ನಲಪಾಡ್ ಸೇರಿ ಎಲ್ಲ ಅಭ್ಯರ್ಥಿಗಳಿಗೆ ದೆಹಲಿಗೆ ಬರಲು ಹೈಕಮಾಂಡ್ ಬುಲಾವ್| ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶಕ್ಕೆ ತೆರೆ ಎಳೆಯಲು ನಿರ್ಧಾರ| ತೀರ್ಪು ಪ್ರಶ್ನಿಸಿ ಪಕ್ಷದ ಆಂತರಿಕ ಚುನಾವಣಾ ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸಿದ್ದ ಮೊಹಮ್ಮದ್ ನಲಪಾಡ್|
ಬೆಂಗಳೂರು(ಫೆ.13): ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ’ಕ್ಕೆ ನಡೆದ ಚುನಾವಣೆ ಫಲಿತಾಂಶ ಹುಟ್ಟುಹಾಕಿರುವ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಿರುವ ಹಿರಿಯ ನಾಯಕರು ಮೊಹಮ್ಮದ್ ನಲಪಾಡ್, ರಕ್ಷಾ ರಾಮಯ್ಯ ಸೇರಿದಂತೆ 7 ಮಂದಿ ಸ್ಪರ್ಧಿಗಳನ್ನು ಫೆ.20 ಹಾಗೂ 21 ದೆಹಲಿಗೆ ಆಹ್ವಾನಿಸಿದ್ದಾರೆ. ಹೀಗಾಗಿ ತಿರುವು ಪಡೆಯಲಿರುವ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಸದ್ಯ ಅತಿ ಹೆಚ್ಚು ಮತಗಳನ್ನು ಪಡೆದಿದ್ದರೂ ಅನರ್ಹಗೊಂಡಿರುವ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹಾಗೂ ವಿಜೇತರಾದ ರಕ್ಷಾ ರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿದೆ. ಎರಡೂ ಬಣದವರು ಹೈಕಮಾಂಡ್‌ಗೆ ದೂರು ಕೊಂಡೊಯ್ದಿದ್ದಾರೆ. ಚಲಾವಣೆಯಾದ ಮತಗಳ ಪೈಕಿ 48 ಸಾವಿರ ಮತಗಳು ಅಪಮೌಲ್ಯಗೊಂಡಿರುವುದು ಏಕೆ ಎಂಬುದು ಅಭ್ಯರ್ಥಿಗಳ ಪ್ರಶ್ನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಅಪಮೌಲ್ಯಗೊಳಿಸಿರುವುದರಿಂದ ಫಲಿತಾಂಶದ ಮೇಲೆ ಪರಿಣಾಮವಾಗಿದೆ ಎಂಬುದು ಆರೋಪ.
ರಾಹುಲ್ ಗಾಂಧಿಗೆ ‘ಫಿಂಗರ್ 4 ಅಜ್ಞಾನ’: ವಾಗ್ದಾಳಿ ನಡೆಸಿ ಪೇಚಿಗೆ ಸಿಲುಕಿದ ಕೈ ನಾಯಕ!
ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ಭಾರಿ ಪ್ರಮಾಣದಲ್ಲಿ ಮತಗಳು ಅಪಮೌಲ್ಯಗೊಂಡಿರುವುದು ಏಕೆ ಎಂಬುದನ್ನು ಅಭ್ಯರ್ಥಿಗಳಿಗೆ ವಿವರಿಸಲು ಫೆ.20 ಹಾಗೂ 21ರಂದು ಎಲ್ಲಾ ಅಭ್ಯರ್ಥಿಗಳನ್ನು ದೆಹಲಿಗೆ ಬರುವಂತೆ ಸೂಚನೆ ನೀಡಿದೆ. ಈ ಪ್ರಕ್ರಿಯೆಯಲ್ಲಿ ಮತಗಳ ಅಪಮೌಲ್ಯಕ್ಕೆ ನಿರ್ದಿಷ್ಟವಾದ ಕಾರಣ ಬಹಿರಂಗಕ್ಕೆ ಬರಲಿದೆ.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ 64,203 ಮತಗಳನ್ನು ಪಡೆದಿರುವ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅವರನ್ನು ಕಾಂಗ್ರೆಸ್ ಚುನಾವಣಾ ಸಮಿತಿ ಅನರ್ಹಗೊಳಿಸಿದೆ. 57,271 ಮತಗಳನ್ನು ಪಡೆದಿರುವ ರಕ್ಷಾ ರಾಮಯ್ಯ ಅವರನ್ನು ವಿಜೇತರಾಗಿ ಘೋಷಿಸಿ ‘ಯುವ ಕಾಂಗ್ರೆಸ್ ಅಧ್ಯಕ್ಷ’ರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಮೊಹಮ್ಮದ್ ನಲಪಾಡ್ ಪಕ್ಷದ ಆಂತರಿಕ ಚುನಾವಣಾ ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸಿದ್ದಾರೆ.
ರಕ್ಷಾ ರಾಮಯ್ಯ ಮತ್ತು ನಲಪಾಡ್ ಇಬ್ಬರೂ ತಮಗೆ ಹೆಚ್ಚು ಮತಗಳು ಬರಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಅನರ್ಹಗೊಂಡಿರುವ 27 ಸಾವಿರ ಮತಗಳಲ್ಲಿ ನಮಗೆ ಬರಬೇಕಾದ ಮತಗಳ ಸಂಖ್ಯೆ ಹೆಚ್ಚಿದೆ ಎಂಬುದು ಇಬ್ಬರ ವಾದ. ಹೀಗಾಗಿ ಯುವ ಕಾಂಗ್ರೆಸ್ ಆಂತರಿಕ ಚುನಾವಣಾ ಸಮಿತಿ ಹಾಗೂ ಹಿರಿಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭವ್ಯಾ, ರಕ್ಷಾ ರಾಮಯ್ಯ, ಎಚ್.ಎಸ್.ಮಂಜುನಾಥ್, ಮೊಹಮ್ಮದ್ ನಲಪಾಡ್ ಹ್ಯಾರಿಸ್, ಸಂದೀಪ್ ನಾಯಕ್, ಸಯ್ಯದ್ ಖಾಲಿದ್ ಅವರುಗಳನ್ನು ದೆಹಲಿಗೆ ಬರುವಂತೆ ಸೂಚಿಸಿದೆ.