* ಜೆಡಿಎಸ್ ಸೇರುವಂತೆ ಬೆಂಬಲಿಗರಿಂದ ಒತ್ತಾಯ
* ಕೋಲಾರ ಜಿಲ್ಲೆಯಲ್ಲಿ 30 ವರ್ಷಗಳ ರಾಜಕಾರಣ ಮಾಡಿದ ಮುನಿಯಪ್ಪ
* ರಾಜಕೀಯ ಕಡುವೈರಿಗಳು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅಸಮಾಧಾನ ಸ್ಫೋಟ
ಕೋಲಾರ(ಜು.05): ತಮ್ಮ ರಾಜಕೀಯ ಕಡುವೈರಿಗಳು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮುನಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ನಡೆ ಇದೀಗ ತೀವ್ರ ಕುತೂಹಲ ಮೂಡಿಸಿದೆ. ಮುನಿಯಪ್ಪ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್‌ಗೆ ವಲಸೆ ಹೋಗಲಿದ್ದಾರೆಂಬ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ.
ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಹಾಗೂ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಮುನಿಯಪ್ಪ ಅವರ ವಿರೋಧದ ನಡುವೆಯೂ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿರುವುದು ಹಿರಿಯ ಮುಖಂಡ ಹಾಗೂ ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
Council Election Result : ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿ ಸಂಸದರ ಒಳ ಒಪ್ಪಂದ
ಜಿಲ್ಲೆಯಲ್ಲಿ 30 ವರ್ಷಗಳ ರಾಜಕಾರಣ ಮಾಡಿದ ಮುನಿಯಪ್ಪನವರನ್ನು ಹೈಕಮಾಂಡ್ ಈ ರೀತಿ ನಡೆಸಿಕೊಳ್ಳಬಾರದಾಗಿತ್ತು. ಮುಂದಿನ ವಿಧಾನಸಭಾ ಚುನಾವಣೆ ಒಳಗಾಗಿ ಕೆ.ಎಚ್.ಮುನಿಯಪ್ಪ ಅವರು ಜೆಡಿಎಸ್‌ಗೆ ಸೇರಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ದೇವೇಗೌಡ ಜೊತೆ ಮಾತುಕತೆ?:
ಈಗಾಗಲೇ ಮುನಿಯಪ್ಪನವರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳುವಂತೆ ಜಿಲ್ಲಾ ಜೆಡಿಎಸ್ ಮುಖಂಡರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈಗಾಗಲೇ ಮುನಿಯಪ್ಪ ನವರ ಜೊತೆ ದೇವೇಗೌಡರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.