
ಸೂರತ್ (ನ.28): ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಭಾನುವಾರ ನಡೆದ ಚುನಾವಣಾ ಪ್ರಚಾರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೂರತ್‌ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದ ಅವರು, ತಮ್ಮನ್ನು ತಾವೇ ಅಸ್ಪೃಶ್ಯರು ಎಂದು ಕರೆದುಕೊಂಡಿದ್ದರೆ, ಪ್ರಧಾನಮಂತ್ರಿ ಸುಳ್ಳುಗಳ ನಾಯಕ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ತಮ್ಮನ್ನು ತಾವು ಬಡವ ಎಂದು ಹೇಳಿಕೊಳ್ಳುತ್ತಾರೆ. ಅವರಿಗಿಂತ ಬಡವ ನಾನು. ನಾನೊಬ್ಬ ಅಸ್ಪೃಶ್ಯ ಎಂದು ಹೇಳುವ ಮೂಲಕ ದಲಿತ ಕಾರ್ಡ್ ಪ್ರಯೋಗ ಮಾಡಿದ್ದಾರೆ. ಸೂರತ್‌ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು ಇದು ಮಾತ್ರವಲ್ಲದೆ, ಮೋದಿ ಅವರ ಚಾಯ್‌ವಾಲಾ ಟ್ರೇಡ್‌ಮಾರ್ಕ್ ಬಗ್ಗೆಯೂ ಕಿಡಿಕಾರಿದ್ದಾರೆ. ನಿಮ್ಮಂತ ವ್ಯಕ್ತಿಗಳು ಪ್ರತಿ ಬಾರಿಯೂ ತಾನೊಬ್ಬ ಬಡವ ಎನ್ನುವ ರೀತಿಯಲ್ಲಿ ಮಾತನಾಡುತ್ತೀರಿ. ನಾನೂ ಕೂಡ ಬಡವ. ಬಡವರಲ್ಲಿಯೇ ಬಡವ ನಾನು. ನಾನು ಅಸ್ಪೃಶ್ಯರ ಕಡೆಯಲ್ಲಿ ಬರುತ್ತೇವೆ. ಪ್ರಧಾನಿಗಳೇ, ನೀವು ಮಾಡಿರೋ ಚಹಾವನ್ನು ಕನಿಷ್ಠ ಪಕ್ಷ ಯಾರಾದರೂ ಕುಡೀತಾರೆ. ಆದರೆ, ನಾವು ಮಾಡಿರೋ ಚಹಾವನ್ನು ಯಾರೂ ಕುಡಿಯೋದೇ ಇಲ್ಲ. ಇಷ್ಟೆಲ್ಲಾ ಇದ್ದರೂ ನೀವು ಬಡವ ಎನ್ನುತ್ತೀರಿ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮೋದಿ ಹಾಗೂ ಅಮಿತ್ ಶಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, 'ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಹಳ ಬಾರಿ ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆ. ಅವರು ಕಳೆದ 70 ವರ್ಷದಲ್ಲಿ ಯಾವುದೇ ಕೆಲಸ ಮಾಡದೇ ಇದ್ದಲ್ಲಿ, ಇಂದು ನೀವು ಅನುಭವಿಸುತ್ತಿರುವ ಸಂವಿಧಾನ ಇರುತ್ತಿರಲಿಲ್ಲ. ಇದನ್ನೆಲ್ಲಾ ಹೇಳುವ ಮೂಲಕ ನೀವು ಜನರಿಂದ ಸಿಂಪತಿ ಗಿಟ್ಟಿಸಿಕೊಳ್ಳಬಹುದು ಎನ್ನುವ ಪ್ರಯತ್ನದಲ್ಲಿದ್ದರೆ ಈಗಲೇ ಬಿಟ್ಟು ಬಿಡಿ. ಈಗ ಜನರು ಜಾಣರಾಗಿದ್ದಾರೆ. ನಿಮ್ಮ ಮಾತನ್ನು ಈಗಲೂ ನಂಬಲು ಅವರೇನು ಮೂರ್ಖರಲ್ಲ. ನಿಮ್ಮ ಸುಳ್ಳುಗಳು ಗೊತ್ತಾಗಿವೆ. ನೀವು ಸುಳ್ಳಿನ ನಾಯಕ. ಇದೆಲ್ಲದರ ಮೇಲೆ ಅವರು, ಕಾಂಗ್ರೆಸ್ ಪಕ್ಷದ ನಾಯಕರೇ ದೇಶವನ್ನು ಲೂಟಿ ಮಾಡುತ್ತಾರೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೋದಿ ಹಾಗೂ ಅಮಿತ್ ಶಾ ಅಲ್ಲದೆ, ಗುಜರಾತ್‌ನಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧವೂ ಖರ್ಗೆ ಕಿಡಿಕಾರಿದ್ದಾರೆ. ಇಲ್ಲಿನ ಬಿಜೆಪಿ ಸರ್ಕಾರ ಬಡವರ ಭೂಮಿಯನ್ನು ಲೂಟಿ ಮಾಡುತ್ತಿದೆ. ಆದಿವಾಸಿಗಳಿಗೆ ಅವರ ಜಾಗ ನೀಡುತ್ತಿಲ್ಲ. ಇಲ್ಲಿನ ಭೂಮಿ, ನೀರು ಹಾಗೂ ಅರಣ್ಯವನ್ನು ನಾಶ ಮಾಡುತ್ತಿರುವವರು ಯಾರು? ಇಲ್ಲಿ ಸರ್ಕಾರದೊಂದಿಗೆ ಸಿರಿವಂತರು ಈ ನೆಲವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಒಡೆದ ಭಾರತವನ್ನು ಒಗ್ಗೂಡಿಸಲು ಜೋಡೋ ಯಾತ್ರೆ; ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ!
ಸಮಾವೇಶವಲ್ಲದೆ, ಸೋಮವಾರದ ಚುನಾವಣೆ ಸಭೆಯಲ್ಲೂ ಕಾಂಗ್ರೆಸ್ ನಾಯಕ, ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಗುಜರಾತ್‌ನಲ್ಲಿ ವಾರ್ಡ್‌ನಿಂದ ವಾರ್ಡ್‌ಗೆ ಪ್ರಚಾರ ಮಾಡುತ್ತಿದ್ದಾರೆ. 27 ವರ್ಷಗಳ ಕಾಲ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಿ, ಗೃಹ ಸಚಿವ ಹಾಗೂ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲಿ ಬಂದು, ದೊಡ್ಡ ದೊಡ್ಡ ಭಾಷಣ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದೆಲ್ಲದರ ಹಿಂದಿರುವುದು ಭಯ. ಗುಜರಾತ್‌ನಲ್ಲಿ ಬದಲಾವಣೆ ತನ್ನಿ ಎಂದರೆ ಅವರು ಸಿಎಂ ಅನ್ನು ಬದಲಾವಣೆ ಮಾಡುತ್ಥಾರೆ. ಕಳೆದ ಆರು ವರ್ಷದಲ್ಲಿ ಇಲ್ಲಿ ಮೂವರು ಸಿಎಂಗಳು ಬದಲಾಗಿದ್ದಾರೆ. ಇದರ ಅರ್ಥ ಏನೆಂದರೆ, ಇವರಿಗೆ ರಾಜ್ಯದ ಅಭಿವೃದ್ಧಿ ಮಾಡುವುದು ಎಂದಿಗೂ ಗುರಿಯಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರ ಸಂಪೂರ್ಣವಾಗಿ ಆರ್‌ಎಸ್‌ಎಸ್‌ಗೆ ಶರಣಾಗಿದೆ, ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ!
ಗುಜರಾತ್‌ಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ಗಿಂತ ದುಪ್ಪಟ್ಟು ಉದ್ಯೋಗ ನೀಡುವುದಾಗಿ ಪಕ್ಷ ಭರವಸೆ ನೀಡಿದೆ. ಬಿಜೆಪಿಯವರು 5 ವರ್ಷದಲ್ಲಿ 20 ಲಕ್ಷ ಉದ್ಯೋಗ ನೀಡುವುದಾಗಿ ಮಾತನಾಡಿದ್ದರೆ, ಕಾಂಗ್ರೆಸ್ 10 ಲಕ್ಷ ಉದ್ಯೋಗ ನೀಡುವುದಾಗಿ ಮಾತನಾಡಿದೆ. ಇದಲ್ಲದೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟಿ ನೀಡುವ ಭರವಸೆಯನ್ನೂ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.