ದಾವಣಗೆರೆ ಬಿಜೆಪಿಯಲ್ಲಿ 'ಒಗ್ಗಟ್ಟಿನ' ಮಂತ್ರ: ಶ್ರೀನಿವಾಸ್ ನಾಮಪತ್ರ ಸಲ್ಲಿಕೆ; ಬಣ ಬದಿಗಿಟ್ಟು ಒಂದಾದ ಕೇಸರಿ ನಾಯಕರು!

Published : Mar 20, 2026, 06:06 PM IST
Davanagere South Srinivas and BJP Support

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ಜಿ.ಎಂ. ಸಿದ್ದೇಶ್ವರ್ ಮತ್ತು ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಎಲ್ಲಾ ನಾಯಕರು ಒಗ್ಗಟ್ಟು ಪ್ರದರ್ಶಿಸಿ, ದೀರ್ಘಕಾಲದ ಬಣ ರಾಜಕೀಯಕ್ಕೆ ಅಂತ್ಯ ಹಾಡಿದ್ದಾರೆ.

ದಾವಣಗೆರೆ (ಮಾ.20): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡದಲ್ಲಿ ಇಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಇಂದು ಐವರು ಪ್ರಮುಖ ಮುಖಂಡರ ಜೊತೆಗೂಡಿ ಸಾಂಕೇತಿಕವಾಗಿ ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿದ್ದ ಬಣ ರಾಜಕೀಯಕ್ಕೆ ತಿಲಾಂಜಲಿ ಹಾಡಿರುವ ನಾಯಕರು, ಒಗ್ಗಟ್ಟಿನಿಂದ ಚುನಾವಣಾ ಕಣಕ್ಕಿಳಿಯುವ ಶಪಥ ಮಾಡಿದ್ದಾರೆ.

ಸಾಂಕೇತಿಕ ನಾಮಪತ್ರ ಸಲ್ಲಿಕೆ - ಸೋಮವಾರ ಅದ್ದೂರಿ ಮೆರವಣಿಗೆ:

ಇಂದು ಒಂದು ಸೆಟ್ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಶ್ರೀನಿವಾಸ ದಾಸಕರಿಯಪ್ಪ, 'ಇಂದು ಶುಭ ಮುಹೂರ್ತದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಮತದಾರರು ಬಿಜೆಪಿಯನ್ನು ಗೆಲ್ಲಿಸಲು ಸ್ವಯಂಪ್ರೇರಿತರಾಗಿ ಸಿದ್ಧರಾಗಿದ್ದಾರೆ. ಸೋಮವಾರ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಣ ಬಡಿದಾಟಕ್ಕೆ ಬ್ರೇಕ್ - ಒಂದಾದ ಸಿದ್ದೇಶ್ವರ್-ರೇಣುಕಾಚಾರ್ಯ:

ದಾವಣಗೆರೆ ಬಿಜೆಪಿಯಲ್ಲಿ ದೀರ್ಘಕಾಲದಿಂದ ಇದ್ದ ಜಿ.ಎಂ. ಸಿದ್ದೇಶ್ವರ್ ಮತ್ತು ಎಂ.ಪಿ. ರೇಣುಕಾಚಾರ್ಯ ಅವರ ನಡುವಿನ ಭಿನ್ನಾಭಿಪ್ರಾಯಗಳು ಈ ಉಪಚುನಾವಣೆಯ ಹಿನ್ನೆಲೆಯಲ್ಲಿ ಬದಿಗೆ ಸರಿದಿವೆ. ದಾವಣಗೆರೆ ನಗರದ ಅರ್ಬನ್ ಬ್ಯಾಂಕ್ ಕಲ್ಯಾಣ ಮಂಟಪದಲ್ಲಿ ನಡೆದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಈ ಇಬ್ಬರೂ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ವೇದಿಕೆಯ ಮೇಲೆ ಪರಸ್ಪರ ಕೈ ಎತ್ತುವ ಮೂಲಕ 'ಬಿಜೆಪಿ ಒಂದಾಗಿದೆ' ಎಂಬ ಸಂದೇಶ ರವಾನಿಸಿದರು. ಈ ಒಗ್ಗಟ್ಟು ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಆನೆ ಬಲ ತಂದಿದೆ.

ಟಿಕೆಟ್ ಆಕಾಂಕ್ಷಿಗಳ ಸಾಥ್:

ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅಸಮಾಧಾನಗೊಂಡಿದ್ದ ಇತರ ಆಕಾಂಕ್ಷಿಗಳು ಇಂದು ಅವರ ಜೊತೆಗೇ ನಿಂತಿದ್ದು ವಿಶೇಷವಾಗಿತ್ತು. ಯಶವಂತರಾವ್ ಜಾಧವ್, ಬಿ.ಜಿ. ಅಜಯಕುಮಾರ್, ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಅಭ್ಯರ್ಥಿಯೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ಬೆಂಬಲ ಸೂಚಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಯಶವಂತರಾವ್ ಜಾಧವ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. 'ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಸಮುದಾಯದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಅವರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಆದರೆ ಈ ಬಾರಿ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ. ನಾವೆಲ್ಲರೂ ಒಗ್ಗೂಡಿ ಶ್ರೀನಿವಾಸ್ ಅವರನ್ನು ಗೆಲ್ಲಿಸುತ್ತೇವೆ' ಎಂದು ಸಾರಿದರು.

ಒಟ್ಟಾರೆಯಾಗಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಈ ಹಠಾತ್ ಒಗ್ಗಟ್ಟು ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಮೂಡಿಸಿದೆ. ಹಿರಿಯ ನಾಯಕರ ಬೆಂಬಲ ಮತ್ತು ಕಾರ್ಯಕರ್ತರ ಉತ್ಸಾಹವು ಉಪಚುನಾವಣೆಯ ಫಲಿತಾಂಶದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಲಿಂಡರ್ ಅಭಾವಕ್ಕೆ ಪ್ರಧಾನಿ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಸಚಿವ ಬೋಸರಾಜು ಆರೋಪ
ತಾತನ ಕಾರು, ಮೊಮ್ಮಗ ಸಮರ್ಥ್‌ ನಾಮಪತ್ರ: ಬಿ ಫಾರಂ ಸಿಗುವ ಮುನ್ನವೇ ನಾಮಪತ್ರ ಸಲ್ಲಿಕೆ ಸೀಕ್ರೆಟ್ ಬಿಚ್ಚಿಟ್ಟ ಪ್ರಭಾ!