
ಬೆಳ್ತಂಗಡಿ (ಸೆ.02): ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯತೀತ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅವರು ಧರ್ಮಸ್ಥಳದ ಭಕ್ತರ ಕ್ಷಮೆ ಕೇಳಬೇಕು. ನಾಡಿನ ಜನತೆಯ ಶಾಪದಿಂದ ರಾಜ್ಯ ಸರ್ಕಾರ ಸದ್ಯದಲ್ಲೆ ಪತನವಾಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾದ ಧರ್ಮಸ್ಥಳ ಚಲೋ, ನಮ್ಮ ನಡಿಗೆ ಧರ್ಮದೆಡೆಗೆ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿ ಮುಖಂಡ ಸಿ.ಟಿ. ರವಿ ಮಾತನಾಡಿ, ದೂರುದಾರನ ಹಿನ್ನೆಲೆ ತಿಳಿಯದೆ, ಮಂಪರುಪರೀಕ್ಷೆ ಮಾಡದೆ ಎಡಪಂಥೀಯರ ಮಾತುಕೇಳಿ ಎಸ್‌ಐಟಿಗೆ ಪ್ರಕರಣ ಒಪ್ಪಿಸಿರುವುದು ಸರಿಯಲ್ಲ ಎಂದು ಹೇಳಿದರು.
ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಸೌಜನ್ಯ ಪ್ರಕರಣ ಮರು ತನಿಖೆಗೆ ಸ್ವಾಗತ. ಆದರೆ ಆ ನೆಪದಲ್ಲಿ ದುಷ್ಟಕೂಟವನ್ನು ರಚಿಸುವುದು ಸರಿಯಲ್ಲ ಮತ್ತು ಕ್ಷೇತ್ರದ ಹೆಸರು ಕೆಡಿಸುವುದು ಸರಿಯಲ್ಲ. ಎಸ್‌ಐಟಿಯ ದಾರಿ ತಪ್ಪಿಸುವ ದುಷ್ಟಕೂಟಕ್ಕೆ ಮಂಜುನಾಥ ಸ್ವಾಮಿ ಶಿಕ್ಷಿಸಲಿ. ಸತ್ಯ ಹೊರಗೆ ಬರುತ್ತಿದೆ. ಸ್ವಾಮಿಯ ಪ್ರಭಾವ ಕಾಣುತ್ತಾ ಇದೆ. ಭಕ್ತರಿಗೆ ಧೈರ್ಯ ಕೊಡಲು ಕಾಂಗ್ರೆಸ್‌ನ ಒಬ್ಬನೇ ಒಬ್ಬ ಶಾಸಕ ಬಂದಿಲ್ಲ. ಹಿಂದೂ ಧರ್ಮದ ವಿರುದ್ಧ ಸಂಚು ಮಾಡಿದರೆ ಸರ್ವನಾಶ ಮಾಡುವ ಶಕ್ತಿ ಸಮಾಜಕ್ಕಿದೆ ಎಂದರು.
ಸೌಜನ್ಯ ಹೋರಾಟದ ನೆರವಿಗೆ ಬಾರದ ಕಾಂಗ್ರೆಸ್: ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಹಿಂದುತ್ವವೇ ನಮ್ಮ ಜೀವ. ಧರ್ಮ ರಕ್ಷಕನ ಧರ್ಮ ರಕ್ಷಿಸುವುದು. ಷಡ್ಯಂತ್ರ ಮಾಡಿದವರಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ. ಬುರುಡೆ ಸರ್ಕಾರದ ವಿರುದ್ಧ ಸೆಟೆದು ನಿಲ್ಲಬೇಕಾಗಿದೆ. ಸೌಜನ್ಯ ಪ್ರಕರಣದಲ್ಲಿ ಹತ್ತು- ಹದಿನೈದು ವರ್ಷಗಳಿಂದ ಹೋರಾಟ ಮಾಡಿದಾಗ ಈ ಸರ್ಕಾರ ನೆರವಿಗೆ ಬರಲಿಲ್ಲ. ಆದರೆ ಬರುಡೆ ತಂದಾಗ ನೆರವಾದರು. ಸೌಜನ್ಯ ಪ್ರಕರಣ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು ಎಂದರು.
ವೇದಿಕೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಬ್ರಿಜೇಶ್ ಚೌಟ, ತೇಜಸ್ವಿ ಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸುನಿಲ್ ಕುಮಾರ್, ಸುರೇಶ್ ಗೌಡ, ಸಿಮೆಂಟ್ ಮಂಜು, ದೊಡ್ಡಣ್ಣ ಗೌಡ, ಪ್ರತಾಪಸಿಂಹ ನಾಯಕ್, ಸಿ.ಟಿ.ರವಿ, ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜ್, ಭಾರತಿ ಶೆಟ್ಟಿ, ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿ, ಮುನಿರತ್ನ, ರವಿಕುಮಾರ್, ಸುಧಾಕರ ರೆಡ್ಡಿ, ಶ್ರೀರಾಮುಲು, ಭಾಗೀರಥೀ ಮುರುಳ್ಯ, ಭರತ್ ಶೆಟ್ಟಿ, ನಳೀನ್ ಕುಮಾರ್ ಕಟೀಲು, ರೇಣುಕಾಚಾರ್ಯ ಇದ್ದರು.
ಶಾಸಕ ಹರೀಶ್ ಪೂಂಜ, ಸತೀಶ್ ಕುಂಪಲ ಸ್ವಾಗತಿಸಿದರು. ಸಂಚಾಲಕ ಯಲಹಂಕ ವಿಶ್ವನಾಥ್ ಪ್ರಸ್ತಾವಿಸಿದರು. ಸಮಾರಂಭಕ್ಕೆ ಮೊದಲು ವೇದಿಕೆಯಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು. ನಾಯಕರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಹೆಗ್ಗಡೆಯವರನ್ನು ಭೇಟಿ ಮಾಡಿದರು. ಬಳಿಕ ಧರ್ಮಸ್ಥಳದ ದ್ವಾರದಿಂದ ಪ್ರತಿಭಟನಾ ಪಾದಯಾತ್ರೆ ನಡೆಯಿತು. ಉದ್ಘಾಟನೆ ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಮತ್ತು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿತು.
ಕೇಸರಿಮಯ ಧರ್ಮಸ್ಥಳ: ಧರ್ಮಸ್ಥಳ ಕ್ಷೇತ್ರ ಇದೇ ಮೊದಲ ಬಾರಿಗೆ ಕೇಸರಿಮಯವಾಗಿ ಕಂಗೊಳಿಸಿತ್ತು. ಧಾರಾಕಾರ ಸುರಿಯುತ್ತಿರುವ ಮಳೆಯ ನಡುವೆಯೂ ಪೆಂಡಾಲ್‌ನಲ್ಲಿ ಸಾವಿರಾರು ಕಾರ್ಯಕರ್ತರು ತುಂಬಿತುಳುಕುತ್ತಿದ್ದರು. ಉಜಿರೆಯಿಂದ ಧರ್ಮಸ್ಥಳದ ವರೆಗೆ ಕೇಸರಿ ಬಣ್ಣದೊಂದಿಗೆ ಸ್ವಾಗತದ ಫಲಕಗಳು ಕಂಗೊಳಿಸುತ್ತಿದ್ದವು. ವೇದಿಕೆಯಿಂದ ನೇತ್ರಾವತಿ ಸ್ನಾನ ಘಟ್ಟದ ವರೆಗೆ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ವಾಹನಗಳನ್ನು ಶಿಸ್ತು ಬದ್ಧವಾಗಿ ನಿಲ್ಲಿಸಿದ್ದರಿಂದ ಯಾವುದೇ ಸಂಚಾರಕ್ಕೆ ಅಡೆತಡೆಯುಂಟಾಗಿಲ್ಲ.
ಧರ್ಮಸ್ಥಳದ ದ್ವಾರದ ಬಳಿ ಮಾಹಿತಿ ಕಚೇರಿ ತೆರಯಲಾಗಿತ್ತು. ಅಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಎಲ್ಲರನ್ನೂ ಸ್ವಾಗತಿಸುತ್ತಿದ್ದರು. ಸಿಂದೂರ ಕಾರ್ಯಾಚರಣೆ ಯಶಸ್ವಿಯಾದ ಬಗ್ಗೆ ತಿಳಿಸಲು ಸೈಕಲ್ ಯಾತ್ರೆಯನ್ನು ಕೈಗೊಂಡ ಹರಿಯಾಣದ ದೀಪಕ್ ಶರ್ಮ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಭಾಗವಹಿಸಿದವರೆಲ್ಲರಿಗೂ ಕೇಸರಿ ಶಾಲನ್ನು ನೀಡಲಾಗಿತ್ತು. ಬಿ.ವೈ. ವಿಜಯೇಂದ್ರ ಅವರ ಭಾಷಣ ಪ್ರಾರಂಭಕ್ಕೆ ಮೊದಲು ಹರೀಶ್ ಪೂಂಜ ಅವರ ಸೂಚನೆಯಂತೆ ಶಾಲನ್ನು ಬೀಸಿ ಸ್ವಾಗತಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.