ಇನ್ನು ಮೇಲ್ಮನೆ ಕದನ ಭರಾಟೆ: 7 ಸ್ಥಾನಗಳಿಗೆ ಡಜನ್‌ ಆಕಾಂಕ್ಷಿಗಳು..!

By Kannadaprabha News  |  First Published May 22, 2024, 7:41 AM IST

ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ಜೂ.13ಕ್ಕೆ ಚುನಾವಣೆ ಘೋಷಣೆಯಾಗಿರುವ ಕಾರಣ ರಾಜಕಾರಣಿಗಳು ಇನ್ನು ಅತ್ತ ಗಮನ ಕೇಂದ್ರೀಕರಿಸುವಂತಾಗಿದೆ. ಈ ನಡುವೆ, ಚುನಾವಣೆಯಲ್ಲಿ ಅಭ್ಯರ್ಥಿಗಳಾಗಲು ಪೈಪೋಟಿ ಆರಂಭವಾಗಿದ್ದರೆ, ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗ್ಗೆ ಪಕ್ಷಗಳಲ್ಲಿ ತೆರೆಮರೆಯಲ್ಲಿ ಚರ್ಚೆ ಶುರುವಾಗಿದೆ. 


ಬೆಂಗಳೂರು(ಮೇ.22):  ಲೋಕಸಭೆ ಚುನಾವಣೆ ಮುಗಿಸಿ ವಿಧಾನಪರಿಷತ್ತಿನ ಶಿಕ್ಷಕರ, ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ವ್ಯಸ್ತರಾಗಿರುವ ರಾಜ್ಯದ ರಾಜಕೀಯ ನಾಯಕರಿಗೆ ಮತ್ತೊಂದು 'ಪರೀಕ್ಷೆ' ಬಂದಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ಜೂ.13ಕ್ಕೆ ಚುನಾವಣೆ ಘೋಷಣೆಯಾಗಿರುವ ಕಾರಣ ರಾಜಕಾರಣಿಗಳು ಇನ್ನು ಅತ್ತ ಗಮನ ಕೇಂದ್ರೀಕರಿಸುವಂತಾಗಿದೆ. ಈ ನಡುವೆ, ಚುನಾವಣೆಯಲ್ಲಿ ಅಭ್ಯರ್ಥಿಗಳಾಗಲು ಪೈಪೋಟಿ ಆರಂಭವಾಗಿದ್ದರೆ, ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗ್ಗೆ ಪಕ್ಷಗಳಲ್ಲಿ ತೆರೆಮರೆಯಲ್ಲಿ ಚರ್ಚೆ ಶುರುವಾಗಿದೆ. 

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ತಾನು ಆಯ್ಕೆ ಮಾಡಲು ಸಾಧ್ಯವಿರುವ ಏಳು ಸ್ಥಾನಗಳಿಗೆ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕತ್ವದ ಮಟ್ಟದಲ್ಲಿ ಯಾವುದೇ ಪ್ರಕ್ರಿಯೆ ಇನ್ನೂ ಆರಂಭಗೊಳ್ಳದಿದ್ದರೂ ಡಜನ್‌ಗಟ್ಟಲೇ ಆಕಾಂಕ್ಷಿಗಳು ಸ್ಥಾನ ಗಿಟ್ಟಿಸಲು ಭರ್ಜರಿ ಪೈಪೋಟಿ ನಡೆಸತೊಡಗಿದ್ದಾರೆ.

