ಮುಸ್ಲಿಂ ನಾಯಕರಿಂದಲೇ ಆಪರೇಷನ್ ಪೈಲ್ವಾನ್ ಯಶಸ್ವಿ,ಪರಮಾತ್ಮ ಬಂದ್ರೂ ಹಿಂದೆ ಸರಿಯೊಲ್ಲ ಎಂದಿದ್ದ ಸಾದಿಕ್, ಈಗ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ!

Kannadaprabha News   | Kannada Prabha
Published : Mar 28, 2026, 08:33 AM IST
avanagere By Election Rebel Leader Sadiq Pailwan Finally Backs Congress Candidate

ಸಾರಾಂಶ

ದಾವಣಗೆರೆ ಕಾಂಗ್ರೆಸ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಂಡಾಯವನ್ನು ಅಂತಿಮವಾಗಿ ಶಮನಗೊಳಿಸಲಾಗಿದೆ. ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್‌ ಅರ್ಷದ್ ಅವರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ, ಬಂಡಾಯ ಅಭ್ಯರ್ಥಿ ಸಾದಿಕ್‌ ಪೈಲ್ವಾನ್‌ ಅವರನ್ನು ಮನವೊಲಿಸುವಲ್ಲಿ ಯಶಸ್ವಿ.

ಬೆಂಗಳೂರು/ ದಾವಣಗೆರೆ (ಮಾ.28): ರಾಜ್ಯ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಪ್ರಮುಖ ನಾಯಕರು ಅಸಹಾಯಕರಾಗಿ ಕೈ ಎತ್ತಿದಾಗ ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್‌ ಅರ್ಷದ್ ಅಹರ್ನಿಶಿ ಕಸರತ್ತು ನಡೆಸಿ ದಾವಣಗೆರೆ ಕಾಂಗ್ರೆಸ್‌ನ ‘ಆಪರೇಷನ್‌ ಬಂಡಾಯ ಶಮನ’ ಯಶಸ್ವಿಯಾಗಿ ಮುಗಿಸಿದ್ದಾರೆ.

ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದು ಹಠ ಹಿಡಿದು ನಾಮಪತ್ರವನ್ನೂ ಸಲ್ಲಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್‌ ಪೈಲ್ವಾನ್‌ ಅವರನ್ನು ಮನವೊಲಿಸಿದ ಇಡೀ ಪ್ರಕ್ರಿಯೆ ಇದೀಗ ತೀವ್ರ ಕುತೂಹಲ ಮೂಡಿದೆ.

ಅಲ್ಪಸಂಖ್ಯಾತ ಮತಗಳು 70,000ಕ್ಕೂ ಹೆಚ್ಚಿರುವ ಕ್ಷೇತ್ರದಲ್ಲಿ ಸಾದಿಕ್‌ ಪೈಲ್ವಾನ್‌ ಸ್ಪರ್ಧೆ ಮಾಡಿದರೆ ಮತ ವಿಭಜನೆ ಉಂಟಾಗುವ ಭೀತಿ ಕಾಂಗ್ರೆಸ್‌ಗೆ ಕಾಡುತ್ತಿತ್ತು. ಹೀಗಾಗಿ ಸಾದಿಕ್‌ ಮನವೊಲಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಲ್ಪಸಂಖ್ಯಾತ ನಾಯಕರಿಗೆ ಸೂಚನೆ ನೀಡಿದ್ದರು.

ಆದರೆ, ಧಾರ್ಮಿಕ ಗುರುಗಳ ಆದೇಶ ಇದ್ದ ಕಾರಣ ಜಮೀರ್‌ ಅಹ್ಮದ್‌ಖಾನ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಅವರು ಬಂಡಾಯ ಶಮನಕ್ಕೆ ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಜಮೀರ್‌ ಅಹಮದ್ ಅವರು ಕೇರಳ ಚುನಾವಣಾ ಹೊಣೆಗಾರಿಕೆ ಕಾರಣ ನೀಡಿ ದಾವಣಗೆರೆಗೆ ತೆರಳಲಿಲ್ಲ. ಇನ್ನು ಗುರುವಾರ ದಾವಣಗೆರೆಯತ್ತ ಹೊರಟಿದ್ದ ಸಲೀಂ ಅಹಮದ್‌, ರಿಜ್ವಾನ್‌ ಅರ್ಷದ್ ಜತೆಗೆ ಹೆಲಿಪ್ಯಾಡ್‌ವರೆಗೂ ತೆರಳಿದ್ದ ನಸೀರ್‌ ಅಹಮದ್ ಅಂತಿಮವಾಗಿ ಹೆಲಿಕಾಪ್ಟರ್‌ ಹತ್ತಲಿಲ್ಲ ಎನ್ನಲಾಗಿದೆ.

