ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡಾ ಬಿಜೆಪಿ ಜೊತೆಗೆ ಹೋಗಲ್ಲ ಎಂದಿದ್ದಾರೆ. ಹೀಗಿರುವಾಗ ಜೆಡಿಎಸ್, ಬಿಜೆಪಿಯಿಂದ ಕಾಂಗ್ರೆಸ್ ಸರ್ಕಾರ ಉರುಳಿಸಲು ಸಾಧ್ಯವೇ ಇಲ್ಲ. ಈ ಬಗ್ಗೆ ಸುಮ್ಮನೆ ಊಹಾಪೋಹ ಬೇಡ ಎಂದ ಸಕ್ಕರೆ ಸಚಿವ ಶಿವಾನಂದ ಪಾಟೀಲ
ವಿಜಯಪುರ(ಆ.01): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಿರ, ಸುಭದ್ರವಾಗಿದೆ. ಜೆಡಿಎಸ್-ಬಿಜೆಪಿಯಿಂದ ರಾಜ್ಯದಲ್ಲಿನ ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಸಾಧ್ಯವೇ ಇಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿಯವರಿಗೆ ಏನು ಮಾಡಿದರೂ ಕಾಂಗ್ರೆಸ್ ಸರ್ಕಾರ ಉರುಳಿಸಲು ಆಗಲ್ಲ. ಏಕೆಂದರೆ ಕಾಂಗ್ರೆಸ್ ಶಾಸಕರು 136 ಇದ್ದಾರೆ. ನಿಚ್ಚಳ ಬಹುಮತದಿಂದ ಅಧಿಕಾರಕ್ಕೇರಿದೆ. ಹೀಗಿದ್ದಾಗ ಜೆಡಿಎಸ್, ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಉರುಳಿಸುವ ಮಾತು ಹಾಸ್ಯಾಸ್ಪದ ಎಂದು ಹೇಳಿದರು.
VIJAYAPURA: ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 11.94 ಲಕ್ಷ ಪಡಿತರ ಸದಸ್ಯರಿಗೆ ಹಣ ಸಂದಾಯ!
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡಾ ಬಿಜೆಪಿ ಜೊತೆಗೆ ಹೋಗಲ್ಲ ಎಂದಿದ್ದಾರೆ. ಹೀಗಿರುವಾಗ ಜೆಡಿಎಸ್, ಬಿಜೆಪಿಯಿಂದ ಕಾಂಗ್ರೆಸ್ ಸರ್ಕಾರ ಉರುಳಿಸಲು ಸಾಧ್ಯವೇ ಇಲ್ಲ. ಈ ಬಗ್ಗೆ ಸುಮ್ಮನೆ ಊಹಾಪೋಹ ಬೇಡ ಎಂದರು. ಸಚಿವರ ಮೇಲೆ ಕೈ ಶಾಸಕರ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಿಎಲ್‌ಪಿ ಸಭೆಯಲ್ಲಿ ಯಾವುದೇ ಅಸಮಾಧಾನ ವ್ಯಕ್ತವಾಗಿಲ್ಲ. ಭಿನ್ನಾಭಿಪ್ರಾಯವೂ ಉಂಟಾಗಿಲ್ಲ. ಸಿಎಲ್‌ಪಿ ಸಭೆಯಲ್ಲಿ ಶಾಸಕರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ನಾವು ಆಂತರಿಕವಾಗಿ ಚರ್ಚೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಲ ಸಚಿವರ ದೆಹಲಿ ಭೇಟಿಗೂ ಈ ವಿಷಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಂತ್ರಿಮಂಡಲ ರಚನೆಯಾದ ಮೇಲೆ ನಾನು ನಮ್ಮ ಹೈಕಮಾಂಡ್ ಅನ್ನು ಭೇಟಿಯಾಗಿಲ್ಲ. ಬೆಂಗಳೂರಿಗೆ ರಾಹುಲ್ ಗಾಂಧಿ ಅವರು ಆಗಮಿಸಿದ ಸಂದರ್ಭದಲ್ಲಿ ಭೇಟಿಯಾಗಲು ಆಗಲಿಲ್ಲ. ಕೇರಳದ ಮಾಜಿ ಮುಖ್ಯಮಂತ್ರಿ ನಿಧನದ ಕಾರಣ ರಾಹುಲ್ ಭೇಟಿ ರದ್ದಾಯಿತು. ಈ ಕಾರಣದಿಂದ ಇದೀಗ ನಾವು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಸೇರಿದಂತೆ ಮತ್ತಿತರ ವರಿಷ್ಠರನ್ನು ಭೇಟಿಯಾಗಿ ಬರಬೇಕಿದೆ. ಸಚಿವ ಸಂಪುಟದಲ್ಲಿ ಇರುವ ಹಿರಿಯ ನಾಯಕರನ್ನು ಕೇಂದ್ರದ ವರಿಷ್ಠರು ಕರೆದಿದ್ದಾರೆ. ಆಳಂದ ಶಾಸಕ ಬಿ.ಆರ್.ಪಾಟೀಲ ಅವರ ಪತ್ರ ವಿಚಾರಕ್ಕೂ ನಮ್ಮ ದೆಹಲಿ ಭೇಟಿಗೂ ಯಾವುದೇ ಸಂಬಂಧವಿಲ್ಲ. ಅದು ಒಂದು ಕಾಕತಾಳೀಯ ಅಷ್ಟೆಎಂದು ತಿಳಿಸಿದರು.
ಶಾಸಕರಿಗೆ ಸಹಜವಾಗಿ ಕೆಲಸಗಳು ಆಗಬೇಕೆಂಬ ಒತ್ತಡ ಇರುತ್ತದೆ. ಹೊಸ ಸರ್ಕಾರ ಬಂದ ಮೇಲೆ ವರ್ಗಾವಣೆ ಬೇಡಿಕೆ ಇರುತ್ತದೆ. ವರ್ಗಾವಣೆ ವಿಚಾರದಲ್ಲಿ ಸಚಿವರು ಶೇ.6ರಷ್ಟು ಮಾತ್ರ ವರ್ಗಾವಣೆ ಮಾಡಬೇಕು ಎಂಬ ನಿಯಮದ ಕಾರಣ ಹೆಚ್ಚು ವರ್ಗಾವಣೆ ಮಾಡಲು ಆಗಿಲ್ಲ ಎಂದು ಹೇಳಿದರು.