
ಎಂಎಲ್‌ಎ ಚುನಾವಣೆಗೆ ಇನ್ನೂ ಎರಡು ವರ್ಷಕ್ಕೂ ಹೆಚ್ಚು ಅವಧಿ ಬಾಕಿಯಿರುವಾಗಲೇ ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಮತ್ತು ಜೆಡಿಎಸ್‌ನ ಹಾಲಿ ಶಾಸಕ ಎಂ.ಟಿ. ಕೃಷ್ಣಪ್ಪ ನಡುವಿನ ಅಭ್ಯರ್ಥಿ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಬೆಳಕಿಗೆ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ನಡುವೆ ಈಗಾಗಲೇ ಬಿರುಕು ಆರಂಭವಾಗಿದೆ. ಕ್ಷೇತ್ರದಲ್ಲಿ ಇಬ್ಬರೂ ನಾಯಕರು ತಮ್ಮದೇ ಅಭ್ಯರ್ಥಿ ಹಕ್ಕನ್ನು ಘೋಷಣೆ ಮಾಡುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲೂ ಗೊಂದಲಕ್ಕೆ ಕಾರಣವಾಗಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಮಸಾಲಾ ಜಯರಾಮ್, “ಮುಂದಿನ ದಿನಗಳಲ್ಲಿ ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೋ, ನಾನು ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದು ಸಹ ಅಷ್ಟೇ ಸತ್ಯ. ಯಾವುದೇ ಒತ್ತಡಕ್ಕೆ ಬಗ್ಗದೆ, ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ಕಾರ್ಯಕರ್ತರು ಆತಂಕಪಡಬೇಡಿ,” ಎಂದು ಹೇಳಿದರು. ಮುಂದುವರೆದು, “ನನಗೆ ರಾಜ್ಯ ಹಾಗೂ ಕೇಂದ್ರದ ನಾಯಕರು ಕರೆ ಮಾಡಿ ಮಾತನಾಡಿದ್ದಾರೆ. ಮುಂದೆ ನಾನು ಬಿಜೆಪಿ ಅಭ್ಯರ್ಥಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನನ್ನ ಕಾರ್ಯಕರ್ತರು ಎದೆಗುಂದಬಾರದು, ಎಂದು ತಮ್ಮ ದೃಢ ನಿಲುವನ್ನು ವ್ಯಕ್ತಪಡಿಸಿದರು.
ಅದಕ್ಕೆ ಅವರು ಮತಗಳ ಗಣತಿ ನೀಡುತ್ತಾ, ನಾನು ಮೂರು ಬಾರಿ ಸ್ಪರ್ಧಿಸಿದ್ದರೂ ಯಾವತ್ತೂ 60 ಸಾವಿರಕ್ಕಿಂತ ಕಡಿಮೆ ಮತಗಳನ್ನು ಪಡೆದಿಲ್ಲ. ಕೆಜೆಪಿಯಲ್ಲಿ ನಿಂತಾಗಲೂ ನನಗೆ 60 ಸಾವಿರ ಮತಗಳು ಬಿದ್ದಿದ್ದವು. ಅದಾದ ಬಳಿಕ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು 63 ಸಾವಿರ ಮತಗಳನ್ನು ಪಡೆದಿದ್ದೇನೆ. ಸೋತ ಸಂದರ್ಭದಲ್ಲಿ ಸಹ ನನಗೆ 60 ಸಾವಿರ ಮತಗಳು ಬಿದ್ದಿವೆ. ಯಾವತ್ತೂ 60 ಸಾವಿರಕ್ಕಿಂತ ಕಡಿಮೆ ಮತ ನನಗೆ ಬಂದಿಲ್ಲ,” ಎಂದರು.
ತಮ್ಮ ಕಾರ್ಯಕರ್ತರಿಗೆ ಉತ್ಸಾಹ ತುಂಬಿದ ಅವರು, “ನಮ್ಮ ಕಾರ್ಯಕರ್ತರು ಹೋರಾಟ ಮಾಡಬೇಕು. ನಾನೂ ನಿಮ್ಮ ಜೊತೆ ಇರುತ್ತೇನೆ. ಮುಂದಿನ ದಿನಗಳಲ್ಲಿ ನಾನು ಮತ್ತೆ ಅಭ್ಯರ್ಥಿಯಾಗುತ್ತೇನೆ. ನಮ್ಮ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ. ನಾವು ಸರ್ಕಾರ ರಚಿಸುತ್ತೇವೆ ಎಂಬುದು ಖಚಿತ. ಕಾರ್ಯಕರ್ತರ ಶಕ್ತಿ ಬಿಜೆಪಿಗೆ ತುಂಬಾ ಅಗತ್ಯ. ನನ್ನನ್ನು ಗೆಲ್ಲಿಸಿ ಆಶೀರ್ವದಿಸಬೇಕು. ಇಂದಿನಿಂದಲೇ ಹೋರಾಟ ಪ್ರಾರಂಭಿಸಿ,” ಎಂದು ಕರೆ ನೀಡಿದರು. ಈ ಮೂಲಕ ತುರುವೇಕೆರೆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಬಿಜೆಪಿ-ಜೆಡಿಎಸ್ ನಡುವಿನ ರಾಜಕೀಯ ಕಸರತ್ತು ಈಗಾಗಲೇ ಆರಂಭವಾಗಿರುವುದು ಸ್ಪಷ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.