ಜೆಡಿಎಸ್‌-ಬಿಜೆಪಿ ಮೈತ್ರಿ: ಜಾತ್ಯತೀತ ಸಿದ್ಧಾಂತದಲ್ಲಿದ್ದೂ ಎಚ್‌ಡಿಡಿ, ಎಚ್‌ಡಿಕೆ ಸತ್ತಂತೆ, ಡಿಕೆಶಿ

By Kannadaprabha NewsFirst Published Apr 2, 2024, 9:52 AM IST
Highlights

ದೇವೇಗೌಡರು ಮತ್ತು ಕುಮಾರಸ್ವಾಮಿ ಕೇಸರಿ ಬಾವುಟ ಹಿಡಿದಿದ್ದಾರೆ. ಜಾತ್ಯತೀತ ತತ್ವವನ್ನು ನೀರಿಗೆ ಹಾಕಿ ತೊಳೆದುಬಿಟ್ಟಿದ್ದಾರೆ. ಇಂತಹ ರಾಜಕೀಯ ನೋಡಿದರೆ ನಾಚಿಕೆಯಾಗುತ್ತದೆ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಗಂಟೆಗೊಂದು ಮಾತು, ಸ್ವಂತಕ್ಕೋಸ್ಕರ ಎಲ್ಲ ಮಾಡುತ್ತಾರೆ ಎಂದು ಕಿಡಿಕಾರಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

ಮಂಡ್ಯ(ಏ.02):  ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಜಾತ್ಯತೀತ ಸಿದ್ಧಾಂತದಲ್ಲಿ ಬದುಕಿದ್ದೂ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಸತ್ತಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.

ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ನೆರೆದಿದ್ದ ಜನ ಸಮೂಹವನ್ನುದ್ದೇಶಿಸಿ ಮಾತನಾಡಿದರು.

Latest Videos

ಇಡಿ, ಐಟಿ ನೋಟಿಸ್ ಪಡೆದು ಬೆಸತ್ತಿರೋ ಡಿ.ಕೆ.ಶಿವಕುಮಾರ್‌ ಮೇಲೆ ಮತ್ತೊಂದು ಎಫ್‌ಐಆರ್ ದಾಖಲಿಸಿದ ಬಿಜೆಪಿ

ದೇವೇಗೌಡರು ಮತ್ತು ಕುಮಾರಸ್ವಾಮಿ ಕೇಸರಿ ಬಾವುಟ ಹಿಡಿದಿದ್ದಾರೆ. ಜಾತ್ಯತೀತ ತತ್ವವನ್ನು ನೀರಿಗೆ ಹಾಕಿ ತೊಳೆದುಬಿಟ್ಟಿದ್ದಾರೆ. ಇಂತಹ ರಾಜಕೀಯ ನೋಡಿದರೆ ನಾಚಿಕೆಯಾಗುತ್ತದೆ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಗಂಟೆಗೊಂದು ಮಾತು, ಸ್ವಂತಕ್ಕೋಸ್ಕರ ಎಲ್ಲ ಮಾಡುತ್ತಾರೆ ಎಂದು ಕಿಡಿಕಾರಿದರು.

ಮಂಡ್ಯದ ಗೌಡಿಕೆ, ಮಂಡ್ಯದ ಸ್ವಾಭಿಮಾನವನ್ನು ಬೇರೆಯವರ ಕೈಗೆ ಕೊಟ್ಟ ಇತಿಹಾಸವಿಲ್ಲ. ಇದು ಮಂಡ್ಯ ಜನರ ಸ್ವಾಭಿಮಾನದ ನಾಮಪತ್ರ. ಮಂಡ್ಯ ಇತಿಹಾಸವನ್ನೊಮ್ಮೆ ನೋಡಿದರೆ ಶಿವನಂಜಪ್ಪ, ಶಂಕರಗೌಡ, ಜಿ.ಮಾದೇಗೌಡ, ಎಸ್.ಎಂ. ಕೃಷ್ಣ, ಅಂಬರೀಶ್ ಸೇರಿದಂತೆ ಲೋಕಸಭೆಗೆ ಆಯ್ಕೆಯಾದ ಎಲ್ಲರೂ ಸ್ಥಳೀಯರೇ ಆಗಿದ್ದಾರೆ. ಮಂಡ್ಯ ಜನರೂ ಕೂಡ ಸ್ಥಳೀಯರಿಗೇ ಮಣೆ ಹಾಕುತ್ತಾ ಬಂದಿದ್ದಾರೆ. ಹೊರಗಿನವರಿಗೆ ಮಣೆ ಹಾಕಿರುವುದನ್ನು ಇತಿಹಾಸದಲ್ಲಿ ಕಾಣಲಾಗುವುದಿಲ್ಲ ಎಂದರು.

ಕಳೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್‌ಗೆ ಸಹಾಯ ಮಾಡಲು ಬಂದಿದ್ದೆ. ಕಾಂಗ್ರೆಸ್ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾಗಿ ಜನರು ಮತ ಹಾಕಿದರು. ಆದರೆ, ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾರು ಅಧಿಕಾರದಿಂದ ಅವರನ್ನು ಕೆಳಗಿಳಿಸಿದರೋ ಅವರ ಜೊತೆಗೇ ಈಗ ನೆಂಟಸ್ತನ ಬೆಳೆಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಹಾಸನದಲ್ಲಿ ಹುಟ್ಟಿದವರು. ರಾಮನಗರಕ್ಕೆ ಬಂದರು. ಅವರ ತಂದೆ ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಪಟ್ಟಕ್ಕೇರಿಸಿತು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ನಾನು ಮೋಸ ಮಾಡಿದ್ದೇನೆ ಎಂದು ಹೇಳುವ ಕುಮಾರಸ್ವಾಮಿ ಅವರು ಜಿ.ಟಿ.ದೇವೇಗೌಡ, ಬಾಲಕೃಷ್ಣ, ಶಿವಲಿಂಗೇಗೌಡ ಅವರನ್ನೊಮ್ಮೆ ಕೇಳಲಿ. ಸರ್ಕಾರ ಉಳಿಸುವುದಕ್ಕೆ ಯಾವ ರೀತಿ ಹೋರಾಟ ಮಾಡಿದ್ದೆವು. ಯಾವ ರೀತಿ ಕೈ ಬಲಪಡಿಸಿದ್ದೆ. ಶಕ್ತಿ ತುಂಬಿದ್ದೆ ಎಂದು ಹೇಳುತ್ತಾರೆ. ತೊಂದರೆಯಾಗದಂತೆ ೫ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡೋಣ ಎಂದು ಹೇಳಿದ್ದೆ. ಆದರೆ, ಅದನ್ನು ಉಳಿಸಿಕೊಳ್ಳಲಿಲ್ಲ. ನಾನು ಕಿರುಕುಳ ಕೊಟ್ಟೇ ಎಂದು ಹೇಳುತ್ತಾರೆ. ನಾನು ಕಿರುಕುಳ ಕೊಟ್ಟಿದ್ದರೆ ಅವತ್ತೇ ರಾಜೀನಾಮೆ ಕೊಡಬಹುದಿತ್ತು. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಕಾಂಗ್ರೆಸ್ ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಈಗ ಬಾಯಿಗೆ ಬಂದಂತೆ ಬಡಬಡಾಯಿಸುತ್ತಿದ್ದಾರೆ ಎಂದು ದೂರಿದರು.

