ನಮ್ಮದೇ ತಪ್ಪಿನಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಇದು ದರಿದ್ರ ಸರ್ಕಾರ: ವಿಜಯೇಂದ್ರ

By Govindaraj SFirst Published Mar 28, 2024, 5:24 AM IST
Highlights

ನಮ್ಮದೇ ಆದ ತಪ್ಪಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದು ದರಿದ್ರ ಸರ್ಕಾರ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. 
 

ಮಡಿಕೇರಿ (ಮಾ.28): ನಮ್ಮದೇ ಆದ ತಪ್ಪಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದು ದರಿದ್ರ ಸರ್ಕಾರ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಬಾರಿಯೂ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದನ್ನು ತಡೆಯಲು ಯಾವುದೇ ದುಷ್ಟ ಶಕ್ತಿಯಿಂದ ಸಾಧ್ಯವಿಲ್ಲ. 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಲು ಪ್ರಧಾನಿ ಮೋದಿ ಅವರು ಶ್ರಮ ವಹಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಭೀಕರ ಬರಗಾಲ ಕಂಡುಬರುತ್ತಿದೆ. ರಾಜ್ಯದಲ್ಲಿ ಸುಮಾರು 800 ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಆದರೆ ಕೇಂದ್ರವನ್ನು ಬೊಟ್ಟು ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

ಲೋಕಸಭಾ ಟಿಕೆಟ್ ಭಿನ್ನಮತ ಶಮನಕ್ಕೆ ಬಿಎಸ್‌ವೈ ಸಾರಥ್ಯ: ಕೊಪ್ಪಳ, ಬಳ್ಳಾರಿ, ದಾವಣಗೆರೆಯಲ್ಲಿ ಯಶಸ್ವಿ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಶಾ ಅವರು ತೀರ್ಮಾನ ಮಾಡಿ ಯದುವೀರ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಅಲ್ಲದೆ ಕೊಡಗಿಗೆ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಅಂದಿನ ಯುಪಿಎ ಸರ್ಕಾರದಲ್ಲಿ ಹಲವು ಹಗರಣಗಳು ನಡೆದಿದ್ದವು. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ ಎಂದರು.

ಮೋದಿ ಅವರು ಜಾಗತಿಕ ನಾಯಕ: ಸಂಸದ ಪ್ರತಾಪ ಸಿಂಹ ಮಾತನಾಡಿ ಹತ್ತು ವರ್ಷ ನಿಮ್ಮ ಕುಟುಂಬದ ಒಬ್ಬ ಸದಸ್ಯನಾಗಿ ಕಂಡಿದ್ದೀರಾ. ಮೋದಿ ಸರ್ಕಾರ ಒಳ್ಳೆಯ ಆಡಳಿತ ನೀಡಿದೆ. ಮೋದಿ ಅವರು ಜಾಗತಿಕ ನಾಯಕ. ಈ ಬಾರಿಯೂ ಮೋದಿ ಅವರು ಪ್ರಧಾನಿಯಾಗಬೇಕು. ಕೊಡಗು- ಮೈಸೂರಿನ ಅಭ್ಯರ್ಥಿ ಯದುವೀರ್ ಅವರನ್ನು ಕೂಡ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು. 15 ತಿಂಗಳಲ್ಲಿ ಮೈಸೂರು - ಕುಶಾಲನಗರ ಚತುಷ್ಪತ ರಸ್ತೆ ಯದುವೀರ್ ಅವರ ನೇತೃತ್ವದಲ್ಲಿ ಉದ್ಘಾಟನೆಯಾಗಲಿದೆ. ಮಡಿಕೇರಿಯಿಂದ ಮಾಣಿಗೆ ಬೈಪಾಸ್ ರಸ್ತೆ ಕೂಡ ಮಾಡಲಾಗುವುದು‌. 

ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಮಾಡಬೇಕು. ನಾನು ಎಂದಿಗೂ ಕಾರ್ಯಕರ್ತರ ಜೊತೆ ಇರುತ್ತೇನೆ. ಯದುವೀರ್ ಅಭಿವೃದ್ಧಿ ಕೆಲಸ ಮಾಡಲಿ ಎಂದರು. ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮಾತನಾಡಿ ಪ್ರಧಾನಿಯವರ ಆಶೀರ್ವಾದದಿಂದ ತಾನು ಸ್ಪರ್ಧಿಸಿದ್ದೇನೆ. ಪ್ರಧಾನಿ ಅವರು ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದ್ದಾರೆ. 2047 ರಲ್ಲಿ ಭಾರತ ಮುಂದುವರಿದ ರಾಷ್ಟ್ರ ಆಗಬೇಕು. ಇದರಿಂದ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ಗೆಲ್ಲಿಸಬೇಕು. ಅಂದು ಮೈಸೂರು ಅರಸರು ಮಾಡಿದ ಕೆಲಸ ಸುವರ್ಣ ಕೆಲಸ. ಇಂದು ಮೋದಿ ಅವರ ಕೆಲಸ ಕೂಡ ಸುವರ್ಣ ಕೆಲಸ ಎಂದರು.

ದಾವಣಗೆರೆ ಬಂಡಾಯ ಬಗೆಹರಿಸಿದ ಬಿಎಸ್‌ವೈ: ರವೀಂದ್ರನಾಥ್‌ ನೇತೃತ್ವದಲ್ಲಿ ಚುನಾವಣೆಗೆ ಸರ್ವಸಮ್ಮತಿ

ಎಂದಿಗೂ ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ. ಮೈಸೂರು ಹಾಗೂ ಮಡಿಕೇರಿಯಲ್ಲಿ ಕಚೇರಿ ಮಾಡುತ್ತೇನೆ. ಅದು ನಿಮ್ಮ ಕಚೇರಿ. ಎಲ್ಲರೂ ಒಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು. ಮಾಜಿ ಸಚಿವ ರಾಮದಾಸ್ ಮಾತನಾಡಿ, ಯದುವೀರ್ ಗೆಲವಿಗೆ ಕಾರ್ಯಕರ್ತರು ಈಗಿನಿಂದಲೇ ಕೆಲಸ ಮಾಡಬೇಕೆಂದು ಕರೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ಹೇಳುವ ಮೂಲಕ ಮತವಾಗಿ ಪರಿವರ್ತನೆ ಮಾಡಬೇಕು ಎಂದರು. ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿಗಳಾದ ಸುನಿಲ್ ಸುಬ್ರಮಣಿ, ಎಸ್ ಜಿ. ಮೇದಪ್ಪ, ಪ್ರಮುಖರಾದ ಉದಯ್ ಕುಮಾರ್ ಶೆಟ್ಟಿ ಮತ್ತಿತರರು ಹಾಜರಿದ್ದರು.

click me!