
ಬೆಂಗಳೂರು (ಡಿ. 05): ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಾವು ಧರಿಸಿರುವ ಐಷಾರಾಮಿ ವಾಚ್‌ಗಳ ಕುರಿತು ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ಮಾಡಿದ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ತಮ್ಮ ಪಾರದರ್ಶಕತೆ ಮತ್ತು ಶ್ರೀಮಂತಿಕೆಯನ್ನು ಪ್ರಶ್ನಿಸಿದ ನಾರಾಯಣಸ್ವಾಮಿಯವರನ್ನು 'ಅವಿವೇಕಿ ಎಂದು ಟೀಕಿಸಿರುವ ಡಿಕೆಶಿ, ನೇರವಾಗಿ ತಮ್ಮ ಲೋಕಾಯುಕ್ತ ಅಫಿಡವಿಟ್ ಅನ್ನು ಪರಿಶೀಲಿಸುವಂತೆ ಸವಾಲು ಹಾಕಿದ್ದಾರೆ.
₹42 ಲಕ್ಷದ ಕಾರ್ಟಿಯರ್ ವಾಚ್ ವಿವಾದ
ಬಿಜೆಪಿ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಅವರು ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಧರಿಸಿರುವ ಐಷಾರಾಮಿ ಕಾರ್ಟಿಯರ್ (Cartier) ವಾಚ್ ಕುರಿತು ಸಾರ್ವಜನಿಕವಾಗಿ ಪ್ರಶ್ನೆ ಎತ್ತಿದ್ದರು. ಮಾರುಕಟ್ಟೆಯಲ್ಲಿ ಈ ವಾಚ್‌ನ ಮೌಲ್ಯ ಸುಮಾರು ₹42 ಲಕ್ಷ ಎಂದು ವರದಿಯಾಗಿದ್ದು, ಇಷ್ಟು ದುಬಾರಿ ಬೆಲೆಯ ವಾಚ್ ಖರೀದಿಗೆ ಹಣದ ಮೂಲ ಯಾವುದು? ಆಸ್ತಿ ಘೋಷಣೆಯಲ್ಲಿ ಇದನ್ನು ತೋರಿಸಲಾಗಿದೆಯೇ? ಎಂದು ನಾರಾಯಣಸ್ವಾಮಿ ಅವರು ಪರೋಕ್ಷವಾಗಿ ಪ್ರಶ್ನಿಸಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಕೆಶಿ ಅವರ ಆರ್ಥಿಕ ಪಾರದರ್ಶಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಆರೋಪ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.
ನಾರಾಯಣಸ್ವಾಮಿ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಾದ '@NswamyChalavadi'ಗೆ ಟ್ಯಾಗ್ ಮಾಡಿ, 'ಮಿಸ್ಟರ್ ನಾರಾಯಣಸ್ವಾಮಿ, ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್! ಎಂದು ಬರೆದು, ದಾಖಲೆಗಳ ಮೂಲಕ ತಿರುಗೇಟು ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲ! ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ' ಎಂದು ಡಿಕೆಶಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ವಿವಾದದ ಹಿನ್ನೆಲೆಯೊಂದಿಗೆ ಹೋಲಿಸಿದ ಡಿಕೆಶಿ, 'ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ..? ಎಂದು ಪ್ರಶ್ನಿಸಿದ್ದಾರೆ. ನಾರಾಯಣಸ್ವಾಮಿಯವರ ಟೀಕೆಗೆ ಸಿದ್ಧರಾಮಯ್ಯ ಮತ್ತು ತಮಗೆ ವೈಯಕ್ತಿಕವಾಗಿ ಶ್ರೀಮಂತಿಕೆ ಇದೆ ಎಂಬ ಅರ್ಥದಲ್ಲಿ ಉತ್ತರ ನೀಡಿದ ಡಿಕೆಶಿ, 'ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ' ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ!' ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೊನೆಯಲ್ಲಿ, 'ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ' ಎಂದು ನೇರ ಸವಾಲು ಹಾಕುವ ಮೂಲಕ, ತಮ್ಮ ಸಂಪತ್ತಿನ ವಿವರಗಳ ಕುರಿತು ಯಾವುದೇ ಸಂಶಯ ಇಲ್ಲ ಎಂಬುದನ್ನು ಡಿಸಿಎಂ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಲೋಕಾಯುಕ್ತದ ಅಫಿಡವಿಟ್ ಅನ್ನು ಮರೆಮಾಚುವ ಬದಲು, ಅದನ್ನು ವಿರೋಧಿಗಳ ವಿರುದ್ಧವೇ ಬಳಸಿದ ಡಿಕೆಶಿ ನಡೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.