Tap to resize

Latest Videos

ಬಿಜೆಪಿಗೆ ಸೆಡ್ಡು ಹೊಡೆದ ರಘುಪತಿ ಭಟ್‌ಗೆ ಈಶ್ವರಪ್ಪ ಬೆಂಬಲ

ವಿಧಾನಪರಿಷತ್ತಿನ ಹಾಲಿ 11 ಸದಸ್ಯರ ಅವಧಿ ಮುಕ್ತಾಯಗೊಂಡಿದ್ದು, ಚುನಾವಣಾ ಆಯೋಗವು ಈ ಸ್ಥಾನಗಳಿಗೆ ಜೂ.13 ರಂದು ಚುನಾವಣೆ ನಿಗದಿಪಡಿಸಿದೆ. ಕಾಂಗ್ರೆಸ್ ವಿಧಾನಸಭೆಯಲ್ಲಿ ತಾನು ಹೊಂದಿರುವ ಸದಸ್ಯ ಬಲದ ಆಧಾರದ ಮೇಲೆ 11 ಸ್ಥಾನಗಳ ಪೈಕಿ ಏಳರಲ್ಲಿ ಸುಲಭ ಜಯ ಸಾಧಿಸಲಿದೆ. ಹೀಗಾಗಿ ಏಳು ಸ್ಥಾನಗಳಿಗಾಗಿ ಡಜನ್ ಗಟ್ಟಲೇ ನಾಯಕರು ಪೈಪೋಟಿ ನಡೆಸಿದ್ದಾರೆ. ಈ ಎಲ್ಲರ ಪೈಕಿ ಸ್ಥಾನ ನಿಕ್ಕಿಯಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಮಾತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರ ವರುಣವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟ ಸಂದರ್ಭದಲ್ಲಿ ಯತೀಂದ್ರ ಅವರಿಗೆ ವಿಧಾನಪರಿಷತ್ ಸ್ಥಾನ ನೀಡುವ ವಾಗ್ದಾನ ಮಾಡಲಾಗಿತ್ತು.

ಅದರಂತೆ, ಜೂನ್ ನಲ್ಲಿ ತೆರವಾಗಲಿರುವ ಸ್ಥಾನಗಳ ಪೈಕಿ ಒಂದು ಸ್ಥಾನ ಯತೀಂದ್ರ ಅವರಿಗೆ ದೊರೆಯುವುದು ಶತಃಸಿದ್ಧ. ಇದೊಂದನ್ನು ಹೊರತುಪಡಿಸಿದರೆ ಉಳಿದ ಆರು ಸ್ಥಾನಗಳಿಗೆ ಯಾರ ಹೆಸರು ಸೂಚಿಸಬೇಕು ಎಂಬ ಬಗ್ಗೆ ರಾಜ್ಯ ನಾಯಕತ್ವವು ಇನ್ನೂ ಚರ್ಚೆಯನ್ನೇ ಆರಂಭಿಸಿಲ್ಲ. ಆದರೆ, ಆಕಾಂಕ್ಷಿಗಳು ತೆರೆಮರೆಯಲ್ಲಿ ಭರ್ಜರಿ ಪೈಪೋಟಿ ಆರಂಭಿಸಿದ್ದಾರೆ.

ಮೂಲಗಳ ಪ್ರಕಾರ ಈ ಆರು ಸ್ಥಾನಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗುವುದು ಮೇ 25ರ ನಂತರ. ಏಕೆಂದರೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮೇ 25ರವರೆಗೂ ಉತ್ತರ ಭಾರತದಲ್ಲಿ ನಡೆದಿರುವ ಚುನಾವಣಾ ಕಾರ್ಯದಲ್ಲಿ ವ್ಯಸ್ತರಾಗಿದ್ದು, ಮೇ 26ರಂದು ಅಥವಾ ಅನಂತರ ನಗರಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಸುರ್ಜೇವಾಲಾ ನಗರಕ್ಕೆ ಆಗಮಿಸುವ ಒಂದೆರಡು ದಿನ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭೆ ಸೇರಿ ಜಾತಿವಾರು ಅರ್ಹರ ಪಟ್ಟಿಯನ್ನು ಸಿದ್ಧಪಡಿಸುವ ಸಾಧ್ಯತೆಯಿದೆ.

