
ಹುಬ್ಬಳ್ಳಿ (ಜೂ.20) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಚುನಾವಣೆ ನಿಗದಿಯಂತೆ ಮಂಗಳವಾರ (ಜೂ.20ಕ್ಕೆ) ನಡೆಯಲಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ದಾಂಡೇಲಿ ರೆಸಾರ್ಚ್‌ನಲ್ಲೇ ತಂತ್ರ ರೂಪಿಸುತ್ತಿದ್ದರೆ, ಹೇಗಾದರೂ ಮಾಡಿ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಮಯೂರ್ ರೆಸಾರ್ಚ್‌ನಲ್ಲಿ ಕೊನೆ ಕ್ಷಣದ ಕಸರತ್ತು ನಡೆಸುತ್ತಿದೆ.
ಈ ಮೂಲಕ ಎರಡೂ ಪಕ್ಷಗಳು ತಂತ್ರ -ಪ್ರತಿತಂತ್ರಕ್ಕೆ ರೆಸಾರ್ಚ್ ರಾಜಕಾರಣಕ್ಕೆ ಮೊರೆ ಹೋಗಿವೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಇದೀಗ ಕಾಂಗ್ರೆಸ್ಸಿನಲ್ಲಿ ಇರುವುದರಿಂದ ಪಾಲಿಕೆ ಮೇಯರ್ - ಉಪಮೇಯರ್ ಚುನಾವಣೆ ಕುತೂಹಲ ಕೆರಳಿಸಿದೆ.
ಮಹಾನಗರ ಪಾಲಿಕೆಯ 82 ಸ್ಥಾನಗಳ ಪೈಕಿ 39 ಸ್ಥಾನಗಳನ್ನು ಬಿಜೆಪಿ ಗೆದ್ದು ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 33 ಸ್ಥಾನಗಳನ್ನು ಗೆದ್ದಿದೆ. ಮೂವರು ಎಐಎಂಐಎಂ, ಜೆಡಿಎಸ್ ಒಬ್ಬರು, 6 ಜನ ಪಕ್ಷೇತರರಿದ್ದಾರೆ. ಪಕ್ಷೇತರರಲ್ಲಿ ಮೂವರು ಬಿಜೆಪಿಗೆ ಬೆಂಬಲಿಸಿದರೆ, ಮೂವರು ಕಾಂಗ್ರೆಸ್‌ಗೆ ಬೆಂಬಲಿಸಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಡ್ಡಿ: ಸಚಿವ ಸಂತೋಷ್ ಲಾಡ್ ಕಿಡಿ
ಬಿಜೆಪಿ ಲೆಕ್ಕಾಚಾರವೇನು?
ಪಾಲಿಕೆಯಲ್ಲಿ ಬಹುಮತ ಪಡೆಯಬೇಕೆಂದರೆ 89 ಸ್ಥಾನಗಳ ಪೈಕಿ 45 ಮತಗಳನ್ನು ಪಡೆಯಬೇಕು. ಬಿಜೆಪಿಯಲ್ಲಿ ಇಬ್ಬರು ಶಾಸಕರು, ಒಬ್ಬರು ಸಂಸದರು, ಮೂವರು ಎಂಎಲ್ಸಿಗಳÜ ಮತಗಳಿವೆ. ಹೀಗಾಗಿ ಬಿಜೆಪಿಗೆ 48 ಮತಗಳು ಖಚಿತ.
ಆಪರೇಷನ್ ಕಾಂಗ್ರೆಸ್‌ಗೆ ಹೆದರಿ 39 ಸದಸ್ಯರಲ್ಲಿ 38 ಸದಸ್ಯರನ್ನು ಹಾಗೂ ಮೂವರು ಪಕ್ಷೇತರ ಸದಸ್ಯರನ್ನು ಬಿಜೆಪಿ ದಾಂಡೇಲಿ ರೆಸಾರ್ಚ್‌ಗೆ ನಾಲ್ಕು ದಿನಗಳ ಹಿಂದೆಯೇ ಕಳುಹಿಸಿದೆ. ನಾಳೆ ಚುನಾವಣೆ ವೇಳೆಗೆ ನೇರವಾಗಿ ಪಾಲಿಕೆಗೆ ಕರೆದುಕೊಂಡು ಬರಲಿದೆ. ಎಲ್ಲರೂ ನಮ್ಮ ಜೊತೆಯೇ ಇದ್ದಾರೆ ಎನ್ನುವುದು ಬಿಜೆಪಿ ವಿಶ್ವಾಸ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಮೂವರು ಕೂಡ ರೆಸಾರ್ಚ್‌ಗೆ ತೆರಳಿದ್ದಾರೆ. ಅಲ್ಲೇ ಪಾಲಿಕೆ ಸದಸ್ಯರಿಗೆ ಪಾಠ ನಡೆಯುತ್ತಿದೆ.
ಕಾಂಗ್ರೆಸ್ ಲೆಕ್ಕಾಚಾರ:
ಕಾಂಗ್ರೆಸ್ ತನ್ನ 33 ಸದಸ್ಯರ ಜೊತೆ 3 ಪಕ್ಷೇತರರು, 3 ಎಐಎಂಐಎಂ, ಜೆಡಿಎಸ್ 1 ಬೆಂಬಲವಿದೆ ಎಂದು ನಂಬಿದೆ. ಜತೆಗೆ ಇಬ್ಬರು ಶಾಸಕರ ಪೈಕಿ ಪ್ರಸಾದ ಅಬ್ಬಯ್ಯ ಅವರದು ಮತ ಇದೆ. ಇನ್ನೊಬ್ಬ ಶಾಸಕ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿಷೇಧವಿರುವ ಕಾರಣ ಅವರು ಮತದಾನದಿಂದ ದೂರ ಉಳಿಯಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಬಳಿ ಸದ್ಯ 41 ಮತಗಳಿವೆ.
ಅಧಿಕಾರದ ಗದ್ದುಗೆ ಏರಬೇಕೆಂದರೆ ಕನಿಷ್ಠವೆಂದರೂ ಇನ್ನು ಮೂರ್ನಾಲ್ಕು ಮತಗಳು ಬೇಕಾಗುತ್ತವೆ. ಬಿಜೆಪಿಯ ಆಡಳಿತದ ಬಗ್ಗೆ ಅವರಲ್ಲಿನ ಕೆಲ ಸದಸ್ಯರಿಗೆ ಅಸಮಾಧಾನವಿದೆ. ಅವರನ್ನು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿಯುವಂತೆ ಮಾಡಿದರೆ ಸಲೀಸಾಗಿ ನಾವು ಇದ್ದ ಮತಗಳಲ್ಲೇ ಗೆಲ್ಲಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿನದು.
ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಪ್ರತಿತಂತ್ರ ರೂಪಿಸಲಾಗುತ್ತಿದೆ. ಕಾಂಗ್ರೆಸ್ ಸದಸ್ಯರೆಲ್ಲರೂ ಧಾರವಾಡದ ಮಯೂರ ರೆಸಾರ್ಚ್‌ಲ್ಲಿ ಸೇರಿದ್ದಾರೆ. ಸಚಿವ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರು ಸೇರಿದಂತೆ ಹಲವರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ.
ಕೊರವಿ ಹೋಗಿಲ್ಲ:
ಬಿಜೆಪಿಯ ರಾಜಣ್ಣ ಕೊರವಿ ಹೊರತು ಪಡಿಸಿ ಎಲ್ಲ ಸದಸ್ಯರು ದಾಂಡೇಲಿ ರೆಸಾರ್ಚ್‌ಗೆ ತೆರಳಿದ್ದಾರೆ. ಕೊರವಿ ಅನಾರೋಗ್ಯದ ಕಾರಣದಿಂದಾಗಿ ರೆಸಾರ್ಚ್‌ಗೆ ತೆರಳಿಲ್ಲ. ಪಕ್ಷದ ಹಿರಿಯರ ಅನುಮತಿ ಪಡೆದು ಹುಬ್ಬಳ್ಳಿ ಮನೆಯಲ್ಲೇ ಉಳಿದಿದ್ದಾರೆ.
