ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಪಕ್ಷ ಬಿಡುವ ಭೀತಿ ಸ್ವತಃ ಸಿದ್ದರಾಮಯ್ಯ ಅವರಿಗಿದೆ ಎಂದು ಉಪಮುಖ್ಯಮಂತ್ರಿ ಹೇಳುವ ಮೂಲಕ ಸಿದ್ದುಗೆ ತಿರುಗೇಟು ಕೊಟ್ಟಿದ್ದಾರೆ.
ಬಾಗಲಕೋಟೆ, (ನ.01): ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಪಕ್ಷ ಬಿಡುವ ಭೀತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿದೆ. ಹೀಗಾಗಿ ಹತಾಶೆಗೊಂಡಿರುವ ಅವರು ಏನೇನೋ ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಇಂದು (ಭಾನುವಾರ) ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿರುವ ಎಲ್ಲ ಶಾಸಕರಿಗೆ ಉಪಚುನಾವಣೆಯ ಬಳಿಕ ನಾಯಿಪಾಡು ಆಗಲಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ದಳಪತಿಗಳು ಉಡೀಸ್: ಗೆದ್ದಿದ್ದ ಒಂದೇ ಒಂದು ಸ್ಥಾನದಿಂದ ಅಧಿಕಾರಕ್ಕೇರಿದ ಬಿಜೆಪಿ
ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಎಲ್ಲ ಶಾಸಕರಿಗೆ ಸಚಿವ ಸ್ಥಾನ ನೀಡುವ ಜತೆಗೆ ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ. ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಆ ಪಕ್ಷ ಬಿಡುವ ಭೀತಿ ಸ್ವತಃ ಸಿದ್ದರಾಮಯ್ಯ ಅವರಿಗಿದೆ. ಹೀಗಾಗಿ ಹತಾಶೆಗೊಂಡು ಈ ರೀತಿ ಹೇಳುತ್ತಿದ್ದಾರೆ ಎಂದರು.
ನಾವು ಕಾಂಗ್ರೆಸ್‌ನ ಇನ್ನಷ್ಟು ಶಾಸಕರನ್ನು ಕರೆತರುವ ಕೆಲಸ ಮಾಡಲ್ಲ. ಆದರೆ, ಯಾರೇ ಬಂದರೂ ಪಕ್ಷ ಅವರನ್ನು ಕರೆದುಕೊಳ್ಳುತ್ತದೆ. ಪಕ್ಷ ಬೆಳೆಯಬೇಕು. ಬಿಜೆಪಿ ನಿಂತ ನೀರಲ್ಲ ಎಂದು ಹೇಳಿದರು.
ಇದೇ ವೇಳೆ ತನ್ವೀರ್ ಶೇಠ್ ಬಗ್ಗೆ ಪ್ರತಿಕ್ರಿಯಿಸಿ, ಉಪಚುನಾವಣೆ ಬಳಿಕ ಬಿಜೆಪಿ ಸರ್ಕಾರ ಬೀಳುತ್ತದೆ ಎಂದು ಹೇಳಿರುವ ಮಾಜಿ ಸಚಿವ ತನ್ವೀರ್ ಶೇಠ್‌ರನ್ನು ನರಿ ಕಥೆಗೆ ಹೋಲಿಸಿದ ಕಾರಜೋಳ, ಹೋರಿಯೊಂದು ಮುಂದೆ ಹೋಗುತ್ತಿರುತ್ತದೆ. ಅದರ ಹಿಂದೆ ನರಿ ಬೆನ್ನು ಹತ್ತಿ, ಹೋರಿ ಬಾಯಿಯಿಂದ ಬೀಳುವ ಅನ್ನ ತಿನ್ನಲು ಹಾತೋರೆಯುತ್ತದೆ. ಹೋರಿಯ ಬಾಯಿಯಿಂದ ಏನೂ ಬೀಳಲ್ಲ, ನರಿಗೆ ಏನೂ ಸಿಗುವುದೂ ಇಲ್ಲ. ಈ ಕಥೆಯಂತೆ ತನ್ವೀರ ಶೇಠ್ ಹೇಳುತ್ತಲೇ ಹೋಗುತ್ತಾರೆ. ಸರ್ಕಾರ ಬೀಳುವುದಿಲ್ಲ ಎಂದು ತಿಳಿಸಿದರು.