ಈಗಾಗಲೇ ಬಿಜೆಪಿ ಟಿಕೆಟ್‌ಗೆ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಇದರಿಂದ ಒಂದು ಕಡೆ ನಿರಾಶೆಯಾದರೆ, ವಿಧಾನಸಭಾ ಚುನಾವಣೆ ವೇಳೆ ಪುತ್ತೂರಿಂದ ಸ್ಪರ್ಧಿಸಿದ್ದ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಲೋಕಸಭೆ ಸ್ಪರ್ಧೆ ಕನಸಿಗೂ ರಾಜ್ಯಾಧ್ಯಕ್ಷರ ಈ ಹೇಳಿಕೆ ತೆರೆ ಎಳೆದಂತಾಗಿದೆ.
ಮಂಗಳೂರು(ನ.23): ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕರ್ತರ ಮುಂದೆ ಕರೆ ನೀಡಿದ್ದಾರೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲೂ ದಕ್ಷಿಣ ಕನ್ನಡದಿಂದ ಲೋಕಸಭೆಗೆ ಕಟೀಲ್ ಅವರೇ ಸ್ಪರ್ಧಿಸಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.
ರಾಜ್ಯಾಧ್ಯಕ್ಷರಾಗಿ ಮೊದಲ ಬಾರಿಗೆ ಬುಧವಾರ ಮಂಗಳೂರಿಗೆ ಭೇಟಿ ನೀಡಿದ ವೇಳೆ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಈ ಘೋಷಣೆ ಮಾಡಿದ್ದಾರೆ.
ಸಚಿವ ಜಮೀರ್‌ರಿಂದ ಸ್ಪೀಕರ್ ಸ್ಥಾನಕ್ಕೆ ಜಾತಿ ಬಣ್ಣ: ವಿಜಯೇಂದ್ರ ಆಕ್ರೋಶ
ಮುಂದಿನ ಲೋಕಸಭಾ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದಿರುವ ಅವರು, ಮತ್ತೊಮ್ಮೆ ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಈ ಹೇಳಿಕೆ ಕರಾವಳಿ ಬಿಜೆಪಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.