ಲೋಕಸಭೆ ಚುನಾವಣೆ 2024: ಗುಂಪುಗಾರಿಕೆಯಲ್ಲಿಯೇ ಕಾಂಗ್ರೆಸ್ ಕಾಲಹರಣ..!

By Kannadaprabha News  |  First Published Mar 31, 2024, 9:17 AM IST

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ. ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಮುಂದೆ ದೂರಿದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ 
 


ರಾಮಮೂರ್ತಿ ನವಲಿ

ಗಂಗಾವತಿ(ಮಾ.31):  ಗಂಗಾವತಿ ಕ್ಷೇತ್ರದಲ್ಲಿನ ಕಾಂಗ್ರೆಸ್ ಭಿನ್ನಮತ, ನಾಯಕರ ಕಚ್ಚಾಟ, ಗುಂಪುಗಾರಿಕೆ ಪಕ್ಷದ ಲೋಕಸಭೆ ಅಭ್ಯರ್ಥಿಗೆ ತಲೆ ನೋವಾಗಿ ಪರಿಣಮಿಸಿದೆ, ಇದರಿಂದ ತಾಲೂಕಿನಲ್ಲಿ ಪಕ್ಷದ ಚುನಾವಣೆ ಪ್ರಚಾರದ ಮೇಲೂ ಪರಿಣಾಮ ಉಂಟಾಗಿದೆ. ಎರಡೂ ಗುಂಪನ್ನು ಒಂದುಗೂಡಿಸಲು ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಹಾಗೂ ಪಕ್ಷದ ಜಿಲ್ಲಾ ಮುಖಂಡರು ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ವಿಷಯ ಹೋಗಿದ್ದು, ಎರಡೂ ಗುಂಪಿನ ಮುಖಂಡರನ್ನು ಕರೆದು ಸಿಎಂ ತಾಕೀತು ಮಾಡಿದ್ದರೂ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಪರಸ್ಪರ ಕಾಲೆಳೆಯುವ ಯತ್ನ ಮುಂದುವರಿದಿದೆ.

Latest Videos

undefined

ಇದೇ ಗುಂಪುಗಾರಿಕೆಯಿಂದಲೇ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇಲ್ಲಿ ಪಕ್ಷ ಸೋತಿದೆ. ಲೋಕಸಭೆ ಚುನಾವಣೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಇವರಿಗೆ ಸಿಟ್ಟು, ಇವರನ್ನು ಒಲೈಸಿದರೆ ಅವರಿಗೆ ಆಗುವುದಿಲ್ಲ ಎಂಬಂತಹ ಪರಿಸ್ಥಿತಿ ತಾಲೂಕಿನಲ್ಲಿದೆ. ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಹಾಗೂ ಮಾಜಿ ವಿಧಾನ ಪರಿಷತ್‌ ಸದಸ್ಯ ಎಚ್‌.ಆರ್‌. ಶ್ರೀನಾಥ ಪ್ರತ್ಯೇಕವಾಗಿ ಸಿಎಂ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ. ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುಖ್ಯಮಂತ್ರಿ ಮುಂದೆ ದೂರಿದ್ದಾರೆ.

ಲೋಕಸಭೆ ಚುನಾವಣೆ: ಕೊಪ್ಪಳ ಎಂಪಿ ಕ್ಷೇತ್ರದಲ್ಲಿ ಮೊದಲು ಗೆದ್ದಿದ್ದು ಪಕ್ಷೇತರ ಅಭ್ಯರ್ಥಿ ಶಿವಮೂರ್ತಿ ಸ್ವಾಮಿ..!

ಇನ್ನೊಂದಡೆ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಸಿಎಂ ಭೇಟಿಯಾಗಿ ಸ್ಥಳೀಯ ಕಾಂಗ್ರೆಸ್ ನಡೆ ಮತ್ತು ಮುಖಂಡರ ಕಚ್ಚಾಟದ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಬರುವ ದಿನಗಳಲ್ಲಿ ಸರ್ಕಾರದಲ್ಲಿ ಯೋಗ್ಯ ಸ್ಥಾನಮಾನ ನೀಡಬೇಕೆಂದು ಕೋರಿದ್ದಾರೆ.

ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಎಂದು ರಾಜಶೇಖರ್ ಹಿಟ್ನಾಳ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಭೇಟಿ ಮಾಡಿ ಚುನವಣೆ ಎದುರಿಸುವ ಬಗ್ಗೆ ರಾಜಶೇಖರ್ ಹಿಟ್ನಾಳ್ ಚರ್ಚೆ ನಡೆಸಿದ್ದಾರೆ. ನಂತರ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಎಚ್.ಜಿ. ರಾಮುಲು ಮತ್ತು ಪುತ್ರ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರನ್ನು ಭೇಟಿ ಮಾಡಿ ಬೆಂಬಲಿಸ ಬೇಕೆಂದು ಕೋರಲಾಯಿತು.

ಇದೀಗ ಒಂದು ವಾರ ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಇಲ್ಲಿ ಕಾಂಗ್ರೆಸ್‌ ಪ್ರಚಾರ ಮಂದಗತಿಯಲ್ಲಿ ಸಾಗುತ್ತಿದೆ. ಎರಡೂ ಗುಂಪುಗಳೂ ಪ್ರತಿಷ್ಠೆಯ ಗುದ್ದಾಟದಲ್ಲಿ ಕಾಲಹರಣ ಮಾಡುತ್ತಿದೆ.

‘ಮೋದಿ ಮೋದಿ’ ಎನ್ನುವವರ ಕಪಾಳಕ್ಕೆ ಬಾರಿಸಿ: ತಂಗಡಗಿ..!

ನಾವು ಮತ್ತು ನಮ್ಮ ಮನೆತನದವರು ಕಾಂಗ್ರೆಸ್ ಪರವಾಗಿ ಶ್ರಮಿಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರು ಸಂಪೂರ್ಣವಾಗಿ ನಮ್ಮ ಹಿಂದೆ ಇದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ತಿಳಿಸಿದ್ದಾರೆ. 

ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಅಲ್ಪಸ್ವಲ್ಪ ಭಿನ್ನಮತ ಇದ್ದರೆ ಬರುವ ದಿನಗಳಲ್ಲಿ ಎಲ್ಲ ಸರಿ ಹೋಗುತ್ತವೆ. ರಾಜ್ಯ ನಾಯಕರು ಈಗಾಗಲೇ ಸ್ಥಳೀಯ ನಾಯಕರಿಗೆ ಸಲಹೆ ಸೂಚನೆ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ನೀಡಿದ್ದಾರೆ ಎಂದು ಮಾಜಿ ಸಂಸದ ಶಿವರಾಮಗೌಡ ಹೇಳಿದ್ದಾರೆ. 

click me!