ಇದೇ ಮೂಲಗಳ ಪ್ರಕಾರ ಈ ಬಾರಿ ಹಿಂದುಳಿದ ವರ್ಗಗಳಿಗೆ ಎರಡು ಸ್ಥಾನ, ಒಕ್ಕಲಿಗರು, ಕ್ರಿಶ್ಚಿಯನ್ನರು, ಮುಸ್ಲಿಮರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ತಲಾ ಒಂದು ಸ್ಥಾನ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಪೈಕಿ ಹಿಂದುಳಿದ ವರ್ಗಗಳಿಗೆ ಲಭ್ಯವಾಗಲಿರುವ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಈಗಾಗಲೇ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಿಕ್ಕಿಯಾಗಿದೆ. ಉಳಿದ ಒಂದು ಸ್ಥಾನಕ್ಕೆ ಸಚಿವ ಎಸ್.ಬೋಸರಾಜು ಸೇರಿದಂತೆ ಹಲವಾರು ಆಕಾಂಕ್ಷಿಗಳಿದ್ದಾರೆ.

ಬೋಸರಾಜು ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುವ ಇರಾದೆ ಹೈಕಮಾಂಡ್ ತೋರಿದರೆ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುವುದು ಅನಿವಾರ್ಯವಾಗುತ್ತದೆ. ಹೀಗಿದ್ದೂ ಹಿಂದುಳಿದ ವರ್ಗಗಳ ಕೋಟಾದಡಿಯಲ್ಲಿ ಸಿ.ಎಸ್. ದ್ವಾರಕಾನಾಥ್, ವಿ.ಎಸ್. ಸುದರ್ಶನ್, ಕೆಪಿಸಿಸಿ ಕಚೇರಿ ಕಾರ್ಯದರ್ಶಿಯೂ ಆಗಿರುವ ಹಾಗೂ 15 ಅಧ್ಯಕ್ಷರ ಅವಧಿಯಲ್ಲಿ ಕಾರ್ಯನಿರ್ವಹಿಸಿರುವ ಎಲ್‌. ನಾರಾಯಣ ಮೊದಲಾದವರು ಪೈಪೋಟಿ ನಡೆಸಿದ್ದಾರೆ.

ಇನ್ನು ಒಕ್ಕಲಿಗ ಕೋಟಾದಡಿಯಲ್ಲಿ ಕೆ.ಗೋವಿಂದರಾಜು ಅವರ ಹೆಸರು ಮುಂಚೂಣಿಯಲ್ಲಿದೆ. ಸತತವಾಗಿ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿರುವ ಕೆ.ಗೋವಿಂದರಾಜು ಅವರನ್ನು ಮೂರನೇ ಅವಧಿಗೂ ಮುಂದುವರೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತರೂ ಆದ ಕೆಪಿಸಿಸಿ ಕಾರ್ಯದರ್ಶಿ ವಿನಯ್ ಕಾರ್ತಿಕ್, ಹಿರಿಯ ನಾಯಕ ಬಿ.ಎಲ್. ಶಂಕರ್, ಅಪೆಕ್ಸ್‌ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ಪ್ರಯತ್ನ ನಡೆಸಿದ್ದಾರೆ.

ಕ್ರಿಶ್ಚಿಯನ್ ಸಮುದಾಯದಿಂದ ಐವಾನ್ ಡಿಸೋಜಾ, ಮುಸ್ಲಿಮರಿಂದ ಆಘಾ ಸುಲ್ತಾನ್, ಮಹಿಳೆಯರಿಂದ ಪುಷ್ಪಾ ಅಮರನಾಥ್, ಆರತಿ ಕೃಷ್ಣ, ರಾಣಿ ಸತೀಶ್ ಮೊದಲಾದವರು ಪೈಪೋಟಿ ನಡೆಸಿದ್ದಾರೆ.
ಈ ನಡುವೆ ಬ್ರಾಹ್ಮಣ ಸಮುದಾಯಕ್ಕೂ ಈ ಬಾರಿ ಅವಕಾಶ ನೀಡಬೇಕು ಎಂಬ ಒತ್ತಡ ನಿರ್ಮಾಣವಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ಕೆಪಿಸಿಸಿ ಕಾರ್ಯದರ್ಶಿ (ಆಡಳಿತ) ವಿಜಯ ಮುಳಗುಂದ ಅವರು ತೀವ್ರ ಪ್ರಯತ್ನ ನಡೆಸಿದ್ದಾರೆ.

ಶೆಟ್ಟರ್‌ ತೊರೆದ ಸ್ಥಾನ ಖಾಲಿ:

ಕಾಂಗ್ರೆಸ್‌ ಪಕ್ಷ ಸೇರಿ ವಿಧಾನಪರಿಷತ್ ಸದಸ್ಯರಾಗಿದ್ದ ಜಗದೀಶ್‌ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ಹಿಂತಿರುಗುವಾಗ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಂದ ತೆರವಾಗಿರುವ ಸ್ಥಾನಕ್ಕೆ ಶೀಘ್ರ ಉಪ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಈ ಸ್ಥಾನಕ್ಕೆ ಲಿಂಗಾಯತರಿಗೆ ಅವಕಾಶ ನೀಡಲು ಕಾಂಗ್ರೆಸ್ ನಾಯಕತ್ವ ಉದ್ದೇಶಿಸಿದೆ. ಹೀಗಾಗಿ ಲಿಂಗಾಯತ ಪೈಕಿ ಎಸ್. ಆರ್. ಪಾಟೀಲ್, ರಾಣಿ ಸತೀಶ್, ವಿ.ಎಸ್. ಆರಾಧ್ಯ ಹಾಗೂ ಬಿಜೆಪಿಯಿಂದ ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ ಕರಡಿ ಸಂಗಣ್ಣ ಅವರ ಹೆಸರು ಇದೆ.

ರೇಸಲ್ಲಿ ಯಾರ್‍ಯಾರು?

ಯತೀಂದ್ರ ಸಿದ್ದರಾಮಯ್ಯ । ಬೋಸರಾಜು । ಸಿ.ಎಸ್‌. ದ್ವಾರಕಾನಾಥ್‌ । ವಿ.ಎಸ್‌. ಸುದರ್ಶನ್‌ । ಎಲ್‌. ನಾರಾಯಣ । ಕೆ. ಗೋವಿಂದರಾಜು । ವಿನಯ್‌ ಕಾರ್ತಿಕ್‌ । ಬಿ.ಎಲ್‌. ಶಂಕರ್ । ಮಂಜುನಾಥ ಗೌಡ । ಐವಾನ್‌ ಡಿಸೋಜಾ । ಆಘಾ ಸುಲ್ತಾನ್ । ಪುಷ್ಪಾ ಅಮರನಾಥ್ । ಆರತಿ ಕೃಷ್ಣ । ರಾಣಿ ಸತೀಶ್ । ವಿಜಯ ಮುಳಗುಂದ

ಮೇ 25ರ ಬಳಿಕ ಪ್ರಕ್ರಿಯೆ ಚುರುಕು?

ಮೂಲಗಳ ಪ್ರಕಾರ, ಮೇಲ್ಮನೆ ಸ್ಥಾನಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗುವುದು ಮೇ 25ರ ನಂತರ. ಏಕೆಂದರೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮೇ 25ರವರೆಗೂ ಉತ್ತರ ಭಾರತದಲ್ಲಿ ನಡೆದಿರುವ ಚುನಾವಣಾ ಕಾರ್ಯದಲ್ಲಿ ವ್ಯಸ್ತರಾಗಿದ್ದು, ಮೇ 26ರಂದು ಅಥವಾ ಅನಂತರ ಬೆಂಗಳೂರಿಗೆ ಆಗಮಿಸಲಿದ್ದಾರೆ.

