ನಾಯಕತ್ವ ಗೊಂದಲ ಇತ್ಯರ್ಥಕ್ಕೆ ಕಾಂಗ್ರೆಸ್‌ ಶಾಸಕರಿಂದ ಒತ್ತಡ

Kannadaprabha News   | Kannada Prabha
Published : Feb 06, 2026, 05:42 AM IST
Siddaramaiah DK Shivakumar

ಸಾರಾಂಶ

ರಾಜ್ಯ ಕಾಂಗ್ರೆಸ್‌ ಪಕ್ಷ ಹಾಗೂ ಸರ್ಕಾರವನ್ನು ಕಾಡುತ್ತಿರುವ ನಾಯಕತ್ವ ಗೊಂದಲ ಪರಿಹರಿಸದ ಕಾಂಗ್ರೆಸ್‌ ಹೈಕಮಾಂಡ್‌ ಧೋರಣೆ ಬಗ್ಗೆ ಹಿರಿಯ ಸಚಿವರೂ ಸೇರಿ ಬಹುತೇಕ ಶಾಸಕರ ಅಸಮಾಧಾನ ಬಹಿರಂಗವಾಗಿ ವ್ಯಕ್ತವಾಗಲು ಆರಂಭವಾಗಿದೆ.

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಪಕ್ಷ ಹಾಗೂ ಸರ್ಕಾರವನ್ನು ಕಾಡುತ್ತಿರುವ ನಾಯಕತ್ವ ಗೊಂದಲ ಪರಿಹರಿಸದ ಕಾಂಗ್ರೆಸ್‌ ಹೈಕಮಾಂಡ್‌ ಧೋರಣೆ ಬಗ್ಗೆ ಹಿರಿಯ ಸಚಿವರೂ ಸೇರಿ ಬಹುತೇಕ ಶಾಸಕರ ಅಸಮಾಧಾನ ಬಹಿರಂಗವಾಗಿ ವ್ಯಕ್ತವಾಗಲು ಆರಂಭವಾಗಿದೆ. ಮುಖ್ಯವಾಗಿ ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಚಾರದಲ್ಲಿ ಮೌನ ವಹಿಸಿರುವುದಕ್ಕೆ ಶಾಸಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.

ವಿಧಾನ ಮಂಡಲ ಅಧಿವೇಶನದ ಅವಧಿಯಲ್ಲಿ ಈ ಬಗ್ಗೆ ಶಾಸಕರು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದರೆ, ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಸಚಿವ ಸತೀಶ್‌ ಜಾರಕಿಹೊಳಿ ಅವರು ನಾಯಕತ್ವ ಗೊಂದಲದ ಬಗ್ಗೆ ಹೈಕಮಾಂಡ್‌ ಯಾವುದಾದರೂ ಒಂದು ತೀರ್ಮಾನ ಕೈಗೊಳ್ಳಬೇಕು ಎಂಬುದು ಪಕ್ಷದ 140 ಶಾಸಕರ ಅಭಿಪ್ರಾಯ ಎಂದು ಹೇಳಿದರು.

ಇದೇ ದಾಟಿಯಲ್ಲಿ ಮಾತನಾಡುವ ಬಹುತೇಕ ಶಾಸಕರು, ನಾಯಕತ್ವ ವಿಚಾರದಲ್ಲಿ ಹೈಕಮಾಂಡ್‌ ಸ್ಪಷ್ಟತೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದುವರೆಯುತ್ತಾರೆ ಎಂದಾದರೂ ನಿಖರವಾಗಿ ಹೇಳಬೇಕು ಅಥವಾ ಬದಲಾವಣೆಯ ಮನಸ್ಸಿದೆಯೇ ಎಂಬುದನ್ನಾದರೂ ಸ್ಪಷ್ಟವಾಗಿ ಹೇಳಬೇಕು. ಇದ್ಯಾವುದನ್ನೂ ಮಾಡದೆ ಗೊಂದಲದ ಸ್ಥಿತಿಯನ್ನು ಹೀಗೆ ಮುಂದುವರೆಸಿದರೆ ಪಕ್ಷ ಹಾಗೂ ಸರ್ಕಾರ ಎರಡೂ ದುರ್ಬಲವಾಗುತ್ತಾ ಸಾಗಲಿದೆ ಎಂದೇ ಎಚ್ಚರಿಸುತ್ತಾರೆ.

