ಬ್ಯಾಡಗಿ: ಸಿಎಂ ಹೇಳಿಕೆಯಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಗೊಂದಲ

By Kannadaprabha NewsFirst Published Feb 6, 2023, 2:19 PM IST
Highlights

ಪಕ್ಷದ ಕಾರ್ಯಕ್ರಮ ಅಲ್ಲದಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಹೇಳುವ ಮೂಲಕ ಟಿಕೆಟ್‌ ಆಕಾಂಕ್ಷಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದ್ದು, ಇದಕ್ಕೆ ಖುದ್ದಾಗಿ ಅವರೇ ಸ್ಪಷ್ಟೀಕರಣ ನೀಡುವಂತೆ ಮಾಜಿ ಶಾಸಕ ಸುರೇಶಗೌಡ ಪಾಟೀಲ ಆಗ್ರಹಿಸಿದರು.

ಬ್ಯಾಡಗಿ (ಫೆ.6) : ಪಕ್ಷದ ಕಾರ್ಯಕ್ರಮ ಅಲ್ಲದಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಹೇಳುವ ಮೂಲಕ ಟಿಕೆಟ್‌ ಆಕಾಂಕ್ಷಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದ್ದು, ಇದಕ್ಕೆ ಖುದ್ದಾಗಿ ಅವರೇ ಸ್ಪಷ್ಟೀಕರಣ ನೀಡುವಂತೆ ಮಾಜಿ ಶಾಸಕ ಸುರೇಶಗೌಡ ಪಾಟೀಲ ಆಗ್ರಹಿಸಿದರು.

ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಫೆ. 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಉದ್ಘಾಟನಾ ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬ್ಯಾಡಗಿಗೆ ಆಗಮಿಸಿದ್ದಾರೆ ಎಂದು ಭಾವಿಸಿದ್ದೆವು. ಆದರೆ ನಾವೆಲ್ಲ ತಿಳಿದುಕೊಂಡಂತೆ ಮಾಡದೇ ಮತ್ತೊಮ್ಮೆ ಬಳ್ಳಾರಿ ಅವರನ್ನು ಆಶೀರ್ವದಿಸುವಂತೆ ತಮ್ಮ ಭಾಷಣದಲ್ಲಿ ಹೇಳುವ ಮೂಲಕ ಬಿಜೆಪಿ ನಿಷ್ಠಾವಂತ ಕಾರ‍್ಯಕರ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದರು.

Mega Fight: ಸುರತ್ಕಲ್‌ನಲ್ಲಿ ಬಿಜೆಪಿಯ ಸಾಧನೆಗಳು ಏನು?: ಮಂಗಳೂರು ಉತ್ತರ ಕ್ಷೇತ್ರದ ನಾಯಕರು ಏನಂದ್ರು?

ಹೇಳಿಕೆ ಮತ್ತೊಮ್ಮೆ ಪರಿಶೀಲಿಸಿ

ಬೊಮ್ಮಾಯಿ ಅವರು ಯಾರ ಸೂಚನೆ ಮೇರೆಗೆ ಈ ಹೇಳಿಕೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಬೇಕು. ಬ್ಯಾಡಗಿ ಮತಕ್ಷೇತ್ರದಲ್ಲಿ ನನ್ನನ್ನೂ ಸೇರಿದಂತೆ ಸಿ.ಆರ್‌. ಬಳ್ಳಾರಿ, ಎಂ.ಎಸ್‌. ಪಾಟೀಲ, ಮುರಿಗೆಪ್ಪ ಶೆಟ್ಟರ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಈ ವಿಷಯವನ್ನು ಈಗಾಗಲೇ ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದೇವೆ. ಆದಾಗ್ಯೂ ಮುಖ್ಯಮಂತ್ರಿಗಳ ಹೇಳಿಕೆ ಬಿಜೆಪಿಯಲ್ಲಿ ನಮ್ಮ ಶಕ್ತಿಯನ್ನು ಪರಿಗಣಿಸಿಲ್ಲ ಎನಿಸುತ್ತಿದೆ. ಒಂದು ವೇಳೆ ಹೊಗಳುವ ಆತುರದಲ್ಲಿ ಹೇಳಿದ್ದಲ್ಲಿ ಕೂಡಲೇ ಮತ್ತೊಮ್ಮೆ ಪರಿಶೀಲಿಸಿ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಅಮಿತ್‌ಶಾಗೂ ಮಾನ್ಯತೆ ಸಿಗುತ್ತಿಲ್ಲ

ಬಿಜೆಪಿ ಸಿದ್ಧಾಂತ ಮೆಚ್ಚಿ ಬಹಳಷ್ಟುಜನರು ಪಕ್ಷಕ್ಕೆ ಸೇರುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ಟಿಕೆಟ್‌ ಹಂಚಿಕೆ ಮಾಡಲಾಗುತ್ತಿದ್ದು, ಈ ವಿಚಾರದಲ್ಲಿ ಗೌಪ್ಯತೆ ಕಾಪಾಡಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ ಶಾ ಟಿಕೆಟ್‌ ಹಂಚಿಕೆ ಕುರಿತು ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ರಾಜ್ಯದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ಗಾಳಿಗೆ ತೂರಿದ ಮುಖ್ಯಮಂತ್ರಿಗಳು ಬಹಿರಂಗ ಹೇಳಿಕೆ ನೀಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಶುರುವಾಯ್ತು 'ನಮೋ' ಮಂತ್ರ: ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಲು ಪ್ಲಾನ್

 

ಜಿಪಂ ಮಾಜಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮರಡೆಪ್ಪ ಹೆಡಿಯಾಲ, ಮಾಜಿ ಅಧ್ಯಕ್ಷ ಶಿವಯೋಗಿ ಶಿರೂರ, ನಿರ್ದೇಶಕ ಮಹದೇವ ಶಿಡೆನೂರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಪಾಟೀಲ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಬಸವರಾಜ ಛತ್ರದ, ಮಂಜುನಾಥ ಬಾರ್ಕಿ, ಈರಣ್ಣ ಬಣಕಾರ, ಗಣೇಶ ಅಚಲಕರ, ಮಾಜಿ ಅಧ್ಯಕ್ಷರಾದ ಮುರಿಗೆಪ್ಪ ಶೆಟ್ಟರ, ಶಂಭು ಬಿದರಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲೇಶ ಬಣಕಾರ, ಎಪಿಎಂಸಿ ಮಾಜಿ ನಿರ್ದೇಶಕ ವಿಜಯ ಮಾಳಗಿ, ಮುಖಂಡರಾದ ಪುಟ್ಟಪ್ಪ ಛತ್ರದ, ರುದ್ರಗೌಡ ಸೊಲಬಗೌಡ್ರ, ಅರುಣ ಪಾಟೀಲ, ಹೇಮಂತ ಸರವಂದ, ಚಂದ್ರು ಸಂಕಣ್ಣವರ ಇನ್ನಿತರರಿದ್ದರು.

click me!