ಯಾರಿಗೆ ಗೌನು?
ಮೇಯರ್ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಪಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇಯರ್- ಉಪಮೇಯರ್‌ರನ್ನಾಗಿ ಯಾರನ್ನು ಮಾಡಿದರೆ ಹೆಚ್ಚು ಉಪಯೋಗವಾಗಬಹುದೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ. ಬಲ್ಲ ಮೂಲಗಳ ಪ್ರಕಾರ ಬಹುಸಂಖ್ಯಾತ ಲಿಂಗಾಯತ ಸಮುದಾಯಕ್ಕೆ ಮೇಯರ್ ಪಟ್ಟನೀಡುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳಲಾಗಿದೆ.
ವಾರ್ಡ್ ನಂ. 57ರ ಮೀನಾಕ್ಷಿ ವಂಟಮೂರಿ, ರೂಪಾ ಶೆಟ್ಟಿ, ಧಾರವಾಡ 19ನೆಯ ವಾರ್ಡ್‌ನ ಜ್ಯೋತಿ ಪಾಟೀಲ ಹಾಗೂ 49ನೆಯ ವಾರ್ಡಿನ ವೀಣಾ ಭರದ್ವಾಡ್ ಹೆಸರು ರೇಸಲ್ಲಿವೆ. ಇವರಲ್ಲಿ ವಂಟಮೂರಿ ಹೆಸರು ಮುಂಚೂಣಿಯಲ್ಲಿದೆ. ಉಪಮೇಯರ್ ಹುದ್ದೆಗೆ ಸತೀಶ ಹಾನಗಲ್, ಶಂಕರ ಶೆಳಕೆ, ಸುರೇಶ ಬೆದರೆ, ಮಲ್ಲಿಕಾರ್ಜುನ ಗುಂಡೂರ ಹೆಸರು ಕೇಳಿ ಬರುತ್ತಿವೆ. ಹಾನಗಲ್ ಹೆಸರು ಮುಂಚೂಣಿಯಲ್ಲಿದೆ. ಯಾವುದಕ್ಕೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಬೆಲ್ಲದ, ಟೆಂಗಿನಕಾಯಿ ಚರ್ಚೆ ನಡೆಸಿ ಅಂತಿಮಗೊಳಿಸಲಿದ್ದಾರೆ.
ಆಪರೇಷನ್ ಹಸ್ತ ಭೀತಿ: ಮತ್ತಷ್ಟುಬಿಜೆಪಿ ಸದಸ್ಯರು ದಾಂಡೇಲಿಗೆ ದೌಡು!
ಕಾಂಗ್ರೆಸ್ಸಿನಲ್ಲಿ ಯಾರು?
ಕಾಂಗ್ರೆಸ್ಸಿನಲ್ಲಿ ಮೇಯರ್ ಹುದ್ದೆಗೆ ಸುವರ್ಣ ಕಲ್ಲಕುಂಟ್ಲಾ, ಕವಿತಾ ಕಬ್ಬೇರ, ಬಿಲ್ಕೀಸ್ ಬಾನು ಮುಲ್ಲಾ, ಸುನೀತಾ ಬುರ್‌ಬುರೆ ಹೆಸರು ಕೇಳಿ ಬರುತ್ತಿವೆ. ಕಲ್ಲಕುಂಟ್ಲಾ ಹೆಸರು ಕೊಂಚ ಮುಂಚೂಣಿಯಲ್ಲಿದೆ. ಉಪಮೇಯರ್ ಹುದ್ದೆಗೆ ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರ, ಇಮ್ರಾನ್ ಎಲಿಗಾರ ಹೆಸರು ಕೇಳಿ ಬರುತ್ತಿದೆ. ಯಾರು ಕಣಕ್ಕೆ ಇಳಿಯಬೇಕೆಂಬುದನ್ನು ಸಚಿವ ಲಾಡ್, ಜಿಲ್ಲಾಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ ಸೇರಿಕೊಂಡು ಅಂತಿಮಗೊಳಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.