ಅಥಣಿ ಕಾಂಗ್ರೆಸ್ ಪಕ್ಷದಲ್ಲಿ ಟಕೆಟ್‌ಗಾಗಿ ಈಗಾಗಲೇ ಗುದ್ದಾಟ ಜೋರಾಗಿದೆ. ಮಾಜಿ ಶಾಸಕರೊಬ್ಬರಿಗೆ ಟಿಕೆಟ್ ಅನುಮಾನ ಇರುವುದರಿಂದ ಈಗಾಗಲೇ ಭಿನ್ನಮತ ಶುರುವಾಗಿದೆ. ಟಕೆಟ್‌ಗಾಗಿ ಅರ್ಜಿ ಸಲ್ಲಿಸುವುದಕ್ಕೆ 2 ಲಕ್ಷ ಕಡ್ಡಾಯ ಮಾಡಿರುವುದು ನಿಷ್ಠಾವಂತರ ಅತೃಪ್ತಿಗೂ ಕಾರಣವಾಗಿದೆ.
ಸಿ.ಎ.ಇಟ್ನಾಳಮಠ
ಅಥಣಿ(ಡಿ.13): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.19ರಂದು ಅಥಣಿಗೆ ಆಗಮಿಸುತ್ತಿದ್ದು, ಈ ವೇಳೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿ ತಮಗೆ ಟಿಕೆಟ್ ನೀಡಬೇಕು ಎಂಬ ಸಂದೇಶ ರವಾನಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ದರಾಮಯ್ಯ ಸ್ವಾಗತಕೋರುವ ಕಟೌಟ್, ಬ್ಯಾನರ್‌ಗಳು ಪಟ್ಟಣದೆಲ್ಲೆಡೆ ರಾರಾಜಿಸುತ್ತಿವೆ.
ಅಥಣಿ ಕಾಂಗ್ರೆಸ್ ಪಕ್ಷದಲ್ಲಿ ಟಕೆಟ್‌ಗಾಗಿ ಈಗಾಗಲೇ ಗುದ್ದಾಟ ಜೋರಾಗಿದೆ. ಮಾಜಿ ಶಾಸಕರೊಬ್ಬರಿಗೆ ಟಿಕೆಟ್ ಅನುಮಾನ ಇರುವುದರಿಂದ ಈಗಾಗಲೇ ಭಿನ್ನಮತ ಶುರುವಾಗಿದೆ. ಟಕೆಟ್‌ಗಾಗಿ ಅರ್ಜಿ ಸಲ್ಲಿಸುವುದಕ್ಕೆ 2 ಲಕ್ಷ ಕಡ್ಡಾಯ ಮಾಡಿರುವುದು ನಿಷ್ಠಾವಂತರ ಅತೃಪ್ತಿಗೂ ಕಾರಣವಾಗಿದೆ. ಆದರೆ, ಅಥಣಿ ಮತಕ್ಷೇತ್ರದಲ್ಲಿ ಒಟ್ಟು 12 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಓರ್ವ ಪೊಲೀಸ್ ಅಧಿಕಾರಿ ತಮ್ಮ ಸ್ನೇಹಿತರ ಹೆಸರಿನ ಮೇಲೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. 12 ಜನರ ಆಶಾವಾದಿಗಳ ಪೈಕಿ ರಾಜ್ಯ ನಾಯಕರು ಈಗಾಗಲೇ ಸರ್ವೆಗಾಗಿ ಕೇವಲ ಆರು ಜನರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
Karnataka Assembly Elections 2023: ಗುಜರಾತ್ ಮಾದರಿಯಲ್ಲೇ ರಾಜ್ಯದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ
19ರಂದು ಚುನಾವಣೆಯ ಪ್ರಚಾರ ಆರಂಭವೆ?:
ಎಸ್.ಕೆ.ಬುಟಾಳೆ ಅವರು ತಮ್ಮ ಸ್ವಂತ ಖರ್ಚಿನಿಂದ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅದರ ಉದ್ಘಾಟನೆಯನ್ನು ಡಿ.19ರಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಡಾ.ಎಚ್.ಸಿ.ಮಹಾದೇವಪ್ಪ, ಜಮೀರ ಅಹಮ್ಮದ ಒಳಗೊಂಡು ಅನೇಕ ಘಟಾನುಘಟಿಗಳು ಭಾಗವಹಿಸಲಿದ್ದಾರೆ. ಇದರ ಸಂಗಡ ಎಸ್.ಕೆ.ಬುಟಾಳೆ ಅವರ ಕುಟುಂಬ ವರ್ಗದವರು ಮನೆ ಮನೆ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅದರಂತೆ ಕಳೆದ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಗಜಾನನ ಮಂಗಸೂಳಿ ಸೋತರು ಸಹ ಅವರು ಹಿರಿಯ ನಾಯಕರ ಸಂಗಡ ಒಳ್ಳೆಯ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ. ಧರೆಪ್ಪ ಠಕ್ಕನ್ನವರ ಅವರಿಗೆ ಟಿಕೆಟ್ ನೀಡಬೇಕು ಎಂದು ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಲಕ್ಷ್ಮೀ ಹೆಬ್ಬಾಳಕರ ಮೂಲಕ ಅವರ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ಬೆಳಗಾವಿ: ಬಿಜೆಪಿ ಬ್ಲಾಕ್ ಅಧ್ಯಕ್ಷ ಗಾದಿಗೆ ಗುದ್ದಾಟ..!
ಬಿಜೆಪಿ ಭಿನ್ನಮತ ಕಾಂಗ್ರೆಸ್ ಗೆಲವಿಗೆ ಲಾಭವಾಗುವುದೆಂಬ ಹಗಲು-ಕನಸು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಆಶಾವಾದ ತುಂಬಿದೆ. ಸ್ಥಳೀಯವಾಗಿ ಬಿಜೆಪಿ ನೀಡುವ ಟಿಕೆಟ್ ಆಧಾರದ ಮೇಲಿಂದಲೂ ಕಾಂಗ್ರೆಸ್ ನಾಯಕರು ಲಾಭ ನಷ್ಟದ ಲೆಕ್ಕಾಚಾರ ಆರಂಭಿಸಿದ್ದಾರೆ.
ಯಾರ ಇದ್ದಾರೆ ರೇಸ್‌ನಲ್ಲಿ?
ಕಾಂಗ್ರೆಸ್ ಟಿಕೆಟ್‌ಗಳ ಆಕಾಂಕ್ಷಿಗಳಲ್ಲಿ ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳೆ, ಧರೇಪ್ಪ ಟಕ್ಕನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಶಿವು ಗುಡ್ಡಾಪೂರ, ಬಸವರಾಜ ಬುಟಾಳೆ ಇದ್ದಾರೆ. ಇವರ ಪೈಕಿ ನೇರಾನೇರ ಸ್ಪರ್ಧೆ ನಡೆದಿರುವುದು ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳೆ, ಧರೆಪ್ಪ ಟಕ್ಕನ್ನವರ ನಡುವೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾರ ಮೇಲೆ ಒಲವು ತೋರಲಿದೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.