
ಚಿಕ್ಕಮಗಳೂರು (ಡಿ.03): ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ಇದ್ದು, ಅವುಗಳ ಬದಲಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಂಡಿ ತಿನ್ನುವ ವಿಷಯ ಚರ್ಚೆಯಾಗುತ್ತಿರುವುದು ವಿಪರ್ಯಾಸ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ-ಡಿಸಿಎಂ ಅವರು ತಿಂಡಿ ತಿನ್ನುವುದು ರಾಷ್ಟ್ರ ಅಥವಾ ರಾಜ್ಯಕ್ಕೆ ಮಹತ್ವದ ವಿಚಾರವಲ್ಲ. ತಿಂಡಿಗೆ ಕೊಟ್ಟ ಕಾಳಜಿಯ ಕಾಲು ಭಾಗವನ್ನು ಅವರಿಬ್ಬರೂ ರಸ್ತೆ ಗುಂಡಿಗೆ ಕೊಟ್ಟಿದ್ದರೆ ಜನ ಸಾಮಾನ್ಯರ ಸಂಕಷ್ಟ ಪರಿಹಾರವಾಗುತ್ತಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಇಂದು ನಿಜಕ್ಕೂ ಚರ್ಚೆಯಾಗಬೇಕಾದ ವಿಚಾರಗಳೇನು? ರೈತರು ಹಾಗೂ ಸರ್ಕಾರಿ ನೌಕರರ ಆತ್ಮ*ಹತ್ಯೆಯ ಕುರಿತು ಚರ್ಚೆ ಆಗಬೇಕು. ಜೋಳ ಖರೀದಿ ಆಗದಿರುವ ಬಗ್ಗೆ, ರಸ್ತೆಗುಂಡಿಯ ಕಾರಣದಿಂದ 580ಕ್ಕೂ ಹೆಚ್ಚು ಜನ ಈ ವರ್ಷದಲ್ಲಿ ಪ್ರಾಣ ಕಳೆದುಕೊಂಡಿವ ಕುರಿತು ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಬಳಿ ಶಾಸಕರ ಸಂಖ್ಯೆ ಇರಬಹುದು. ಆದರೆ, ಜನರ ವಿಶ್ವಾಸ ಕಳೆದುಕೊಂಡಿದೆ. ಈಗ ಚುನಾವಣೆಯಾದರೆ ನಾವು 50 ಸ್ಥಾನ ಗೆಲ್ಲುವುದು ಕಷ್ಟ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ಅಷ್ಟು ಧೈರ್ಯವಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಸವಾಲು ಹಾಕಿದರು.
ಭಾರತೀಯ ಭಾಷೆ ವೈವಿಧ್ಯತೆಯಿಂದ ಕೂಡಿದೆ. ರಾಷ್ಟ್ರದ ಯಾವುದೇ ಒಂದು ಭಾಷೆಯನ್ನು ಅರ್ಥೈಸಿಕೊಂಡರೆ ಇನ್ನೊಂದು ಭಾಷೆಯನ್ನು ಸುಲಭವಾಗಿ ಅರಿತುಕೊಳ್ಳಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಿಸಿದರು. ಮಕ್ಕಳಿಗಾಗಿ ಪಾಲಕರು ಸಹಜವಾಗಿ ಆಸ್ತಿ-ಅಂತಸ್ತಿಗೆ ವಾರಸುದಾರನಾಗಿ ಮಾಡುತ್ತಾರೆ. ಈ ನಡುವೆ ಕನ್ನಡ ಸಂಸ್ಕೃತಿ, ಭಾಷಾ ಸೊಗಡಿನ ವಾರಸುದಾರನಾಗಿ ಮಾಡಬೇಕು. ಕನ್ನಡ ಪುಸ್ತಕಗಳ ಓದುವ ಹವ್ಯಾ ಸ ಬೆಳೆಸಲು ಮನೆಯಲ್ಲಿ ಪಾಲಕರು ಹೆಜ್ಜೆಯಿಡದಿದ್ದರೆ ಮಾತೃಭಾಷೆ ಭವಿಷ್ಯದಲ್ಲಿ ಕಳೆದುಹೋಗುವ ಆತಂಕ ವಿದೆ ಎಂದು ಹೇಳಿದರು.
ಪ್ರಸ್ತುತ ದಿನಮಾನದ ಯುವಸಮೂಹಕ್ಕೆ ಕನ್ನಡದ ಒತ್ತಕ್ಷರ ಕೂಡಿಸಿ ಓದುವುದು ಕಷ್ಟವಿದೆ. ಹಳೇ ಹಾಗೂ ನವ್ಯಗನ್ನಡದ ಗಂಧ ವಿಲ್ಲದಂತಾಗಿದೆ. ಕುಟುಂಬದಲ್ಲಿ ಅಪ್ಪ, ಅಮ್ಮ, ಭಾವ, ಚಿಕ್ಕವ್ವ, ದೊಡ್ಡವ್ವ ಎಂಬ ಪದಬಳಕೆ ನಶಿಸಿ, ಅಂಕಲ್, ಆಂಟಿ, ಬ್ರೋ ಎಂಬ ಆಂಗ್ಲಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದು ವಿಷಾದಕರ ಸಂಗತಿ ಎಂದರು. ಮನೆಗಳಲ್ಲಿ ಶುಭ ಕಾರ್ಯಗಳಲ್ಲೂ ಆಂಗ್ಲ ವ್ಯಾಮೋಹ ಹೆಚ್ಚಾದ ಪರಿಣಾಮ ಲಗ್ನಪತ್ರಿಕೆ ಶಾಸ್ತ್ರ, ಮಕ್ಕಳ ಜನ್ಮದಿನದಲ್ಲೂ ಆಂಗ್ಲ ಸಂಸ್ಕೃತಿ ಬಂದು, ಕನ್ನಡ ಸಂಸ್ಕೃತಿ ಮರೆಸಲಾಗುತ್ತಿದೆ. ಮಾತೃಭಾಷೆ ಕಡ್ಡಾಯವಾಗಿ ಉಳಿಯಬೇಕಾದರೆ ಪಾಲಕರು ಬದಲಾಗಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಮನೆಯಲ್ಲಿ ಸಾರ್ವತ್ರಿಕವಾಗಿ ಕನ್ನಡ ಕಡ್ಡಾಯಗೊಳಿಸಿದರೆ ಭಾಷಾ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.