ಜಾತಿ ಕಳ್ಳತನ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ: ಸಿ.ಟಿ. ರವಿ ಆಕ್ರೋಶ

Published : Sep 22, 2025, 06:19 AM IST
CT Ravi

ಸಾರಾಂಶ

ರಾಹುಲ್ ಗಾಂಧಿ ಅವರ ಸಹಮತಿ ಮೇರೆಗೆ ರಾಜ್ಯದಲ್ಲಿ ಜಾತಿ ಕಳ್ಳತನ ನಡೆಯುತ್ತಿದೆಯೇ ಅಥವಾ ರಾಹುಲ್ ಗಾಂಧಿಯವರೇ ಜಾತಿ ಕಳ್ಳತನದ ರೂವಾರಿಗಳೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

ಚಿಕ್ಕಮಗಳೂರು (ಸೆ.22): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ಆರೋಪ ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಕಳ್ಳತನ ಮಾಡುತ್ತಿದೆ. ಜಾತಿ ಕಳ್ಳತನ ಎನ್ನುವುದೇ ಹೊಸದು. ರಾಹುಲ್ ಗಾಂಧಿ ಅವರ ಸಹಮತಿ ಮೇರೆಗೆ ರಾಜ್ಯದಲ್ಲಿ ಜಾತಿ ಕಳ್ಳತನ ನಡೆಯುತ್ತಿದೆಯೇ ಅಥವಾ ರಾಹುಲ್ ಗಾಂಧಿಯವರೇ ಜಾತಿ ಕಳ್ಳತನದ ರೂವಾರಿಗಳೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೊಸ ಜಾತಿಗಳ ಸೃಷ್ಟಿಕರ್ತ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ಹೊಸ ಹೊಸ ಜಾತಿಗಳ ಸೃಷ್ಟಿ ನೋಡಿದರೆ ಸಾಮೂಹಿಕವಾಗಿ ಮತಾಂತರಕ್ಕೆ ಹುನ್ನಾರ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದರು. ರಾಜ್ಯದಲ್ಲಿ ನೋಟಿಫೈಟ್ ಜಾತಿಗಳು 877 ಇವೆ. ಆದರೆ, ಕಾಂತರಾಜು ವರದಿಯಲ್ಲಿ 400ಕ್ಕೂ ಹೆಚ್ಚು ಜಾತಿಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಯಿತು. ಇದೀಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಮತ್ತೆ ಹೊಸದಾಗಿ 200 ಜಾತಿ ಗಳನ್ನು ಸೇರ್ಪಡೆಗೊಳಿಸಲಾಗಿದೆ. ಕ್ರೈಸ್ತ ಮತದೊಂದಿಗೆ ಹಿಂದು ಜಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನು ಸೃಷ್ಟಿ ಮಾಡುತ್ತಿ ರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿಗಣತಿ ಮಾಡುತ್ತಿದೆ. ಪೂರ್ವ ತಯಾರಿ ಹಾಗೂ ತಾಂತ್ರಿಕತೆ ಬಳಸಿಕೊಂಡು ಸಮೀಕ್ಷೆ ನಡೆಸಲು ಯಾವುದೇ ತಕರಾರಿಲ್ಲ. ಆದರೆ, ಸಮಾಜ ಒಡೆಯಲು ಹಾಗೂ ಅರಾಜಕತೆ ಸೃಷ್ಟಿ ಮಾಡಲು ಬಿಡುವುದಿಲ್ಲ. ಸಮೀಕ್ಷೆ ಹೆಸರಿನಲ್ಲಿ ಸಾಮಾಜಿಕ ಕ್ಷೋಭೆ ಉಂಟು ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಹಿಂದೆ ಸಿಎಂ ಸಿದ್ದರಾಮಯ್ಯ ಕಾಂತರಾಜು ವರದಿಯನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದರು. ಆದರೆ, ವರದಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆದರು. ಒಳ ಮೀಸಲಾತಿಗೆ ನಾಗಮೋಹನ ದಾಸ್ ನೇತೃತ್ವದಲ್ಲಿ ಎಸ್ಸಿ ಎಸ್ಟಿ ವರ್ಗಗಳ ಸಮೀಕ್ಷೆ 60 ದಿನಗಳ ಕಾಲ ನಡೆಯಿತು. ಕೇವಲ ಒಂದು ಕೋಟಿ ಜನರನ್ನು 60 ದಿನಗಳ ಕಾಲ ಸಮೀಕ್ಷೆ ಮಾಡಲಾಯಿತು. ಇದೀಗ ಕೇವಲ 15 ದಿನದಲ್ಲಿ ರಾಜ್ಯದ ಏಳು ಕೋಟಿ ಜನರನ್ನು ಹೇಗೆ ಸಮೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಹಿಂದೂ ಸಮಾಜವನ್ನು ಒಡೆಯುವ ಉದ್ದೇಶದಿಂದಲೇ ಹಿಂದೂ ಜಾತಿಗಳನ್ನು ಕ್ರೈಸ್ತ ಮತದೊಂದಿಗೆ ಗುರುತಿಸುವ ಕೆಲಸ ನಡೆಯುತ್ತಿದೆ. 2018ರಲ್ಲಿ ಸಿದ್ದರಾಮಯ್ಯ ಅವರು ವೀರಶೈವ ಮತ್ತು ಲಿಂಗಾಯಿತರನ್ನು ಒಡೆಯುವ ಕೆಲಸ ಮಾಡಿದ್ದರು. ಇದೀಗ ಹಿಂದೂ ಜಾತಿಗಳನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಕ್ರೈಸ್ತ ಮತದೊಂದಿಗೆ ಸೇರಿಸಿರುವ ಹಿಂದೂ ಜಾತಿಗಳ ಹೆಸರನ್ನು ಕೂಡಲೇ ಸಮೀಕ್ಷೆ ಪಟ್ಟಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ಹೊಸ ಕಮ್ಯುನಿಷ್ಟ್ ಪ್ರಭಾ

