ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಲಿ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರಿಗೆ ಸಿದ್ದರಾಮಯ್ಯ ಪ್ರಬಲ ತಿರುಗೇಟು ನೀಡಿದ್ದಾರೆ.
ವಿಜಯಪುರ [ನ.13]: ಬಿಜೆಪಿ ಜೊತೆ ಜೆಡಿಎಸ್ ಒಳಒಪ್ಪಂದ ಮಾಡಿ ಕೊಂಡಿರುವ ಶಂಕೆ ಇದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಲಿ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರ ಹೇಳಿಕೆಗೆ ಪ್ರಬಲ ತಿರುಗೇಟು ನೀಡಿದ್ದಾರೆ.
ಇದೇ ವೇಳೆ, ಬಿಜೆಪಿ ಸರ್ಕಾರವನ್ನು ಉಳಿಸಲು ದೇವೇಗೌಡರು ಯತ್ನಿಸುತ್ತಿದ್ದು ಅವರು ಹೇಗೆ ಸೆಕ್ಯುಲರ್ ಆಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಜನಜಾಗೃತಿ ಸಮಾವೇಶ ಮತ್ತು ಆ ಬಳಿಕ ಸುದ್ದಿಗಾರರ ಬಳಿ ಮಾತನಾಡುವ ವೇಳೆ ದೇವೇಗೌಡರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮತ್ತು ದೇವೇಗೌಡರ ವಿರುದ್ಧ ಹರಿಹಾಯ್ದರು.
undefined
ಸೆಕ್ಯುಲರಿಸಂ ಪಕ್ಷ ಎಲ್ಲಿದೆ?: ಉಪಚುನಾವಣೆ ಯಲ್ಲಿ ಬಿಜೆಪಿ ಸೋತರೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಅವರ ಸರ್ಕಾರ ಉಳಿಯಬೇಕಾದರೆ ಎಂಟು ಜನರು ಗೆಲ್ಲಲೇಬೇಕು. ಆದರೆ ಏತನ್ಮಧ್ಯೆ ಸೆಕ್ಯುಲರ್ ಎಂದು ಹೇಳಿಕೊಳ್ಳುವ ದೇವೇಗೌಡರು ಈ ಸರ್ಕಾರಕ್ಕೆ ನಾವು ಇದ್ದೇವೆ ಎಂಬ ರೀತಿಯಲ್ಲಿ ಅಭಯ ನೀಡುವ ಮಾತುಗಳನ್ನಾಡುತ್ತಿದ್ದಾರೆ. ಅವರು ಹೇಗೆ ಸೆಕ್ಯುಲರ್ ಎಂದು ನನಗೆ ಅರ್ಥವಾಗುತ್ತಿಲ್ಲ. ಹಾಗಿ ದ್ದರೆ ಸೆಕ್ಯುಲರ್ ಪಕ್ಷ ಎಲ್ಲಿದೆ ಎಂದು ಟಾಂಗ್ ನೀಡಿದರು.
ಇದೇವೇಳೆ ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ಸ್ಥಾನ ಗೆದ್ದರೆ ನಾನು ನಾಡಿನ ಜನತೆಯ ಕ್ಷಮೆ ಕೇಳುವುದಾಗಿ ದೇವೇಗೌಡರು ಹೇಳಿರುವ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು.
ಉಪ ಚುನಾವಣೆ : ಕಾಂಗ್ರೆಸಿಗೆ ದೇವೇಗೌಡರ ಚೆಕ್...
ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ನಾನು ಎಲ್ಲೂ ಹೇಳಿಲ್ಲ. 12 ಸ್ಥಾನಗಳಲ್ಲಿ ಖಂಡಿತ ಗೆಲುವು ಸಾಧಿಸುತ್ತೇವೆ. 15ರಲ್ಲಿ ಗೆದ್ದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದೇನೆ. ಆದರೆ ದೇವೇಗೌಡರು ಏಕೆ ಹಾಗೆ ಹೇಳಿದ್ದಾರೆ ಎಂಬುವುದು ಗೊತ್ತಿಲ್ಲ ಎಂದು ಹೇಳಿದರು. ಖರ್ಗೆಗೆ ಪಟ್ಟ ವಿರೋಧಿಸಿಲ್ಲ: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿಪಟ್ಟವನ್ನು ತಪ್ಪಿಸಿದರೆಂಬ ದೇವೇಗೌಡರ ಆರೋಪವನ್ನೂ ಅಲ್ಲಗೆಳೆದಿರುವ ಸಿದ್ದರಾಮಯ್ಯ, ಅವರು ಆ ರೀತಿ ಯಾಕೆ ಹೇಳುತ್ತಾರೋ ಒಂದೂ ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರ ರಚಿಸುವಾಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ತಾವು ವಿರೋಧಿಸಿಲ್ಲ.
ಸಮ್ಮಿಶ್ರ ಸರ್ಕಾರ ಒಪ್ಪಂದ ಮಾಡುವಾಗ ನಾನು ಆ ಸಭೆಯಲ್ಲಿ ಇರಲಿಲ್ಲ. ಹೈಕಮಾಂಡ್ ಸೂಚನೆ ಹಿನ್ನೆಲೆ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ರಚನೆಗೆ ಒಪ್ಪಿದ್ದೆ ಎಂದರು.