ಕುಮಾರಸ್ವಾಮಿ ಅವರನ್ನು ರಾಮನಗರದ ಜನರು ೨ ಬಾರಿ ಎಂಪಿ, ಮುಖ್ಯಮಂತ್ರಿಯನ್ನಾಗಿಯೂ ಮಾಡಿದರು. ಈಗ ರಾಮನಗರ ಬಿಟ್ಟು ಮಂಡ್ಯ ನನ್ನ ಕರ್ಮಭೂಮಿ ಎಂದು ಬಂದಿದ್ದಾರೆ. ಯಾರು ನಿಮಗೆ ಊಟ ಕೊಟ್ಟರು, ರಾಜಕೀಯವಾಗಿ ಯಾರು ಬೆಳೆಸಿದರು ಅವರ ಬಗ್ಗೆಯೇ ಅನುಕಂಪ ಇಲ್ಲ. ಒಂದು ಕಡೆ ನಿಮ್ಮ ಬಾಮೈದುನನ್ನು ಬಿಜಿಪಿಯಿಂದ ಅಭ್ಯರ್ಥಿಯನ್ನಾಗಿ ಮಾಡಿದ್ದು, ನಿಮ್ಮ ಜೊತೆ ಇರಲು ಕಾರ್ಯಕರ್ತರಿಗೂ ಇಷ್ಟವಿಲ್ಲ. ನೀವು ನಿಮ್ಮ ಕುಟುಂಬದವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದ ಮೇಲೆ ಜೆಡಿಎಸ್‌ನ್ನು ಬಿಜೆಪಿಯೊಳಗೆ ವಿಲೀನ ಮಾಡಿಕೊಳ್ಳಿ ಯಾರು ಬೇಡ ಅಂತಾರೆ ಎಂದು ದೂಷಿಸಿದರು.

ಕಾಂಗ್ರೆಸ್ ಪಕ್ಷ ೮ ಜನ ಒಕ್ಕಲಿಗರು, ೬ ಜನ ಮಹಿಳೆಯರಿಗೆ ಕೊಟ್ಟಿದ್ದೇವೆ. ನಾನು ಅಧ್ಯಕ್ಷನಾದ ಮೇಲೆ ಇಂತಹ ದೊಡ್ಡ ತೀರ್ಮಾನ ತೆಗೆದುಕೊಂಡಿದ್ದೇವೆ. ನನ್ನ ಮನವಿ ಮೇರೆಗೆ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಕೊಟ್ಟು ಗೆಲ್ಲಿಸಿದ್ದೀರಿ. ನಿಮ್ಮ ಆಸೆ ಹುಸಿಯಾಗುವುದಿಲ್ಲ. ಚಿಂತೆ ಮಾಡುವುದು ಬೇಡ, ಕುಮಾರಸ್ವಾಮಿ ಅವರು ನಿಮ್ಮ ಊರಿಗೆ ಬಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ನಾವು ತಕರಾರು ಮಾಡಲಾಗದು. ಆದರೆ, ನಿಮ್ಮ ಸ್ವಾಭಿಮಾನದ ಮತ ನಮಗಿರಲಿ ಎಂದು ಮನವಿ ಮಾಡಿದರು.

ಸಿಪಿವೈ ಪುತ್ರಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಸ್ಥಳೀಯ ನಾಯಕರ ಜತೆ ಚರ್ಚೆ: ಡಿ.ಕೆ.ಶಿವಕುಮಾರ್‌

ದೇವೇಗೌಡರು ಪ್ರಧಾನಿಯಾಗಿದ್ದರು. ೧೭ ಜನ ಎಂಪಿಯಾಗಿದ್ದರು. ಎಲ್ಲರೂ ದಳ ಬಿಟ್ಟು ಕಾಂಗ್ರೆಸ್-ಬಿಜೆಪಿಗೆ ಸೇರಿಕೊಂಡರು. ಯಾಕೆ ಹೀಗೆ ಆಯಿತು ಎಂದು ಆತ್ಮಶೋಧನೆ ಮಾಡಿಕೊಳ್ಳಲಿಲ್ಲ. ಬದಲಿಗೆ ಬಿಜೆಪಿಯ ಕಮಲವನ್ನು ಹಿಡಿದರು. ಜಾತ್ಯತೀತ ತತ್ವವನ್ನು ನೀರಿಗೆ ಹಾಕಿ ಕಳೆದುಕೊಂಡರು ಎಂದು ಟೀಕಿಸಿದರು.

ಈ ಸಮಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಲೋಕಸಭ ಅಭ್ಯರ್ಥಿ ವೆಂಕಟರಮೇಣೇಗೌಡ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ದಿನೇಶ್‌ಗೂಳಿಗೌಡ, ಮಧು ಜಿ.ಮಾದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಇಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಇತರರಿದ್ದರು.

click me!