ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವನೆಗೆ ಸ್ಪರ್ಧೆ ಮಾಡ್ತಾರಾ ಇಲ್ವಾ ಎನ್ನುವ ಬಗ್ಗೆ ಅವರೇ ಪ್ರತಿಕ್ರಿಯಿಸಿದ್ದಾರೆ.
ಮೈಸೂರು, (ಡಿ.18): 2018ರ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಕಂಡಿದ್ದ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಗೆಲುವು ಸಾಧಿಸಿದ್ದರು.
ಇದೀಗ ಮುಂದಿನ ವಿಧಾನಸಭಾ ಚುನಾವಣೆ ಬಾದಾಮಿ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಅವರು ಮುಂದಿನ ಚುನಾವಣೆ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.
ಬಾದಾಮಿಗೆ ಸಿದ್ದರಾಮಯ್ಯ ಗುಡ್‌ಬೈ? ಮುಂದಿನ ಸ್ಪರ್ಧೆಗೆ ಈ ಕ್ಷೇತ್ರದ ಮೇಲೆ ಕಣ್ಣು!
ಇಂದು (ಶುಕ್ರವಾರ) ಮೈಸೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನನಗೆ ಯಾವ ಆಸೆಗಳೂ ಇಲ್ಲ. ನಾನು ಇನ್ನು ಮುಂದಿನ ಚುನಾವಣೆಗೆ ನಿಲ್ಲಬೇಕಾ?, ಇಲ್ಲವಾ? ಎಂಬುದನ್ನು ತೀರ್ಮಾನಿಸಿಲ್ಲ. ಇನ್ನು ಆರು ತಿಂಗಳು, ವರ್ಷ ಬಿಟ್ಟು ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ನನ್ನನ್ನು ಯಾರು, ಯಾವ ಕ್ಷೇತ್ರಕ್ಕೂ ಇದುವರೆಗೂ ಆಹ್ವಾನಿಸಿಲ್ಲ. ಚುನಾವಣೆಗೆ ನಿಲ್ಲುವುದರ ಬಗ್ಗೆ ಇನ್ನು ಆರು ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ. ಚಾಮುಂಡೇಶ್ವರಿಯಲ್ಲಿ ಸೋತ ಬಳಿಕ ನಾನು ಕ್ಷೇತ್ರಕ್ಕೆ ಹೋಗಿಲ್ಲ ಎಂಬುದು ಸತ್ಯ. ಇವತ್ತು ಆ ಕ್ಷೇತ್ರದ ಮುಖಂಡರ ಸಭೆ ಕರೆದಿದ್ದೇನೆ ಎಂದರು.
ಚಾಮುಂಡೇಶ್ವರಿಯಲ್ಲಿ ಪರ್ಯಾಯ ನಾಯಕನ ಕೂಗು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಒಳ್ಳೆಯ ಬೆಳವಣಿಗೆ, ನಾನೇನು ಶಾಶ್ವತ ಅಲ್ಲವಲ್ಲ. ಪರ್ಯಾಯ ನಾಯಕ ಬೇಕಲ್ವೇ. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಿಲ್ಲ ನಿಜ. ನಾನು ಸೋತ ಬಳಿಕ ಇಲ್ಲಿ ಸಭೆ ನಡೆಸಿಲ್ಲ ಎಂದು ಹೇಳಿದರು.