ಹಿಂದೆ ಕಮ್ಯುನಿಷ್ಟರು ವರ್ಗ ಸಂಘರ್ಷ ಹುಟ್ಟು ಹಾಕಲು ಯತ್ನಿಸುತ್ತಿದ್ದರು. ಆದರೆ, ಅದರಲ್ಲಿ ಅವರು ವಿಫಲರಾದರು. ಇದೀಗ ಹೊಸ ಕಮ್ಯುನಿಷ್ಟರು ಶ್ರದ್ಧೆ ಇರುವ ಕಡೆ ಅಶ್ರದ್ಧೆ ಸೃಷ್ಟಿಸುತ್ತಿದ್ದಾರೆ. ಇಂಥವರ ಪ್ರಭಾವ ಸಿಎಂ ಸಿದ್ದರಾಮಯ್ಯ ಅವರ ಮೇಲಾದಂತಿದೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು‌. ನೂತನ ಕಮ್ಯುನಿಷ್ಟಗಳು ದಸರಾ ಸಂದರ್ಭದಲ್ಲಿ ಮಹಿಷಾ‌ ದಸರಾ ಆಚರಿಸುತ್ತೇವೆ ಎನ್ನುತ್ತಾರೆ. ರಾವಣ ದಹನಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಇಂಥ ನೂತನ ಕಮ್ಯುನಿಷ್ಟರು ಸಿಎಂ ಜೊತೆಗೆ ಇದ್ದಾರೆ. ಎಲ್ಲಿ ಶ್ರದ್ಧೆ ಇದೆಯೋ ಅಲ್ಲಿ ಅದಕ್ಕೆ ಪರ್ಯಾಯ ವಾಗಿ ಅಶ್ರದ್ಧೆ ಸೃಷ್ಠಿಸಿ ಸಮಾಜದಲ್ಲಿ ಅರಾಜಕತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