ಈ ವಿಚಾರದಲ್ಲಿ ರಾಜ್ಯದವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಮೌನಕ್ಕೆ ಜಾರಿರುವುದಕ್ಕೂ ಬೇಸರ ವ್ಯಕ್ತವಾಗಿದೆ. ರಾಜ್ಯದಲ್ಲಿ ಪಕ್ಷ ಹಾಗೂ ಆಡಳಿತದ ಸ್ಥಿತಿಯನ್ನು ಬಲ್ಲ ಖರ್ಗೆ ಅವರು ಹೈಕಮಾಂಡ್‌ ವರಿಷ್ಠರೊಂದಿಗೆ ಚರ್ಚಿಸಿ ಗೊಂದಲ ಬಗೆಹರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸುತ್ತಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ ಅವರು ನಾನೂ ಆದಷ್ಟು ಬೇಗ ಈ ಗೊಂದಲ ಬಗೆಹರಿಸಿ ಎಂದೇ ಹೈಕಮಾಂಡ್‌ ನಾಯಕರಿಗೆ ಹೇಳಿದ್ದೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರ ಅಭಿಪ್ರಾಯವೂ ಅದೇ ಆಗಿದೆ. ಹೈಕಮಾಂಡ್‌ನವರು ಏನೇ ಇದ್ದರೂ ಒಂದು ನಿರ್ಧಾರಕ್ಕೆ ಬಂದು ಸ್ಪಷ್ಟಪಡಿಸಬೇಕು ಎಂದರು.

ನಿಮ್ಮ ಪಕ್ಷದ ಕೆಲ ಶಾಸಕರು ಆದಷ್ಟು ಬೇಗ ಈ ಗೊಂದಲ ಇತ್ಯರ್ಥಪಡಿಸಬೇಕೆಂದು ಆಗ್ರಹಿಸುತ್ತಲೇ ಇದ್ದಾರಲ್ಲಾ ಎಂಬ ಪ್ರಶ್ನೆಗೆ, ಇದು ಕೆಲ ಶಾಸಕರ ಮಾತಲ್ಲ. ಪಕ್ಷದ 140 ಶಾಸಕರ ಅಭಿಪ್ರಾಯವೂ ಅದೇ ಆಗಿದೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತ ಪ್ರಶ್ನೆಗೂ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಯಾವಾಗ, ಏನು ಎನ್ನುವುದನ್ನೂ ಹೈಕಮಾಂಡ್‌ನವರೇ ಹೇಳಬೇಕು. ಸಮಯ ಬರಬಹುದು ನೋಡೋಣ. ಅನೇಕ ಚುನಾವಣೆಗಳು ನಮ್ಮ ಮುಂದಿವೆ. ಗ್ರಾ ಪಂ ಚುನಾವಣೆ, ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣೆ, ಬಳಿಕ ತಾಪಂ, ಜಿಪಂ ಚುನಾವಣೆಗಳು ಇವೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಬದಲಾವಣೆಯೂ ಆಗಬಹುದು ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ. ನೋಡೋಣ ಎಂದರು.

ಪಕ್ಷ, ಸರ್ಕಾರದ ಮೇಲೆ ದುಷ್ಪರಿಣಾಮ:

ಹೈಕಮಾಂಡ್‌ ನಾಯಕತ್ವ ವಿಚಾರದಲ್ಲಿ ಯಾವುದೇ ನಿಲುವು ತೆಗೆದುಕೊಳ್ಳದಿರುವುದರಿಂದ ಸರ್ಕಾರದ ಆಡಳಿತ ಮತ್ತು ಪಕ್ಷದ ವರ್ಚಸ್ಸು ಎರಡರ ಮೇಲೂ ಪರಿಣಾಮ ಬೀರುತ್ತಿದೆ. ಇದರ ಲಾಭ ಪಡೆಯುತ್ತಿರುವ ಅಧಿಕಾರಿಗಳು ಯಾರ ಮಾತೂ ಕೇಳುತ್ತಿಲ್ಲ. ಅವರಿಂದ ಕೆಲಸ ಮಾಡಿಸಲು ಆಗುತ್ತಿಲ್ಲ ಎಂಬುದು ಶಾಸಕರ ಅಳಲು.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಬ್ಬರೂ ಪರಸ್ಪರ ಉಪಹಾರ ಕೂಟ ನಡೆಸಿ ತಾವಿಬ್ಬರೂ ಈ ವಿಚಾರವನ್ನು ಹೈಕಮಾಂಡ್‌ಗೆ ಬಿಟ್ಟಿರುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ. ಆದರೂ, ಹೈಕಮಾಂಡ್‌ ನಾಯಕರು ಯಾವ ಕಾರಣಕ್ಕೆ ನಾಯಕತ್ವ ಬದಲಾವಣೆ ಗೊಂದಲ ವಿಚಾರವನ್ನು ಇತ್ಯರ್ಥ ಮಾಡದೆ ಮುಂದುವರೆಸಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕ, ಸಚಿವರ ವಲಯದಲ್ಲಿ ಬೇಸರ ಕೇಳಿರುತ್ತಿದೆ.

