
ಬೆಂಗಳೂರು (ಏ.17): ದೇಶದ ಮೊದಲ ಪ್ರಧಾನಿ ನೆಹರೂ ಕಾಲದಿಂದಲೂ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಕಾಂಗ್ರೆಸ್ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜಾರಿಗೆ ತಂದ ಯೋಜನೆಗಳು ಮತ್ತು ಕ್ರಮಗಳಿಂದ ಹಿಂದುಳಿದ ವರ್ಗಗಳ ಅಭ್ಯುದಯವಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಜಯನಗರದ ಜೆ.ಎಸ್.ಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಹಾಲುಮತ ಕುರುಬ ಸಮುದಾಯದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಒಟ್ಟಾರೆ ಅಭಿವೃದ್ಧಿಗೆ ನರೇಂದ್ರ ಮೋದಿ ಅವಿರತ ಶ್ರಮಿಸುತ್ತಿದ್ದಾರೆ. ಬಡ ಕುಟುಂಬದಿಂದ ಬಂದ ಮೋದಿಯವರಿಗೆ ಬಡವರ, ಹಿಂದುಳಿದವರ ನೋವು ಗೊತ್ತಿದ್ದು, ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆದರೆ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ಹಿಂದುಳಿದ ವರ್ಗಗಳ ಹಿತದ ಬಗ್ಗೆ ಯೋಚಿಸಿಯೇ ಇರಲಿಲ್ಲ ಎಂದು ಟೀಕಿಸಿದರು.
ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ: ಹಿಂದುಳಿದ ವರ್ಗಗಳನ್ನು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೆಚ್ಚು ಸಬಲೀಕರಣಗೊಳಿಸುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದೆ. ಹಿಂದುಳಿದ ವರ್ಗಗಳಿಗೆ ಸೈನಿಕ ಶಾಲೆಗಳಲ್ಲಿ, ಕೇಂದ್ರೀಯ ಶಾಲೆಗಳಲ್ಲಿ ಮತ್ತು ನೀಟ್‌ನಲ್ಲಿ ಮೀಸಲಾತಿ ಒದಗಿಸಿರುವ ಮೋದಿಯವರು ಆರ್ಥಿಕವಾಗಿ ಹಿಂದುಳಿದವರಿಗೂ ಶೇ.10ರಷ್ಟು ಮೀಸಲಾತಿ ಒದಗಿಸಿದ್ದಾರೆ ಎಂದು ವಿವರಿಸಿದರು.
ಒಕ್ಕಲೆಬ್ಬಿಸುವಾಗ ಕನ್ನಡಿಗನ ಕಾಲು ಮುರಿದ ಗೋವಾ ಪೊಲೀಸರು
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ, 5 ಕ್ಯಾಬಿನೆಟ್ ಶ್ರೇಣಿಯ ಸಚಿವರೊಂದಿಗೆ ಒಟ್ಟು 29 ಸಚಿವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಭಾರತದ ಇತಿಹಾಸದಲ್ಲಿಯೇ ಓಬಿಸಿ ಸಮುದಾಯಕ್ಕೆ ಅತೀ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿದ್ದು ಮೋದಿ ನೇತೃತ್ವದ ಸರ್ಕಾರದಲ್ಲಿ ಎಂಬುದು ವಿಶೇಷವಾಗಿದೆ ಎಂದರು.ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ, ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಕಾರ್ಯದರ್ಶಿ ಬಿ.ಸೋಮಶೇಖರ್, ಹಾಲುಮತ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.