ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಂಧಾನದ ಮಾತಿನ ಬಳಿಕ ಕಾಂಗ್ರೆಸ್ ಹಿರಿಯ ನಾಯಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನ ಭೇಟಿ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ.
ಬೆಂಗಳೂರು, (ಡಿ.14): ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಕೇಂದ್ರದ ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಪಕ್ಷ ತೊರೆಯದಂತೆ ಮನವಿ ಮಾಡಿಕೊಂಡಿದ್ದಾರೆ.
ಆದರೂ ಇಂದು (ಸೋಮವಾರ) ಸಿ.ಎಂ.ಇಬ್ರಾಹಿಂ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ತೊರೆಯದಂತೆ ಹಿರಿಯ ನಾಯಕನ ಮನೆಗೆ ಹೋಗಿ ಮನವಿ ಮಾಡಿದ ಡಿಕೆಶಿ
ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರು ಅವರ ನಿವಾಸಕ್ಕೆ ಭೇಟಿ ನೀಡಿ ಇಬ್ರಾಹಿಂ ಜೊತೆ ಚರ್ಚೆ ಮಾಡಿ ಮತ್ತೆ ಜೆಡಿಎಸ್‌ಗೆ ವಾಪಸ್ ಬನ್ನಿ ಎಂದು ಆಹ್ವಾನ ಕೊಟ್ಟು ಬಂದಿದ್ದರು.
ಬಳಿಕ ಎಚ್ಚೆತ್ತ ಡಿಕೆ ಶಿವಕುಮಾರ್ ಇಬ್ರಾಹಿಂ ಅವರನ್ನ ಭೇಟಿ ಮಾಡಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯಬೇಡಿ ಎಂದು ಮನವಿ ಮಾಡಿಕೊಂಡು ಬಂದಿದ್ದಾರೆ. ಆದರೂ ಇದ್ಯಾವುದಕ್ಕೂ ಕೇರ್ ಮಾಡದ ಸಿ.ಎಂ. ಇಬ್ರಾಹಿಂ ದೇವೇಗೌಡನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದು ನೋಡಿದ್ರೆ, ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತದೆ.
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ಸಿ ಎಂ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಅವರ ಮತ್ತು ಸಿದ್ದರಾಮಯ್ಯ ಮಧ್ಯೆ ಅಂತರ ಬೆಳೆದಿದೆ. ಸಿದ್ದರಾಮಯ್ಯ ಬಗ್ಗೆ ಇಬ್ರಾಹಿಂ ಸಾಕಷ್ಟು ಅಸಮಾಧಾನ ಹೊಂದಿದ್ದಾರೆನ್ನಲಾಗಿದೆ.
ಒಟ್ಟಿನಲ್ಲಿ ಡಿಕೆ ಶಿವುಮಾರ್ ಮಾತುಕತೆ ನಡೆಸಿದರೂ ಸಹ ಸಿ.ಎಂ. ಇಬ್ರಾಹಿಂ ಅವರು ದೇವೇಗೌಡರ ಹತ್ತಿರ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ.