ಜನಾರ್ದನ ರೆಡ್ಡಿ ಶಾಸಕರಾಗಿರಲು ಅಯೋಗ್ಯರು: ಸಲೀಂ ಅಹ್ಮದ್‌

By Kannadaprabha News  |  First Published Jun 21, 2024, 5:10 PM IST

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಾಲಾಯಕ್‌ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿರುವುದಕ್ಕೆ ಕಿಡಿಕಾರಿದ ಅವರು, ರೆಡ್ಡಿ ಅವರೇ ಶಾಸಕರಾಗಿರಲು ಅಯೋಗ್ಯರಾಗಿದ್ದಾರೆ. 


ಹುಬ್ಬಳ್ಳಿ (ಜೂ.21): ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಇಂಧನ ಬೆಲೆಯನ್ನು ₹ 65ರಿಂದ ₹ 110ಕ್ಕೆ ಹಾಗೂ ₹ 400 ಇದ್ದ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ₹ 1200ಕ್ಕೆ ಹೆಚ್ಚಿಸಿದೆ. ಈ ಬಗ್ಗೆ ಮಾತನಾಡದ ಬಿಜೆಪಿಗರಿಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಹೇಳಿದರು. ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರಕ್ಕೆ ಭವಿಷ್ಯವಿಲ್ಲ. ಅದು ಅಲ್ಪ ಆಯುಷ್ಯದ ಸರ್ಕಾರ ಎಂದು ಭವಿಷ್ಯ ನುಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಕರ್ನಾಟಕಕ್ಕಿಂತ ಹೆಚ್ಚಿನ ಬೆಲೆ ಇದೆ ಎಂಬುದು ಜನರಿಗೂ ಗೊತ್ತಿದೆ. 

ಬಿಜೆಪಿಯವರಿಗೂ ತಿಳಿದಿದೆ. ಆದರೂ ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಈ ಬಗ್ಗೆ ಯಾವುದೇ ಆತಂಕ ಬೇಡ. ಈಗಿರುವ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಾಲಾಯಕ್‌ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿರುವುದಕ್ಕೆ ಕಿಡಿಕಾರಿದ ಅವರು, ರೆಡ್ಡಿ ಅವರೇ ಶಾಸಕರಾಗಿರಲು ಅಯೋಗ್ಯರಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡಿದ್ದಾರೆ. ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

Tap to resize

Latest Videos

ಶಿಗ್ಗಾಂವಿ ಉಪಚುನಾವಣೆಯ ಟಿಕೆಟ್‌ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ ನಡೆಸಿದ್ದು, ಮೂರು ಸ್ಥಾನಗಳಲ್ಲಿ ಗೆಲವು ಸಾಧಿಸುವುದು ನಿಶ್ಚಿತ. ಈಗಾಗಲೇ ಮೂರು ಕ್ಷೇತ್ರಕ್ಕೆ ವೀಕ್ಷಕರನ್ನು ನೇಮಿಸಲಾಗಿದೆ. ಅವರು ಕ್ಷೇತ್ರಕ್ಕೆ ಬಂದು ಪರಿಶೀಲಿಸುತ್ತಾರೆ. ಬಳಿಕ ವರದಿ ತಯಾರಿಸಿ ಕೊಡುತ್ತಾರೆ. ಸದ್ಯ ನಾನೀಗ ವಿಧಾನ ಪರಿಷತ್‌ ಸದಸ್ಯನಾಗಿದ್ದೇನೆ. ವರಿಷ್ಠರು ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ ಎಂದ ಅವರು, ಜಿಪಂ, ತಾಪಂ ಚುನಾವಣೆಯಲ್ಲೂ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣದಿಂದ ಸ್ಪರ್ಧಿಸ್ತಾರಾ ಡಿಕೆಶಿ?: ಇಬ್ಬರು ಸಿಎಂ ಆದ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ!

ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ. ಒಂದೆಡೆ ಚಂದ್ರಬಾಬು ನಾಯ್ಡು, ಮತ್ತೊಂದೆಡೆ ನಿತೀಶಕುಮಾರ ಅವರ ಸಹಕಾರದಿಂದ ಸರ್ಕಾರ ನಡೆಯುತ್ತಿದೆ. ಈ ಸರ್ಕಾರದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಸಂಚಲನ ಉಂಟು ಮಾಡಿದೆ ಎಂದರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲಿನ ಪ್ರಶ್ನೆಗೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗೆದ್ದು ಸೋತಿದ್ದರೆ, ವಿನೋದ ಅಸೂಟಿ ಸೋತು ಗೆದ್ದಿದ್ದಾರೆ. ಜೋಶಿ ಅವರ ಗೆಲುವಿನ ಲೀಡ್‌ ಬಹಳ ಕಡಿಮೆಯಾಗಿದೆ. ಇದು ಒಂದು ರೀತಿಯಲ್ಲಿ ಬಿಜೆಪಿಗೆ ಸೋಲೇ ಆದಂತೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸದಾನಂದ ಡಂಗನವರ, ಪರ್ವೇಜ್‌ ಕೊಣ್ಣೂರು, ಚಂದ್ರಶೇಖರ ಜುಟ್ಟಲ, ಬಿ. ಬಸವರಾಜ ಮಂತಾದವರು ಇದ್ದರು.

click me!