಕಾರಣಿಗಳು, ಪೊಲೀಸರು, ಉದ್ಯಮಿಗಳ ಹೆಸರು ತಳುಕು ಹಾಕಿಕೊಂಡಿದೆ. ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಪ್ರಕರಣಗಳನ್ನು ಮುಚ್ಚಿ ಹಾಕುವುದೇ ಅವರ ಕೆಲಸ ಎಂದು ದೂರಿದರು.
ಪ್ರಕರಣದ ಬಗ್ಗೆ ನಾನೇ ಅಚ್ಚರಿಗೊಂಡಿದ್ದೇನೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಖಾತೆಗಳು ಈ ಪರಿ ಹ್ಯಾಕ್ ಆಗುತ್ತವೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಐಟಿ-ಬಿಟಿ ಬಗ್ಗೆ ನನಗೆ ಮಾಹಿತಿ ಇಲ್ಲದ ಕಾರಣ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ದೊಡ್ಡ ಪ್ರಕರಣ ಎಂದು ತಿಳಿದುಬಂದಿದೆ ಎಂದು ಹೇಳಿದರು.