3 ಅಭ್ಯರ್ಥಿಗಳ ಆಯ್ಕೆ: ಇಂದು ಬಿಜೆಪಿ ಸಭೆ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತನಗೆ ಲಭ್ಯವಾಗುವ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬುಧವಾರ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಯಲಿದೆ.

ಕಳೆದ ವಿಧಾನಸಭಾ ಮತ್ತು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಿಗೆ ಈ ವಿಧಾನಪರಿಷತ್ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯ ಬಲವಾಗಿ ವ್ಯಕ್ತವಾಗುತ್ತಿದೆ.

ಎಲ್ಲ 6 ಪದವೀಧರ ಕ್ಷೇತ್ರಗಳಲ್ಲೂ ಜನತೆ ಕಾಂಗ್ರೆಸ್‌ ಬೆಂಬಲಿಸುವ ವಿಶ್ವಾಸ: ಮಧು ಬಂಗಾರಪ್ಪ

ಲಭ್ಯವಾಗುವ ಮೂರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಈಗ ನಿವೃತ್ತಿ ಹೊಂದುತ್ತಿರುವ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಲು ಒಲವು ವ್ಯಕ್ತವಾಗಿದೆ. ಸಂಘ ಪರಿವಾರ ಮೂಲದ ಹಾಗೂ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ರವಿಕುಮಾರ್ ಅವರು ಮೊದಲ ಬಾರಿಗೆ ಸದಸ್ಯರಾಗಿದ್ದರೂ ಉತ್ತಮ ಸಾಧನೆ ತೋರಿದ್ದಾರೆ ಎಂಬ ಮೆಚ್ಚುಗೆ ಪಕ್ಷದ ನಾಯಕರಲ್ಲಿದೆ. ಅಂತಿಮ ನಿರ್ಧಾರ ವರಿಷ್ಠರ ನಡೆ ಮೇಲೆ ಅವಲಂಬಿಸಿದೆ. ಈ ಸ್ಥಾನಗಳ ಮೇಲೆ ಪಕ್ಷದಲ್ಲಿ ಹಲವರು ಕಣ್ಣಿರಿಸಿದ್ದಾರೆ. ಪಕ್ಷದ ರಾಜ್ಯ ನಾಯಕರನ್ನು ಭೇಟಿ ಮಾಡಿ ಲಾಬಿಯನ್ನೂ ಆರಂಭಿಸಿದ್ದಾರೆ.

ಆದರೆ, ಇತ್ತೀಚಿನ ಬೆಳವಣಿಗೆ ಗಮನಿಸಿದರೆ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ರಾಜ್ಯ ಘಟಕದ ಶಿಫಾರಸ್ಸಿಗೆ ಹೈಕಮಾಂಡ್‌ ಮಣೆ ಹಾಕಿದ್ದು ಕಡಿಮೆಯೇ ಎನ್ನಬಹುದು. ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಹೆಸರುಗಳನ್ನು ಹೈಕಮಾಂಡ್‌ಗೆ ಕಳುಹಿಸಿದರೂ ವರಿಷ್ಠರು ಅದನ್ನು ಒಪ್ಪುವ ಭರವಸೆ ರಾಜ್ಯ ನಾಯಕರಲ್ಲಿ ಉಳಿದಿಲ್ಲ. ಆದರೂ ಔಪಚಾರಿಕ ಎಂಬಂತೆ ಸಭೆ ನಡೆಸಿ ಹೆಸರುಗಳನ್ನು ಶಿಫಾರಸು ಮಾಡಲು ಮುಂದಾಗಿದ್ದಾರೆ. ಒಂದು ಸ್ಥಾನಕ್ಕೆ ಮೂರು ಹೆಸರುಗಳಂತೆ ಮೂರು ಸ್ಥಾನಗಳಿಗೆ ಒಟ್ಟು ಒಂಭತ್ತು ಹೆಸರುಗಳನ್ನು ಬಿಜೆಪಿ ಹೈಕಮಾಂಡ್‌ಗೆ ರವಾನಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

click me!