* ಕಾಂಗ್ರೆಸ್ ನಂಬಿ ಒಬ್ಬಂಟಿಯಾದ ಗುರಿಕಾರ
* ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಂಟಿ ಪ್ರಚಾರ
* ಉಸ್ತುವಾರಿಯೂ ಬಂದಿಲ್ಲ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜೂ.07): ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ತಮ್ಮದೇಯಾದ ಪೈಪೋಟಿ ನೀಡಿದ್ದ ಬಸವರಾಜ ಗುರಿಕಾರ, ಸದ್ಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿಯೂ ಒಬ್ಬಂಟಿ ಪ್ರಚಾರ ಮಾಡುತ್ತಿದ್ದಾರೆ! ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಷ್ಟೇ ಅಲ್ಲ ಧಾರವಾಡ, ಕಾರವಾರ, ಹಾವೇರಿ ಜಿಲ್ಲೆಗಳ ಕಾಂಗ್ರೆಸ್ ಮುಖಂಡರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಂತಿಲ್ಲ.
ಭರ್ಜರಿ ಪ್ರಚಾರ ಕಂಡೂ..:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಂದು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬಸವರಾಜ ಹೊರಟ್ಟಿ ಪರ ಪ್ರಚಾರ ಮಾಡಿದ್ದಾರೆ. ಆಯಾ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಮುಖಂಡರು ನಿತ್ಯವೂ ಹತ್ತಾರು ಕಡೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೂ ಕಾಂಗ್ರೆಸ್ ಮುಖಂಡರು ಇದು ತಮಗೆ ಸಂಬಂಧಿಸಿದ್ದಲ್ಲ ಎನ್ನುವಷ್ಟರ ಮಟ್ಟಿಗೆ ಮೌನ ವಹಿಸಿದ್ದಾರೆ.
ಗದಗ ಜಿಲ್ಲೆಯ ಎಚ್.ಕೆ.ಪಾಟೀಲ್, ಜಿ.ಎಸ್.ಪಾಟೀಲ್, ಬಿ.ಆರ್.ಯಾವಗಲ್, ಧಾರವಾಡ ಜಿಲ್ಲೆ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅವರನ್ನು ಹೊರತು ಪಡಿಸಿದರೆ ಈ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಗುರಿಕಾರ ಜತೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ.
Karnataka MLC Election; ಹೊರಟ್ಟಿಗೆ ದಾಖಲೆಯ ಗೆಲುವು ತನ್ನಿ, ಶಿಕ್ಷಕರಲ್ಲಿ ಬೊಮ್ಮಾಯಿ ಮನವಿ!
23 ವಿಧಾನ ಸಭಾ ಕ್ಷೇತ್ರ, ಮೂರು ಲೋಕಸಭಾ ಕ್ಷೇತ್ರಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿ ಬಹಳಷ್ಟುಜನ ಮಾಜಿ ಸಚಿವರು, ಶಾಸಕರು, ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು, ಪಕ್ಷದ ಮುಖಂಡರು ಇದ್ದಾರೆ. ಚುನಾವಣೆ ಹತ್ತಿರ ಬಂದಿದ್ದರೂ ಇನ್ನೂ ಎಚ್ಚೆತ್ತುಕೊಳ್ಳದಿರುವುದು ಅಚ್ಚರಿ ಮೂಡಿಸಿದೆ.
ಉಸ್ತುವಾರಿಯೂ ಬಂದಿಲ್ಲ:
ಎಂಎಲ್‌ಸಿ ಸಲೀಂ ಅಹ್ಮದ ಈ ಚುನಾವಣೆಯ ಉಸ್ತುವಾರಿ. ಅವರೂ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರದಲ್ಲಿ ತೊಡಗುವ ಗೋಜಿಗೆ ಹೋಗಿಲ್ಲ. ಇನ್ನು ಎರಡನೆಯ ಸ್ತರದ ಮುಖಂಡರೆನಿಸಿಕೊಂಡಿರುವ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ಹಲವು ಮುಖಂಡರು ಕೂಡ ಗುರಿಕಾರ ಜತೆ ಈ ವರೆಗೆ ಪ್ರಚಾರ ಮಾಡಿಲ್ಲ. ಹೊರಟ್ಟಿಎದುರಿಗೆ ಕಾಂಗ್ರೆಸ್ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿದೆಯೇ? ಎಂಬ ಅನುಮಾನ ಹುಟ್ಟುತ್ತಿದೆ.
ಸದ್ಯ ಗುರಿಕಾರ ಒಬ್ಬಂಟಿ ಆಗಿರುವುದಂತೂ ಸತ್ಯ. ಇನ್ನಾದರೂ ಹಾಲಿ- ಮಾಜಿ ಶಾಸಕರು, ಮಂತ್ರಿಗಳು, ಸ್ಥಳೀಯ ಮುಖಂಡರು ಗುರಿಕಾರ ಪರ ಚುನಾವಣೆ ಪ್ರಚಾರದಲ್ಲಿ ತೊಡಗುತ್ತಾರೆಯೇ ಎಂಬುದನ್ನು ಕಾಯ್ದು ನೋಡಬೇಕಿದೆ!