ದೇಶ ಒಗ್ಗೂಡಿಸಲು ಪಾದಯಾತ್ರೆ, ಚುನಾವಣೆಗಾಗಿ ಅಲ್ಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ತುಮಕೂರು(ಅ.08): ‘ನನ್ನನ್ನು ಅಪ್ರಯೋಜಕ ಎಂದು ಬಿಂಬಿಸಲು ಬಿಜೆಪಿ ಕೋಟಿ, ಕೋಟಿ ಹಣ ಖರ್ಚು ಮಾಡುತ್ತಿದೆ’ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾವು ಪಾದಯಾತ್ರೆ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದಾಗಿ ಪ್ರತಿಪಾದಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ನಿಮಿತ್ತ ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿಯ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ವಿರೋಧಿಸಿ ಯಾತ್ರೆಯನ್ನು ಮಾಡಲಾಗುತ್ತಿದೆಯೇ ಹೊರತು, 2024ರ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಯಾತ್ರೆ ನಡೆಸುತ್ತಿಲ್ಲ. ಕಾಂಗ್ರೆಸ್ ಕೋಮುವಾದಿ ಪಕ್ಷವಲ್ಲ. ಕೋಮುವಾದವನ್ನು ಬೆಂಬಲಿಸುವುದೂ ಇಲ್ಲ. ದೇಶದ ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದೊಯ್ಯುವ ಪಕ್ಷ ನಮ್ಮದು ಎಂದರು.
"ಯಾವ ಸಿಎಂ ಕೂಡ ಬೇಡ ಅನ್ನಲಾರ"; ರಾಜಸ್ಥಾನದಲ್ಲಿ ಅದಾನಿ ಹೂಡಿಕೆ ಬಗ್ಗೆ ರಾಹುಲ್ ಪ್ರತಿಕ್ರಿಯೆ
ಇದೇ ವೇಳೆ, ಆರ್‌ಎಸ್‌ಎಸ್ ವಿರುದ್ಧವೂ ಹರಿಹಾಯ್ದ ರಾಹುಲ್, ಆರ್‌ಎಸ್‌ಎಸ್‌ನವರು ಬ್ರಿಟಿಷರಿಗೆ ಸಹಾಯ ಮಾಡುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರ ಇಲ್ಲವೇ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷ ಬ್ರಿಟೀಷರ ವಿರುದ್ಧ ಹೋರಾಡಿತ್ತು. ಇದೇ ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್‌ಗೂ ಇರುವ ವ್ಯತ್ಯಾಸ ಎಂದರು.
ಪಿಎಫ್‌ಐ ನಿಷೇಧ ಸ್ವಾಗತಾರ್ಹ:
ದೇಶದಲ್ಲಿ 5 ವರ್ಷ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿದ ರಾಹುಲ್, ದ್ವೇಷ ಸಾಧಿಸುವ ವ್ಯಕ್ತಿ ಮತ್ತು ಸಂಘಟನೆಯನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದರು. ಇದೇ ವೇಳೆ, ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ನಾವು ಹಸ್ತಕ್ಷೇಪ ನಡೆಸುವುದಿಲ್ಲ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದವರು ಗಾಂಧಿ ಕುಟುಂಬದ ಕೈಗೊಂಬೆಯಾಗಿ ಇರುವುದಿಲ್ಲ. ಅವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಗಾಂಧಿ ಕನಸು ನನಸಿಗಾಗಿ ಯಾತ್ರೆ: ಜಿ.ಪರಮೇಶ್ವರ್
ತುಮಕೂರು ಜಿಲ್ಲೆಗೆ ಪಾದಯಾತ್ರೆ ಪ್ರವೇಶ
ರಾಹುಲ್ ಗಾಂಧಿ ಅವರ ಪಾದಯಾತ್ರೆ ಶನಿವಾರ ಬೆಳಿಗ್ಗೆ ‘ಕಲ್ಪತರು ನಾಡು’ ತುಮಕೂರು ಜಿಲ್ಲೆಗೆ ಆಗಮಿಸಿತು. ಮಾಯಸಂದ್ರದಿಂದ ಬಾಣಸಂದ್ರದವರೆಗೆ ಸುಮಾರು 25 ಕಿ.ಮೀ.ಗಳಷ್ಟುದೂರ ಸಾಗಿತು. ಶುಕ್ರವಾರ ರಾತ್ರಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್, ಶನಿವಾರ ಬೆಳಗ್ಗೆ 6.30ಕ್ಕೆ ತುರುವೇಕೆರೆ ತಾಲೂಕಿನ ಮಾಯಸಂದ್ರಕ್ಕೆ ಆಗಮಿಸಿದರು. ಪೂರ್ಣಕುಂಭ ಕಳಸ ಹೊತ್ತ ಮಹಿಳೆಯರು ರಾಹುಲ್ ಅವರನ್ನು ಸ್ವಾಗತಿಸಿ, ಯಾತ್ರೆಗೆ ಶುಭ ಕೋರಿದರು.
ಮಾಯಸಂದ್ರದಿಂದ ಹೊರಟ ಪಾದಯಾತ್ರೆಯಲ್ಲಿ ಸುರ್ಜೇವಾಲಾ, ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು, ರಾಹುಲ್ ಜೊತೆ ಹೆಜ್ಜೆ ಹಾಕಿದರು. ಬಳಿಕ, ಯಡಗನಕಟ್ಟೆಸಮೀಪ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಎಂಬುವರ ಮನೆಗೆ ತೆರಳಿದ ರಾಹುಲ್, ಅಲ್ಲಿಯೇ ಚಹಾ ಸೇವಿಸಿದರು. ಬಳಿಕ, ಪಾದಯಾತ್ರೆ ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯ ತಲುಪಿತು. ಅಲ್ಲಿ ಬೆಳಗಿನ ಉಪಹಾರ ಸೇವಿಸಿದ ರಾಹುಲ್, ಬಳಿಕ, ತೆಂಗು-ಅಡಕೆ ಬೆಳೆಗಾರರೊಂದಿಗೆ ಸಂವಾದ ನಡೆಸಿ, ರೈತರ ಅಳಲು ಆಲಿಸಿದರು. ಬಳಿಕ, ಮಧ್ಯಾಹ್ನದ ಭೋಜನ ಸೇವಿಸಿ, ಬಾಣಸಂದ್ರಕ್ಕೆ ತೆರಳಿದರು. ಬಾಣಸಂದ್ರದ ವಿಎಎಸ್‌ಎಸ್‌ಜೆಸಿ ಶಾಲೆಯಲ್ಲಿ ರಾತ್ರಿ ಅವರು ವಾಸ್ತವ್ಯ ಹೂಡಿದರು.