'ಗಾಂಧೀಜಿ ಬಹುದೊಡ್ಡ ರಾಮ ಭಕ್ತ, ರಾಮನಿಂದಲೇ ಗಾಂಧಿಜಿಯನ್ನು ದೂರ ಮಾಡಲಾಗಿದೆ'

By Suvarna NewsFirst Published Nov 18, 2021, 4:55 PM IST
Highlights

* ಆರ್‌ಎಸ್‌ಎಸ್‌, ಹಿಂದೂ ಸಂಘಟನೆಗಳ ವಿರುದ್ಧ ರಮೇಶ್ ಕುಮಾರ್ ಕಿಡಿ
* ಬಿಜೆಪಿ,ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸ್ಪೀಕರ್
* ರಾಮನಿಂದಲೇ ಗಾಂಧಿಜಿಯನ್ನು ದೂರ ಮಾಡಲಾಗಿದೆ ಎಂದ ರಮೇಶ್ ಕುಮಾರ್

ಬೆಂಗಳೂರು, (ನ.18): ಗಾಂಧೀಜಿ (Gandhiji)ಬಹುದೊಡ್ಡ ರಾಮ (Rama) ಭಕ್ತರಾಗಿದ್ದರು. ರಾಮನಿಂದಲೇ ಗಾಂಧಿಜಿಯನ್ನು ದೂರ ಮಾಡಲಾಗಿದೆ ಎಂದು ಕಾಂಗ್ರೆಸ್ (congress) ನಾಯಕ ರಮೇಶ್ ಕುಮಾರ್ (Ramesh Kumar)ಆರೋಪಿಸಿದ್ದಾರೆ.

 ಸ್ವಾತಂತ್ರ್ಯ ಸಂಭ್ರಮದ ಏಳುವರೆ ದಶಕದ ಸಂಭ್ರಮಾಚರಣೆ ಪ್ರಯುಕ್ತ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಹಾತ್ಮ ಗಾಂಧಿ ಹುತಾತ್ಮರಲ್ಲ, ಭವಿಷ್ಯದ ಬೆಳಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು,  ಗಾಂಧೀಜಿ ಸತ್ತಿದ್ದು ಹೇಗೆ? ಹಾರ್ಟ್ ಅಟ್ಯಾಕ್ ಆಯ್ತಾ? ಕ್ಯಾನ್ಸರ್ ಬಂತಾ? ಗಾಂಧೀಜಿ ಬಹುದೊಡ್ಡ ರಾಮ ಭಕ್ತರಾಗಿದ್ದರು. ಗಾಂಧೀಜಿಗಿಂತ ದೊಡ್ಡ ರಾಮಭಕ್ತನನ್ನು ಈ ದೇಶದಲ್ಲಿ ಎಲ್ಲಿಂದ ತರ್ತೀರಿ? ಈಗ ರಾಮನಿಂದಲೇ ಗಾಂಧಿಜಿಯನ್ನು ದೂರ ಮಾಡಲಾಗಿದೆ ಎಂದರು. 

Kangana Ranaut: 'ಇನ್ನೊಂದು ಕೆನ್ನೆ ತೋರಿಸಿದರೆ ಸಿಗೋದು ಭಿಕ್ಷೆ, ಸ್ವಾತಂತ್ರ್ಯವಲ್ಲ'

ಗಾಂಧಿ ಕೊಂದ ಗೋಡ್ಸೆಯ ದೇವಸ್ಥಾನ ಮಾಡ್ತಾರಂತೆ ಉತ್ತರ ಪ್ರದೇಶದಲ್ಲಿ. ಗೋಡ್ಸೆಯನ್ನು ಮಾರ್ಗದರ್ಶಕ ಎನ್ನೋದು ಯಾರು? ಗಾಂಧಿಯನ್ನು ಕೊಂದಿದ್ದರಿಂದ ನಿಮಗೆ ಸಿಕ್ಕ ಲಾಭವಾದರೂ ಏನು? ಗಾಂಧಿ ತತ್ವ, ಭಗತ್ ಸಿಂಗ್ ರಕ್ತ, ಜಲಿಯನ್​ವಾಲಾಬಾಗ್​ನಲ್ಲಿ ಚೆಲ್ಲಿದ ದೇಶಭಕ್ತರ ರಕ್ತ ದೇಶದಲ್ಲಿ ಹರಿಯುತ್ತಿದೆ. ನಿಮ್ಮದು ರಕ್ತದ ಮಡುವಿನಲ್ಲಿ ವಿಹಾರ ಮಾಡುತ್ತಿರುವ ದೋಣಿ. ಇದೂ ಒಂದು ಕಾಲ ಅಷ್ಟೇ. ಎಷ್ಟು ದಿನ ನಡೆಯುತ್ತೋ ನಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರಿಗಳು ಬಂದು ಕುರ್ಚಿಯಲ್ಲಿ ಕುಳಿತಿವೆ. ನಾವು ಸಿಂಹದ ಮರಿಗಳು, ನರಿಗಳಿಗೆ ಅಂಜುವುದು ಬೇಡ. ಇವರದ್ದೆಲ್ಲ ಸ್ವಲ್ಪ ದಿನ ನಡೆಯಬಹುದಷ್ಟೇ, ನಾವು ಕಾದು ಮುನ್ನುಗ್ಗೋಣ ಎಂದು ಕರೆ ನೀಡಿದರು.

ಕ್ವಿಟ್ ಇಂಡಿಯಾ ಚಳವಳಿ ನಡೆಯುವಾಗ ಎಲ್ಲಿಗೆ ಹೋಗಿದ್ರಿ? ಆಗ ಹಿಂದೂ ಮಹಾಸಭಾ ಇರಲಿಲ್ವಾ? ಆರ್​ಎಸ್​ಎಸ್​ ಇರಲಿಲ್ವಾ? ಕಸ್ತೂರ್ ಬಾ ಮೃತಪಟ್ಟಾಗ ನಿಮಗೆ ದುಃಖ ಆಗಲಿಲ್ವಾ? ಈಗ ಎಂಥ ದೇಶಭಕ್ತಿ, ಮಹಾನ್ ದೇಶಭಕ್ತಿ ನಿಮ್ಮದು. ಭಾರತ್ ಮಾತಾಕೀ ಜೈ ಅಂತೀರಿ ಈಗ. ಯಾವ ಭಾರತ ಮಾತೆಯಪ್ಪ, ಅಂಬಾನಿ ಮಾತೆಯಾ? ಅದಾನಿ ಮಾತೆಯಾ ಅಥವಾ ಭಗತ್ ಸಿಂಗ್ ಭಾರತ್ ಮಾತೆಯಾ ಎಂದು ಪ್ರಶ್ನಿಸಿದರು.

Kangana Ranaut ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅವಮಾನ : ಬಿಜೆಪಿ ವಕ್ತಾರ!

ನೀವು ಬ್ರಿಟಿಷರ ವಾರಸುದಾರರು
ಕಾಂಗ್ರೆಸ್ ಏನೂ ಮಾಡಿಲ್ಲ ಮಾಡಿಲ್ಲ ಎಂದು ಸದಾ ಆರೋಪಿಸುತ್ತೀರಿ. ನೀವು ಏನು ಮಾಡಿದ್ದೀರಿ ನೋಡೋಣ. ನೆಹರು ಹುಟ್ಟಿದಾಗ ಕೆ.ಬಿ.ಹೆಡಗೆವಾರ್ ಹುಟ್ಟಿದರು. ಶಾಂತಿ ಕದಡಿದ ಮುಸಲೋನಿಯ ಶಿಷ್ಯ ಕೆ.ಬಿ.ಹೆಡಗೆವಾರ್. 2023ರೊಳಗೆ ಹಿಂದೂ ರಾಷ್ಟ್ರ ಮಾಡಬೇಕೆಂಬ ಯೋಚನೆ ನಿಮಗಿದೆ. ಹೀಗಾಗಿಯೇ ಸಿಎಎ, ಇನ್ನೊಂದು ಮಗದೊಂದು ತರುತ್ತಿದ್ದೀರಿ. ಬ್ರಿಟಿಷರಿಗೂ ಸಂಘಕ್ಕೂ ಯಾವುದೇ ರೀತಿ ವ್ಯತ್ಯಾಸವೇ ಇಲ್ಲ. ಕಾಂಗ್ರೆಸ್​ ಪಕ್ಷದವರು ಬ್ರಿಟಿಷ್ ಸಂತತಿಗೆ ವಾರಸುದಾರರಲ್ಲ. ಆದರೆ ನೀವು ಬ್ರಿಟಿಷರ ವಾರಸುದಾರರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ವಾಗ್ದಾಳಿ ನಡೆಸಿದರು.

ಬ್ರಿಟಿಷರ ವಿರುದ್ದ ಕಾಂಗ್ರೆಸ್ ಹೋರಾಡುತ್ತಿದ್ದಾಗ ನೀವು ಸಂಘದ ಸ್ಥಾಪನೆ ಮಾಡಿದಿರಿ. ನಿಮ್ಮ ಆದರ್ಶ ಏನು? ಎಳೆ ಮಕ್ಕಳನ್ನು ಕರೆದುಕೊಂಡು ಕಬಡ್ಡಿ ಆಡಿಸೋದು. ಆಟ ಆಡಿಸುತ್ತಾ, ಆಡಿಸುತ್ತಾ ಮನಸ್ಸು ಬದಲಾಯಿಸೋದು. ಬಳಿಕ ಮಕ್ಕಳ ಮನಸ್ಸಲಿ ವಿಷ ತುಂಬುವುದು ನಿಮ್ಮ ಕೆಲಸ. ಮನಸ್ಸಿಗೆ ವಿಷ ತುಂಬಿಕೊಂಡ ಮಕ್ಕಳು ವಿವೇಚನೆ ಕಳೆದುಕೊಳ್ಳುತ್ತಾರೆ ಎಂದು ದೂರಿದರು.

ಯಾರು ಹಿಂದೂ? ಯಾರು ಹಿಂದೂ ಅಲ್ಲ? ಎಂದು ಪ್ರಶ್ನಿಸಿದರು. ದಯಾನಂದ ಸರಸ್ವತಿ ಹಿಂದು ಅಲ್ವಾ? ರಾಜಾ ರಾಮ್ ಮೊಹನ್ ರಾಯ್ ಹಿಂದೂ ಅಲ್ವಾ? ಠ್ಯಾಗೋರ್ ಹಿಂದೂ ಅಲ್ವಾ? ಆರ್​ಎಸ್​ಎಸ್​ನವರು ಸತಿ ಸಹಗಮನ ಪದ್ದತಿಯನ್ನು ಈಗಲೂ ಸಮರ್ಥಿಸಿಕೊಳ್ತಾರೆ. ಹಾಗಾದ್ರೆ ಹೆಂಡತಿ ಸತ್ತರೆ ಇವರೂ ಹೋಗಿ ಸಾಯಬೇಕಲ್ಲ ಮತ್ತೆ. ಆರ್ಯ ಸಮಾಜ ಕಟ್ಟಿದ ಈಶ್ವರ ಚಂದ್ರ ವಿದ್ಯಾ ಸಾಗರರಂಥವರನ್ನು ಇವರು ವಿರೋಧಿಸ್ತಾರೆ. ಸ್ವಾಮಿ ವಿವೇಕಾನಂದರು ಚಿಕಾಗೋಗೆ ಭಾರತದ ಚುನಾಯಿತ ಪ್ರತಿನಿಧಿಯಾಗಿ ಹೋಗಿರಲಿಲ್ಲ. ಕೇವಲ ಭಾಗವಹಿಸಲು ಮಾತ್ರ ಹೋಗಿದ್ದರು. ಆದರೆ ಈಗ ವಿವೇಕಾನಂದರ ಫೋಟೋ ಪಕ್ಕದಲ್ಲಿ ಮೋದಿ-ಅಮಿತ್ ಶಾ ಫೋಟೊಗಳು ಕಾಣಿಸಿಕೊಳ್ಳುತ್ತಿವೆ. ವಿವೇಕಾನಂದರು ಹೇಳಿದ್ದೇ ಒಂದು ಇವರು ಹೇಳೋದೇ ಇನ್ನೊಂದು ಎಂದು ಕಿಡಿಕಾರಿದರು.

ಅಮಿತ್ ಶಾ ಯಾರು? 
ಎನ್​ಆರ್​ಸಿ ಬಂದಾಗ ಚುನ್ ಚುನ್ ಕೆ ಮಾರೂಂಗಾ ಅಂತಾನೆ ಅಮಿತ್ ಶಾ. ಇವನ ಕೈಲೇ ಬಂದೂಕಿದೆಯಲ್ಲ. ಎಂಥವರ ಕೈಗೆ ದೇಶ ಕೊಟ್ಟಿದ್ದೇವೆ ಸ್ವಾಮಿ? ನಾನು ಇತಿಹಾಸದ ಬಗ್ಗೆ ದಾಖಲೆ‌ ಇಟ್ಟುಕೊಂಡು ಹೇಳಿದ್ದೇನೆ. ಇದರಲ್ಲಿ ಒಂದು ಸುಳ್ಳಾದರೂ ಕೂಡ ನಾನು ರಾಜಕೀಯ ಜೀವನದಿಂದ ನಿವೃತ್ತಿ ತಗೋತೇನೆ ಎಂದು ಸವಾಲು ಹಾಕಿದರು.

ಸಂವಿಧಾನ ರಚನೆ ಸಮಿತಿ ಸ್ಥಾಪನೆಯಾದ ಬಳಿಕ ಹಿಂದೂ ಕೋಡ್ ಬಿಲ್ ತರಲಾಯ್ತು. ಎಲ್ಲ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿರಬೇಕು ಅಂತ ಅಂಬೇಡ್ಕರ್ ಹೇಳಿದರು. ವಿಧವಾ ವಿವಾಹ ಕಾಯ್ದೆಯನ್ನು ಕೂಡ ಆಗಲೇ ಅಂಬೇಡ್ಕರ್ ತಂದಿದ್ದರು. ಹಿಂದೂ ಮಹಾಸಭಾ ಅಂತ ಗಲಾಟೆ ಮಾಡಿದರು. ಹಿಂಡೂ ಕೋಡ್ ಬಿಲ್ ವಿಚಾರ ಪ್ರಸ್ತಾಪಿಸಿ ಅಂಬೇಡ್ಕರ್​ ಅವರನ್ನು ಹೊಲೆಯ ಅಂತ ಮಾತಾಡಿದ್ರಿ. ಆಗ ತಾನೇ ಸ್ವಾತಂತ್ರ್ಯ ಬಂದಿತ್ತು. ನೆಹರೂ ಹೆದರಿದರು. ಹಿಂದು ಕೋಡ್ ಬಿಲ್ ವಾಪಸ್ ಪಡೆಯಿರಿ ಅಂದ್ರು ನೆಹರೂ. ಅಂಬೇಡ್ಕರ್ ಅವರನ್ನು ನೀನ್ಯಾರು ಅಂತ ಕೇಳಿದವರು ಈಗ ಪರಿಶಿಷ್ಟ ಜಾತಿ ಅಂದ್ರೆ ಮೋದಿಯವರಿಗೆ ಬಹಳ ಪ್ರೀತಿ ಅಂತ ಹೇಳ್ತಿದ್ದಾರೆ ಎಂದು ತಿಳಿಸಿದರು.

ಕಂಗನಾಗೆ ತಿರುಗೇಟು
ಇನ್ನು ಕಂಗನಾ ಹೇಳಿಕೆಗೆ ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಹೊಟ್ಟೆಪಾಡಿಗಾಗಿ ಬಟ್ಟೆಬಿಚ್ಚಿ ಓಡಾಡೋರಿಗೇನು ಗೊತ್ತು ಗಾಂಧಿ ಮೌಲ್ಯ ಎಂದು ತಿರುಗೇಟು ನೀಡಿದ್ದಾರೆ. ಅಂಥವರ ಬಗ್ಗೆ ಮಾತನಾಡಿದರೆ ಇವರು ದೊಡ್ಡವರಾಗ್ತಾರೆ ಎಂದು ವ್ಯಂಗ್ಯವಾಡಿದ ರಮೇಶ್​ಕುಮಾರ್, ಸ್ವಾತಂತ್ರ್ಯ ಹೋರಾಟದ ಬಗ್ಗೆ ಕಂಗನಾ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

click me!