ಶಾಸಕರ ಆತಂಕ ಏನು?

- ನಾಯಕತ್ವ ವಿಚಾರದಲ್ಲಿ ಹೈಕಮಾಂಡ್‌ ಯಾವುದೇ ನಿಲುವು ತೆಗೆದುಕೊಳ್ಳದ್ದರಿಂದ ಸರ್ಕಾರ, ಪಕ್ಷದ ಮೇಲೆ ಪರಿಣಾಮ

- ಆಡಳಿತ ಮೇಲೆ ಪ್ರತಿಕೂಲ ಪರಿಣಾಮ ಅಧಿಕಾರಿಗಳು ಯಾರ ಮಾತೂ ಕೇಳುತ್ತಿಲ್ಲ. ಅವರಿಂದ ಕೆಲಸ ಮಾಡಿಸಲು ಆಗುತ್ತಿಲ್ಲ

- ಹೀಗಾಗಿ ನಾಯಕತ್ವ ವಿಚಾರದಲ್ಲಿ ಹೈಕಮಾಂಡ್‌ ಸ್ಪಷ್ಟನೆ ನೀಡಬೇಕು. ಸಿಎಂ ಮುಂದುವರಿಯುತ್ತಾರಾ ಎಂದು ಹೇಳಬೇಕು

- ಬದಲಾವಣೆ ಮನಸ್ಸಿದ್ದರೆ ಅದನ್ನಾದರೂ ತಿಳಿಸಬೇಕು. ಗೊಂದಲ ಮುಂದುವರಿಸಿದರೆ ಸರ್ಕಾರ, ಪಕ್ಷ ಎರಡೂ ದುರ್ಬಲ ಆಗುತ್ತೆ

ಬೇಗ ಗೊಂದಲಇತ್ಯರ್ಥ ಮಾಡಿ

ಆದಷ್ಟು ಬೇಗ ಗೊಂದಲ ಬಗೆಹರಿಸಿ ಎಂದೇ ಹೈಕಮಾಂಡ್‌ ನಾಯಕರಿಗೆ ಹೇಳಿದ್ದೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರ ಅಭಿಪ್ರಾಯವೂ ಅದೇ ಆಗಿದೆ. ಹೈಕಮಾಂಡ್‌ನವರು ಏನೇ ಇದ್ದರೂ ಒಂದು ನಿರ್ಧಾರಕ್ಕೆ ಬಂದು ಸ್ಪಷ್ಟಪಡಿಸಬೇಕು. ಇದು ಕೆಲಸ ಶಾಸಕರದ್ದಲ್ಲ, ಪಕ್ಷದ 140 ಶಾಸಕರ ಅಭಿಪ್ರಾಯ.

- ಸತೀಶ್‌ ಜಾರಕಿಹೊಳಿ, ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಸಂಸದೀಯ ಇತಿಹಾಸದಲ್ಲೇ ಕಂಡುಕೇಳರಿಯದ ಸಂಗತಿ : ಪ್ರಧಾನಿ ಮೋದಿ ಮೇಲೆ ಹಲ್ಲೆಗೆ ಯತ್ನ?
ಕಳ್ಳತನ ಅವರ ಕುಟುಂಬ ವೃತ್ತಿ, ಅವರು ಮಹಾತ್ಮಗಾಂಧಿಯವರ ಉಪನಾಮವನ್ನೇ ಕದ್ದವರು : ಪ್ರಧಾನಿ