ಕೊನೆಗೆ ಸಲೀಂ ಅಹಮದ್‌ ಹಾಗೂ ರಿಜ್ವಾನ್‌ ಅರ್ಷದ್‌ ಅವರು ಹೆಲಿಕಾಪ್ಟರ್‌ನಲ್ಲಿ ಚಿತ್ರದುರ್ಗದವರೆಗೆ ತೆರಳಿ ಅಲ್ಲಿಂದ ರಸ್ತೆ ಮೂಲಕ ಸಾದಿಕ್‌ ಪೈಲ್ವಾನ್‌ ಮನೆಗೆ ತೆರಳಿದ್ದಾರೆ. ಆ ವೇಳೆಗೆ ಪೈಲ್ವಾನ್‌ ನಾಮಪತ್ರ ಸಲ್ಲಿಕೆ ಮಾಡಿ ಮೊಬೈಲ್ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.

ಆದರೂ ಪಟ್ಟು ಬಿಡದ ಇಬ್ಬರೂ ಅಲ್ಪಸಂಖ್ಯಾತ ನಾಯಕರು ರಾತ್ರಿಯಿಡೀ ಸಾದಿಕ್‌ ಅವರ ಕುಟುಂಬ ಸದಸ್ಯರ ಮನವೊಲಿಸಿದ್ದಾರೆ. ಬಳಿಕ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಸಾದಿಕ್‌ ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು.

ತಮ್ಮ ಬಳಿ ಬಂದ ಸಾದಿಕ್ ಪೈಲ್ವಾನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಣದಲ್ಲಿದ್ದರೂ ತಟಸ್ಥರಾಗಿ ಉಳಿಯುವಂತೆ ಸೂಚಿಸಿದರು. ಈ ಮಾತಿಗೆ ಸಾದಿಕ್ ಪೈಲ್ವಾನ್ ಒಪ್ಪಿಗೆ ಸೂಚಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆ ಬೆಂಬಲ ಸೂಚಿಸಿದರು.

ಇನ್ನು ಆಪರೇಷನ್‌ನಿಂದ ಹೊರಗುಳಿದು ಜವಾಬ್ದಾರಿಯಿಂದ ನುಣುಚಿಕೊಂಡ ಜಮೀರ್ ಅಹಮದ್‌ ಖಾನ್‌ ಅವರ ಬಗ್ಗೆ ಸುರ್ಜೇವಾಲ ಅವರು ಗರಂ ಆಗಿರುವುದಾಗಿ ತಿಳಿದುಬಂದಿದೆ.

ಬಂಡಾಯ ಶಮನಗೊಳಿಸುವ ಹೊಣೆಯನ್ನು ಸಲೀಂ ಅಹಮದ್‌, ರಿಜ್ವಾನ್‌ ಅರ್ಷದ್‌ ಹಾಗೂ ಇನ್ನಿಬ್ಬರು ಅಲ್ಪಸಂಖ್ಯಾತ ನಾಯಕರಿಗೆ ನೀಡಲಾಗಿತ್ತು. ಆದರೆ, ಒಬ್ಬರು ಕೇರಳಕ್ಕೆ ಹೋಗಬೇಕು ಎಂದು ತೆರಳಿದರೆ, ಮತ್ತೊಬ್ಬರು ಬೇರೆ ಕೆಲಸ ಇದೆ ಎಂದು ಹಿಂದೆ ಸರಿದರು. ಅಂತಿಮವಾಗಿ ಸಲೀಂ ಅಹಮದ್‌, ರಿಜ್ವಾನ್‌ ಅರ್ಷದ್‌ ಯಶಸ್ವಿಯಾಗಿ ಮನವೊಲಿಕೆ ಕಾರ್ಯ ನಡೆಸಿದ್ದು, ಅವರಿಗೆ ಅಭಿನಂದನೆ.

- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜನರ ಜೀವ ಮುಖ್ಯವೋ? ಐಪಿಎಲ್‌ ಮುಖ್ಯವೋ? ಉಚಿತ ವಿಐಪಿ ಟಿಕೆಟ್‌ ಕೇಳಿದ ಶಾಸಕರಿಗೆ ಮಾತಲ್ಲೇ ಬೆಂಡೆತ್ತಿದ ನಿಖಿಲ್
Karnataka News Live: ಮುಸ್ಲಿಂ ನಾಯಕರಿಂದಲೇ ಆಪರೇಷನ್ ಪೈಲ್ವಾನ್ ಯಶಸ್ವಿ,ಪರಮಾತ್ಮ ಬಂದ್ರೂ ಹಿಂದೆ ಸರಿಯೊಲ್ಲ ಎಂದಿದ್ದ ಸಾದಿಕ್, ಈಗ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ!