
ಬೆಳಗಾವಿ (ಆ.03): ಅಧಿವೇಶನದಲ್ಲಿ ಸಂವಿಧಾನ ಬದ್ಧವಾಗಿ ಕಾಂಗ್ರೆಸ್ ಚರ್ಚೆ ಮಾಡುತ್ತಿಲ್ಲ. ಪ್ರಮುಖ ವಿಚಾರ ಪ್ರಸ್ತಾಪಿಸುತ್ತಿಲ್ಲ. ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಶಿಸ್ತು ಪಾಲನೆ ಮಾಡುತ್ತಿಲ್ಲ. ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಪಾಕಿಸ್ತಾನದ ಪರವಾದ ರೀತಿಯಲ್ಲಿ ರಾಹುಲ್ ಹೇಳಿಕೆ ಕೊಡುತ್ತಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ನೋಡಿದರೆ ಪಾಕಿಸ್ತಾನದ ಪರವಾಗಿದ್ದಾರೆ ಎನಿಸುತ್ತದೆ. ಟೀಕೆ ಮಾಡಲಿ. ದೇಶದ ಪ್ರಶ್ನೆ ಬಂದಾಗ ಭಾರತದ ಪರವಾಗಿ ಇರಬೇಕು, ಪ್ರತಿಷ್ಠೆ ಕಾಯಬೇಕು. ಆದರೆ, ದೇಶದ ವಿಚಾರದಲ್ಲಿ ರಾಹುಲ್ ಗಾಂಧಿ ತಪ್ಪು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಟ್ರಂಪ್ ಶೇ.25ರಷ್ಟು ಸುಂಕ ಹೆಚ್ಚಿಸಿದ್ದಾರೆ. ಆದರೆ, ಮತ್ತೊಂದು ದೇಶವನ್ನು ಟ್ರಂಪ್ ಡಿಕ್ಟೆಟ್ ಮಾಡಬಾರದು. ನಮ್ಮ ಜೊತೆಗೆ ವ್ಯಾಪಾರ ಮಾಡಿ ಮತ್ತೊಂದು ದೇಶದ ಜೊತೆಗೆ ಯಾಕೆ ಎಂದು ಎಂಬ ನಿರ್ಬಂಧ ಹಾಕುವುದು ಯಾವುದೇ ದೇಶದ ಅಧ್ಯಕ್ಷನಿಗೆ ಸರಿ ಬರಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ಅಂತಾರಾಷ್ಟ್ರೀಯ ವ್ಯವಹಾರ ನೀತಿಯ ಬಗ್ಗೆ ಪ್ರಧಾನಿಗಳು ಆಲೋಚನೆ ಮಾಡುತ್ತಿದ್ದಾರೆ.
ಸರಿಯಾದ ರೀತಿಯಲ್ಲಿ ಪ್ರಧಾನಿ ಕ್ರಮ ಕೈಗೊಳ್ಳುತ್ತಾರೆ. ಆದರೆ, ಟ್ರಂಪ್ ಹೇಳಿಕೆಗೆ ವ್ಯತಿರಿಕ್ತವಾಗಿ ರಾಹುಲ್ ಗಾಂಧಿ ಹೇಳಿ ನೀಡುತ್ತಿದ್ದಾರೆ ಎಂದು ಹೇಳಿದರು. ಭಾರತದ ಆರ್ಥಿಕ ಸತ್ತುಹೋಗಿದೆ ಎಂಬ ಟ್ರಂಪ್ ನೀಡಿದ ಹೇಳಿಕೆಯನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಓರ್ವ ಅಪ್ರಬುದ್ಧ ಲೀಡರ್ ಎಂದು ಕಿಡಿಕಾರಿದರು. ಕಾಂಗ್ರೆಸ್ ಪಕ್ಷದ ಶಶಿ ತರೂರ್, ಶುಕ್ಲಾ ಸೇರಿ ಹಲವರು ಭಾರತದ ಪರವಾಗಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದ ಬುದ್ಧಿವಂತ ನಾಯಕರಿಂದ ರಾಹುಲ್ ಗಾಂಧಿ ತಿಳಿದುಕೊಳ್ಳುವುದು ಬಹಳಷ್ಟಿದೆ. ಟ್ರಂಪ್ ಹೇಳಿಕೆ ಸಮರ್ಥನೆ ಮಾಡಿದ ರಾಹುಲ್ ಹೇಳಿಕೆ ಮೂರ್ಖತನದ ಪರಮಾವಧಿ. ರಾಹುಲ್ ಗಾಂಧಿ ಪ್ರತಿಪಕ್ಷದ ನಾಯಕನಾಗಲು ಅನರ್ಹನಾಗಿದ್ದಾನೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮಹದಾಯಿ ನೀರಾವರಿ ಯೋಜನೆ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಅವರ ಹೇಳಿಕೆ ಸಂಪೂರ್ಣ ತಪ್ಪು. ಕೇಂದ್ರ ಸಚಿವರು ಎಲ್ಲಿಯೂ ಅನುಮತಿ ಕೊಡಲ್ಲ ಎಂದು ಹೇಳಿಲ್ಲ. ಸದನದಲ್ಲೂ ಹೇಳಿಲ್ಲ. ನಾವು ಆಂತರಿಕವಾಗಿ ಎಲ್ಲೆಲ್ಲಿ ಒತ್ತಡ ತರಬೇಕು ತಂದಿದ್ದೇವೆ. ಶೀಘ್ರ ಒಳ್ಳೆಯ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಲಿದೆ. ಕುಡಿಯುವ ನೀರಿಗಾಗಿ ಕಳಸಾ, ಬಂಡೂರಿ ನಾಲಾ ಯೋಜನೆ ಇಂದಿಲ್ಲ, ನಾಳೆ ಆಗೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹದಾಯಿ ಯೋಜನೆಗೆ ಅನುಮತಿ ಕೊಡದಿದ್ದರೂ ಕಾಮಗಾರಿ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಕಾಮಗಾರಿಗೆ ನಾವು ಯಾವುದೇ ವಿರೋಧ ಮಾಡಲ್ಲ. ನಮ್ಮ ರಾಜ್ಯದ ನೀರು ನಾವು ತಿರುವು ಮಾಡಿಕೊಳ್ಳಬಹುದು. ಮಾಡಲಿ ಬಿಡಿ ಎಂದರು.
ನಿಷ್ಪಕ್ಷಪಾತವಾಗಿ ತನಿಖೆಯಾಗಲಿ: ಧರ್ಮಸ್ಥಳ ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳದಲ್ಲಿ ಮೃತರ ಅವಶೇಷ ಹೊರತೆಗೆಯುವ ಕಾರ್ಯ ನಡೆಯುತ್ತಿದ್ದು, ಎಸ್‌ಐಟಿ ತನಿಖೆ ನಡೆಯುತ್ತಿದೆ. ಅನಾಮಿಕ ಹೇಳಿಕೆ ಮೇಲೆ ಅಸ್ಥಿಪಂಜರ ಹೊರ ತೆಗೆಯಲಾಗುತ್ತಿದೆ. ಮೃತರು ಯಾರು ಹೇಗೆ ಮೃತಪಟ್ಟಿದ್ದಾರೆ ಎನ್ನುವುದು ಗೊತ್ತಾಗಬೇಕು. ಈ ವೇಳೆ ಯಾವುದೇ ಧರ್ಮ, ಪೀಠಗಳ ಅಪಪ್ರಚಾರವಾಗಬಾರದು. ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತಿ ಹೇಳಿದ್ದಾನೆ. ಈ ಬಗ್ಗೆ ಡಿಎನ್‌ಎ ಪರೀಕ್ಷೆ ನಡೆಯಬೇಕು. ತನಿಖೆಯ ಎಲ್ಲಾ ಸತ್ಯಾಸತ್ಯಗಳು ಹೊರ ಬರಬೇಕು ಎಂದು ಶೆಟ್ಟರ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.